ಸಮಯ ವ್ಯರ್ಥ ಮಾಡದೆ ಓದಿನಲ್ಲಿ ತೊಡಗಿ

31 LXR 4A
Published on

ಲಕ್ಷ್ಮೇಶ್ವರ: ಎಸ್ಸೆಸ್ಸೆಲ್ಸಿ ಪರೀಕ್ಷೆ ಸಮೀಪಿಸುತ್ತಿದ್ದು, ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಶ್ರದ್ಧೆೆಯಿಂದ ಅಭ್ಯಾಸದಲ್ಲಿ ತೊಡಗಬೇಕು ಎಂದು ಬಿಆರ್‌ಪಿ ಈಶ್ವರ ಮೆಡ್ಲೇರಿ ಸಲಹೆ ನೀಡಿದರು.

ಶುಕ್ರವಾರ ಪಟ್ಟಣದ ಪಿಎಸ್‌ಬಿಡಿ ಬಾಲಕಿಯರ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಹಮ್ಮಿಕೊಂಡಿದ್ದ ಪಾಲಕರ ಸಭೆ ಹಾಗೂ ಓದಿನ ಮನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಕರು ಪಾಠ ಮಾಡುವುದು ಎಷ್ಟು ಮುಖ್ಯವೋ, ವಿದ್ಯಾರ್ಥಿಗಳು ನಿರಂತರ ಓದಿ ಸಾಧನೆ ಮಾಡುವುದು ಅಷ್ಟೇ ಮುಖ್ಯ. ವಿದ್ಯಾರ್ಥಿಗಳು ಕೀಳರಿಮೆ ಬಿಟ್ಟು, ನಕಾರಾತ್ಮಕವಾಗಿ ಯೋಚಿಸದೆ ನಾನು ಮಾಡಬಲ್ಲೆ ಎಂಬ ಆತ್ಮವಿಶ್ವಾಸದಿಂದ ಅಭ್ಯಾಸದಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.

ಬಹುತೇಕ ವಿದ್ಯಾರ್ಥಿಗಳು ಇಂಗ್ಲಿಷ್, ವಿಜ್ಞಾನ ಮತ್ತು ಗಣಿತವನ್ನು ಕಬ್ಬಿಣದ ಕಡಲೆ ಎಂದು ಭಾವಿಸದೆ ಹೆಚ್ಚಿನ ವೇಳೆಯನ್ನು ಈ ವಿಷಯಗಳಿಗೆ ಮೀಸಲಿರಿಸಿ ಶಿಕ್ಷಕರು ಮತ್ತು ಸಹಪಾಠಿಗಳೊಂದಿಗೆ ಚರ್ಚಿಸಿ ಮನನ ಮಾಡಿಕೊಳ್ಳಬೇಕು. ಇಲಾಖೆಯೂ ಫಲಿತಾಂಶ ಸುಧಾರಣೆಗಾಗಿ ಅನೇಕ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.

ಸಂಸ್ಥೆಯ ಕಾರ್ಯದರ್ಶಿಗಳಾದ ಜಯಲಕ್ಷ್ಮೀ ಗಡ್ಡದೇವರಮಠ ಮಾತನಾಡಿ, ಪಾಲಕರು ಮಕ್ಕಳ ಬಗ್ಗೆ ಸಾಕಷ್ಟು ಆಸೆ- ಕನಸು-ಭರವಸೆ ಇಟ್ಟುಕೊಂಡಿರುತ್ತಾರೆ. ವಿದ್ಯಾರ್ಥಿಗಳು ಹೆತ್ತವರ ಭರವಸೆಯ ಬೆಳಕಾಗಬೇಕು. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವವರೆಗೂ ಶೈಕ್ಷಣಿಕ ಸಾಧನೆಗೆ ಅಡ್ಡಿಯಾಗಲಿರುವ ಮೊಬೈಲ್, ಟಿವಿ ಬಳಸುವುದಿಲ್ಲ ಎಂಬ ದೃಢ ಸಂಕಲ್ಪ ಮಾಡಬೇಕು ಎಂದರು.

ಸಂಸ್ಥೆಯ ಅಧ್ಯಕ್ಷರಾದ ಸುವರ್ಣಬಾಯಿ ಬಹದ್ದೂರ್ ದೇಸಾಯಿ, ಶಾರದಕ್ಕ ಮಹಾಂತಶೆಟ್ಟರ, ಮುಖ್ಯೋಪಾಧ್ಯಾಯ ಜೆ.ಡಿ ಲಮಾಣಿ, ಸಿಆರ್‌ಪಿ ಉಮೇಶ ನೇಕಾರ, ಎಂ.ಸಿ. ಹಿರೇಮಠ, ಪಿ.ಎಲ್. ಪಾಟೀಲ, ಎಸ್.ಎಸ್. ಮಠದ, ಏನ್.ಡಿ. ಗೌರಿ, ಎಸ್.ಎಂ. ಹಾದಿಮನಿ ಕಾವ್ಯಾ ದೇಸಾಯಿ, ಶ್ವೇತಾ ಅಂಬಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net