ಜು.13ರಂದು ನಗರದಲ್ಲಿ ಸಿ.ಟಿ ಸ್ಕ್ಯಾನ್ ಘಟಕ ಉದ್ಘಾಟನೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಡೆ ಭಾಗಿ

2
Published on

ಮಂಡ್ಯ: ನಗರದ ಸ್ಪಂದನಾ ಆಸ್ಪತ್ರೆಯಲ್ಲಿ ಜು.13ರಂದು ಬೆಳಗ್ಗೆ 10ಗಂಟೆಗೆ ನೂತನ ಸಿ.ಟಿ ಸ್ಕ್ಯಾನ್ ಘಟಕ ಉದ್ಘಾಟನೆ ಮತ್ತು ಆರೋಗ್ಯ ರಕ್ಷಾ ಕಾರ್ಡ್, ವೈದಕೀಯ ಸಲಕರಣೆ ವಿತರಣಾ ಸಮಾರಂಭ ಆಯೋಜಿಸಲಾಗಿದೆ ಎಂದು ಸ್ಪಂದನಾ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಆದಿತ್ಯಗೌಡ ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಡೆ ಸಮಾರಂಭ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವೈದ್ಯಕೀಯ ಸಲಕರಣೆ ವಿತರಿಸಲಿದ್ದಾರೆ. ಜಿಲ್ಲಾಧಿಕಾರಿ ಡಾ.ಕುಮಾರ ಆರೋಗ್ಯ ರಕ್ಷಾ ಕಾರ್ಡ್ ವಿತರಿಸಲಿದ್ದು, ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸಲಿದ್ದಾರೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಎಡಿಸಿ ಡಾ.ಎಚ್.ಎಲ್.ನಾಗರಾಜು, ಡಿಎಚ್‌ಒ ಡಾ.ಕೆ.ಮೋಹನ್, ಮೂಳೆರೋಗ ತಜ್ಞ ಡಾ.ಕೆ.ರವೀಂದ್ರನಾಥ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ ಹಾಗೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ಭಾಗವಹಿಸಲಿದ್ದಾರೆ ಎಂದರು.

ಸಾರ್ವಜನಿಕರಿಗೆ ಅನುಕೂಲವಾಗಲೆಂದು ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಡೆ ಅವರು ಸುಮಾರು ಒಂದೂವರೆ ಕೋಟಿ ರೂ ವೆಚ್ಚದ ಸಿ.ಟಿ ಸ್ಕ್ಯಾನ್ ಯಂತ್ರವನ್ನು ಉಚಿತವಾಗಿ ಕೊಡಿಸಿದ್ದಾರೆ. ವಿವಿಧ ಸ್ಕಾೃನ್‌ಗಳಿಗೆ ಸಂಬಂಧಿಸಿದಂತೆ ಬೇರೆ ಆಸ್ಪತ್ರೆಗಳಲ್ಲಿ ತೆಗೆದುಕೊಳ್ಳುವ ಶುಲ್ಕಕ್ಕಿಂತ ಶೇ.30ರಷ್ಟು ರಿಯಾಯಿತಿ ಇರಲಿದೆ. ದಿನದ 24ಗಂಟೆಯೂ ಸೌಲಭ್ಯ ಸಿಗಲಿದೆ ಎಂದು ಡಾ.ಆದಿತ್ಯಗೌಡ ವಿವರಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರವಿ, ವಿಜಯ್, ರವಿ, ಮಾದೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net