ವಂದೇ ಭಾರತ ರೈಲು ಸೇವೆ ಆರಂಭಿಸಿ; ಸಂಸದರಿಗೆ ಸುನೀಲಗೌಡ ಪಾಟೀಲ ಮತ್ತೆ ಪತ್ರ

MLC SUNILGOUDA PATIL
MLC SUNILGOUDA PATIL
Published on

ವಿಜಯಪುರ: ಐತಿಹಾಸಿಕ ವಿಜಯಪುರ ಜಿಲ್ಲೆ ಮತ್ತು ಬೆಂಗಳೂರು ಮಧ್ಯೆ ವಂದೇ ಭಾರತ ರೈಲು ಸೇವೆ ಪ್ರಾರಂಭಿಸಲು ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಮತ್ತೆ ಸಂಸದ ರಮೇಶ ಜಿಗಜಿಣಗಿ ಅವರಿಗೆ ಪತ್ರ ಬರೆದಿದ್ದಾರೆ.

ಈಗಾಗಲೇ ಒಮ್ಮೆ ಪತ್ರ ಮುಖೇನ ಮನವಿ ಮಾಡಿರುವ ಸುನೀಲಗೌಡ ಪಾಟೀಲ ಇದೀಗ ಮತ್ತೊಮ್ಮೆ ಪತ್ರ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ.

ಸತತ 7ನೇ ಬಾರಿಗೆ ಸಂಸದರಾಗಿರುವ ರಮೇಶ ಜಿಗಜಿಣಗಿ ಅವರಿಗೆ 2023 ನ. 24 ರಂದು ಪತ್ರ ಬರೆದು ಈ ಕುರಿತು ಮನವಿ ಮಾಡಿದ್ದೆ. ಆದರೆ, ಅವರು ಸ್ಪಂದಿಸಲಿಲ್ಲ. ಜಿಲ್ಲೆಯ ಮತದಾರರು ತಮ್ಮನ್ನು ಪುನರಾಯ್ಕೆ ಮಾಡಿದ್ದು, ತಮ್ಮ ಪರ ಮತ ಹಾಕಿರುವ ಮತದಾರರ ಋಣ ತೀರಿಸುವ ಸಲುವಾಗಿಯಾದರೂ ವಂದೇ ಭಾರತ ರೈಲು ಸೇವೆ ಪ್ರಾರಂಭಿಸಲು ಶ್ರಮಿಸಬೇಕೆಂದು ತಿಳಿಸಿದ್ದಾರೆ.

ನೆರೆಯ ಕಲಬುರಗಿ, ಬೆಳಗಾವಿ, ಧಾರವಾಡ ಸೇರಿದಂತೆ ಎಲ್ಲ ಜಿಲ್ಲೆಗಳಿಂದ ಈ ರೈಲು ಸೇವೆ ಲಭ್ಯವಿದೆ. ಆದರೆ, ಅಖಂಡ ವಿಜಯಪುರ ಜಿಲ್ಲೆಯಿಂದ ಇನ್ನೂ ವಂದೇ ಭಾರತ ರೈಲು ಪ್ರಾರಂಭವಾಗಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಉಭಯ ಜಿಲ್ಲೆಗಳ ಜನರಿಂದ ಸಾಕಷ್ಟು ಬೇಡಿಕೆ ಬರುತ್ತಿದ್ದರೂ ನೀವು ಕಣ್ಮುಚ್ಚಿ ಕುಳಿತಿರುವಂತಿದೆ. ಸಂಸತ್ತಿನಲ್ಲಿ ಒಂದೂ ಪ್ರಶ್ನೆಯನ್ನು ಕೇಳದ ತಾವುಗಳು ಈ ರೈಲು ಸೇವೆ ಪ್ರಾರಂಭಿಸಲು ಕ್ರಮ ಕೈಗೊಂಡರೆ ಉಭಯ ಜಿಲ್ಲೆಗಳಲ್ಲಿ ತಮ್ಮ ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ. ಈ ರೈಲು ಸೇವೆ ಪ್ರಾರಂಭವಾದ ತಕ್ಷಣ ಸಂಸದರಾದ ರಮೇಶ ಜಿಗಜಿಣಗಿ ಅವರನ್ನು ವಿಜಯಪುರ ಜಿಲ್ಲೆಯ ಜನರ ಪರವಾಗಿ ನಾಗರಿಕ ಸನ್ಮಾನ ಮಾಡಲಾಗುವುದು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಈಗ ವಿಜಯಪುರದಿಂದ ಬೆಂಗಳೂರಿಗೆ ಹೋಗಲು ರೈಲು ಸೇವೆ ಇದ್ದರೂ ಈ ರೈಲುಗಳು ಸರಿಯಾದ ಸಮಯಕ್ಕೆ ನಿಗದಿತ ಸ್ಥಳಗಳನ್ನು ತಲುಪಲಾಗುತ್ತಿಲ್ಲ. ಬೆಂಗಳೂರಿಗೆ ಜಿಲ್ಲೆಯ ಜನರು ದಿನನಿತ್ಯದ ವ್ಯವಹಾರ ಸಂಬಂಧಿ ಮತ್ತು ಸರ್ಕಾರಿ ಕಚೇರಿ ಕೆಲಸಗಳಿಗಾಗಿ ಬೆಂಗಳೂರಿಗೆ ಹೋಗಿ- ಬರುವ ಜನರಿಗೆ ತೊಂದರೆಯಾಗಿದೆ. ಅಲ್ಲದೇ, ಬೆಂಗಳೂರಿನಿಂದ ವಿಜಯಪುರಕ್ಕೆ ಬರುವ ರೈಲುಗಳ ಸಂಚಾರ ಸಮಯವೂ ಹೆಚ್ಚಾಗಿದೆ. ವಿಜಯಪುರ ಜಿಲ್ಲೆಯಿಂದ ಸಾಕಷ್ಟು ಜನ ಯುವಕರು ಉದ್ಯೋಗ ಅರಸಿ ಬೆಂಗಳೂರಿನಲ್ಲಿ ನೆಲಸಿರುತ್ತಾರೆ. ಹಬ್ಬಗಳು ಮತ್ತು ಸಾಲುಸಾಲು ರಜೆಗಳು ಇರುವ ಸಂದರ್ಭದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವುದರಿಂದ ಖಾಸಗಿ ಸಾರಿಗೆ ಸಂಸ್ಥೆಗಳು ಪ್ರಯಾಣ ದರವನ್ನು ಎರಡರಿಂದ ಮೂರು ಪಟ್ಟು ಹೆಚ್ಚಳ ಮಾಡುತ್ತಾರೆ. ಇದರಿಂದ ಬೆಂಗಳೂರಿನಲ್ಲಿ ಕೆಲಸ ಮಾಡುವ ಯುವಕರು, ಕಾರ್ಮಿಕರು ಮತ್ತು ಇತರೆ ಸಾರ್ವಜನಿಕರಿಗೆ ತುಂಬಾ ಹೊರೆಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದರ ಜೊತೆಗೆ ಮಹಾರಾಷ್ಟ್ರದ ಮುಂಬೈನಿಂದ ಸೋಲಾಪುರ ವರೆಗೆ ಸಂಚರಿಸುವ ವಂದೇ ಭಾರತ ರೈಲು ಸೇವೆಯನ್ನು ವಿಜಯಪುರ ವರೆಗೆ ವಿಸ್ತರಿಸಬೇಕು. ಇದರಿಂದ ತಮ್ಮ ಕೆಲಸ ಕಾರ್ಯಗಳಿಗಾಗಿ ಸೋಲಾಪುರ, ಪುಣೆ ಮತ್ತು ಮುಂಬೈಗೆ ಸಂಚರಿಸುವ ಜಿಲ್ಲೆಯ ಜನರಿಗೆ ಅನಕೂಲವಾಗಲಿದೆ.

ಈ ರೈಲು ಸೇವೆ ಪ್ರಾರಂಭಕ್ಕೆ ಕ್ರಮ ಕೈಗೊಂಡರೆ, ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ. ವ್ಯಾಪಾರ ವಹಿವಾಟಿಗೂ ಸಾಕಷ್ಟು ಪ್ರೋತ್ಸಾಹ ಸಿಗಲಿದೆ. ಅಲ್ಲದೇ, ಈ ಭಾಗದಲ್ಲಿ ಆರ್ಥಿಕ ಅಭಿವೃದ್ಧಿಯೂ ಆಗಲಿದೆ. ಈಗಲಾದರೂ ತಾವು ಎಚ್ಚೆತ್ತುಕೊಂಡು ಅರಣ್ಯರೋಧನವಾಗಿರುವ ಈ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಬೇಕು. ಇಲ್ಲದಿದ್ದರೆ, ತಮಗೆ ಮತಹಾಕಿ ಮತ್ತೆ ಅಧಿಕಾರ ನೀಡಿರುವ ಮತದಾರರನ್ನು ಕೇವಲ ಮತಗಳಿಕೆಗಷ್ಟೇ ಸೀಮಿತಗೊಳಿಸಿದಂತಾಗುತ್ತದೆ. ಆದ್ದರಿಂದ ಈ ನಿಟ್ಟಿನಲ್ಲಿ ಕೂಡಲೇ ಕಾರ್ಯೋನ್ಮುಖರಾಗುವಂತೆ ಸಂಸದ ರಮೇಶ ಜಿಗಜಿಣಗಿ ಅವರಲ್ಲಿ ಕಳಕಳಿಯ ಮನವಿ ಮಾಡುವುದಾಗಿ ಸುನೀಲಗೌಡರು ಪತ್ರದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net