

ಅರಕಲಗೂಡು: ಪಟ್ಟಣದಲ್ಲಿ ನನೆಗುದಿಗೆ ಬಿದ್ದಿರುವ ಒಳಚರಂಡಿ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸುವಂತೆ ಶಾಸಕ ಎ.ಮಂಜು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಂಜಿನಿಯರ್‌ಗಳಿಗೆ ಸೂಚಿಸಿದರು.
ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಸಲಹೆ, ಸೂಚನೆಗಳನ್ನು ನೀಡಿದ ಅವರು, 13 ವರ್ಷಗಳ ಹಿಂದೆ ಪ್ರಾರಂಭಿಸಲಾದ ಯೋಜನೆ ನನೆಗುದಿಗೆ ಬಿದ್ದಿದೆ. ತ್ಯಾಜ್ಯ ಘಟಕಗಳನ್ನು ನಿರ್ಮಿಸಲು ಅಗತ್ಯವಾದ ಭೂಮಿಯನ್ನು ಸಹ ಖರೀದಿ ಮಾಡಲಾಗಿದೆ. ವಿಳಂಬ ನೀತಿ ಅನುಸರಿಸದೆ ಕೂಡಲೇ ಕಾರ್ಯ ಪ್ರವೃತ್ತರಾಗಬೇಕು, ಪಟ್ಟಣ ವ್ಯಾಪ್ತಿಯಲ್ಲಿ 80 ಕಿ.ಮೀ ಒಳಚರಂಡಿ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಪಟ್ಟಣ ಸಾಕಷ್ಟು ಬೆಳೆದಿದೆ. ಮುಂದಿನ 30 ವರ್ಷಗಳ ಬೆಳವಣಿಗೆಯನ್ನು ಗಮನದಲ್ಲಿ ಇರಿಸಿಕೊಂಡು ಯೋಜನೆಯನ್ನು ವಿಸ್ತರಿಸಿ ಹೆಚ್ಚಿನ ಅನುದಾನ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗುವುದು. ಕಾಮಗಾರಿ ನಡೆಸಲು ಅಗತ್ಯ ಸಹಕಾರ ನೀಡುವಂತೆ ತಹಸೀಲ್ದಾರ್, ಸರ್ವೇ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಹಸೀಲ್ದಾರ್ ಕೆ.ಸಿ.ಸೌಮ್ಯಾ, ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕ ಸುಂದರ್, ಒಳಚರಂಡಿ ಮಂಡಳಿ ಇಂಜಿನಿಯರ್ ಗಳಾದ ಉಮೇಶ್, ಸುಹಾಸ್, ಪಪಂ ಮುಖ್ಯಾಧಿಕಾರಿ ನಾಗೇಂದ್ರ ಇದ್ದರು.
ತುರ್ತು ಕಾಮಗಾರಿಪಟ್ಟಿ ಸಿದ್ಧಪಡಿಸಿ: ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಮಂಜು, ಸರ್ಕಾರ ಶಾಸಕರ ನಿಧಿಯಲ್ಲಿ ಶೇ. 75ರಷ್ಟು ಅನುದಾನವನ್ನು ಇಲಾಖೆ ಕಾಮಗಾರಿಗೆ ಬಳಸುವಂತೆ ಸೂಚಿಸಿದೆ. ಕಾಮಗಾರಿಗಳ ಪಟ್ಟಿ ಸಿದ್ಧಪಡಿಸಿ ಅದರಲ್ಲಿ ಅತ್ಯಂತ ತುರ್ತಾಗಿ ಆಗಬೇಕಿರುವ ಕಾಮಗಾರಿಗಳಿಗೆ ಆದ್ಯತೆ ನೀಡುವಂತೆ ಹಾಗೂ ಗುಣಮಟ್ಟದ ಕಾಮಗಾರಿ ನಡೆಸುವಂತೆ ಸೂಚಿಸಿದರು.
ಒಂದು ವಾರದಲ್ಲಿ ಪಟ್ಟಿ ಸಿದ್ಧಪಡಿಸಿಟ್ಟು ಕೊಳ್ಳಬೇಕು, ಅರಣ್ಯ ಇಲಾಖೆ ಮನಸ್ಸಿಗೆ ಬಂದಂತೆ ರಸ್ತೆ ಬದಿ ಗಿಡಗಳನ್ನು ನೆಡುತ್ತಿದೆ. ನಿರ್ದಿಷ್ಟ ಅಂತರ ಬಿಟ್ಟು ಗಿಡಗಳನ್ನು ನೆಡುವಂತೆ ಕ್ರಮ ಕೈಗೊಳ್ಳಬೇಕು, ಗ್ರಾಮೀಣ ಭಾಗದ ರಸ್ತೆಗಳಲ್ಲಿ ಕೊಳವೆ ಅಳವಡಿಸಲು ರಸ್ತೆಗಳನ್ನು ಅಗೆಯುತ್ತಿದ್ದು, ರಸ್ತೆಗಳು ಹಾಳಾಗುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಬಿಂದು ಇದ್ದರು.