

ದೇವರಹಿಪ್ಪರಗಿ: ನೂತನ ತಾಲೂಕು ಕಚೇರಿಗಳನ್ನು ಸ್ಥಾಪಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣಕ್ಕೆ ವಿವಿಧ ಕಾಮಗಾರಿಗಳ ಭೂಮಿಪೂಜೆ ಹಾಗೂ ನೂತನ ಕಟ್ಟಡ ಲೋಕಾರ್ಪಣೆಗಾಗಿ ಮಂಗಳವಾರ ಆಗಮಿಸಿದ್ದ ಸಚಿವರಿಗೆ ಮನವಿ ಪತ್ರ ನೀಡಿದರು.
ಕರವೇ ರಾಜ್ಯ ಸಂಚಾಲಕ ಶ್ರೀಶೈಲ ಮುಳಜಿ ಮಾತನಾಡಿ, ತಾಲೂಕಿಗೆ ನ್ಯಾಯಾಲಯ, ಬಿಇಒ ಕಚೇರಿ, ಉಪ ನೋಂದಣಾಧಿಕಾರಿಗಳ ಕಚೇರಿ ಆರಂಭಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಬೇಕೆಂದು ಆಗ್ರಹಿಸಿದರು. ಅಲ್ಲದೆ, ಬೆಳೆ ಹಾನಿ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ನೀಡಬೇಕು. ರೈತರ ತೋಟಗಳಿಗೆ ರಾತ್ರಿ ಸಮಯ ಸಿಂಗಲ್ ಪ್ಲೇಸ್ ವಿದ್ಯುತ್ ಒದಗಿಸಬೇಕು. ದೇವರಹಿಪ್ಪರಗಿ ಮತಕ್ಷೇತ್ರ ತುಂಬ ಹಿಂದುಳಿದಿದ್ದು, ಕೂಡಲೇ ಮೂಲ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಸಂಚಾಲಕ ಶ್ರೀಕಾಂತ ರಾಥೋಡ, ತಾಲೂಕು ಅಧ್ಯಕ್ಷ ಸುನೀಲ ಮಾಗಿ, ಗುರುರಾಜ ಆಕಳವಾಡಿ, ಆಕಾಶ ಬೂದಿಹಾಳ, ಶಿವು ಇಂಗಳಿಗೆ, ಜಾವಿದ ಕೋಲಾರ, ಅರವಿಂದ ನಾಯ್ಕೋಡಿ, ರಿಯಾಜ್ ಗಂಗೂರ, ಸಂತೋಷ ಮೇಳಕುದಿ ಇತರರಿದ್ದರು.