

ಕೆಜಿಎಫ್: ತಾಲೂಕಿನ ಕ್ಯಾಸಂಬಳ್ಳಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಸ್ಥಳಿಯ ನಾಗರಿಕರು, ಪ್ರಗತಿಪರ ಹೋರಾಟಗಾರರು ಎರಡು ದಿನಗಳಿಂದ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಧರಣಿ ಸ್ಥಳಕ್ಕೆ ಶನಿವಾರ ಶಾಸಕಿ ರೂಪಕಲಾ ಭೇಟಿ ನೀಡಿ, ಮನವಿ ಆಲಿಸಿದರು.
ಕ್ಯಾಸಂಬಳ್ಳಿ ಸುತ್ತಮುತ್ತ ಸುಮಾರು 8 ಪ್ರೌಢ ಶಾಲೆಗಳಿದ್ದು, ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾರಂಭಿಸಲು ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ಯಾವುದೇ ನಿರ್ಧಾರ ಕೈಗೊಳ್ಳುತ್ತಿಲ್ಲ, ಕೂಡಲೇ ನಿರ್ಧಾರ ಕೈಗೊಂಡು ಕಾಲೇಜು ಸ್ಥಾಪನೆ ಮಾಡಬೇಕು ಎಂದು ಶಾಸಕರಿಗೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಶಾಸಕಿ ರೂಪಕಲಾ ಮಾತನಾಡಿ, ಎರಡು ವರ್ಷದಿಂದ ಕ್ಯಾಸಂಬಳ್ಳಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾರಂಭಿಸಲು ಪ್ರಯತ್ನಿಸುತ್ತಿದ್ದು, ಈಗ ಅಂತಿಮ ರೂಪಕ್ಕೆ ಬಂದಿದೆ. ಮುಂದಿನ ಶೈಣಿಕ ವರ್ಷದಿಂದ ಖಂಡಿತ ಕಾಲೇಜು ಪ್ರಾರಂಭಿಸಲಾಗುವುದು, ತಮ್ಮ ಮೇಲೆ ಭರವಸೆ ಇಡಿ ಎಂದು ತಿಳಿಸಿದರು.
ರಾಜ್ಯದಲ್ಲಿ ವಿದ್ಯಾರ್ಥಿಗಳು ದಾಖಲಾತಿ ತೀರಾ ಕಡಿಮೆ ಇರುವ ಪದವಿ ಪೂರ್ವ ಕಾಲೇಜನ್ನು ಕ್ಯಾಸಂಬಳ್ಳಿಗೆ ಸ್ಥಳಾಂತರಿಸುವ ಬಗ್ಗೆ ಪ್ರಕ್ರಿಯಗಳು ನಡೆದಿವೆ. ಜುಲೈ&2023ರಲ್ಲಿ ನಡೆದ ಜಿಲ್ಲಾ ಕೆಡಿಪಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಪ್ರಾಥಮಿಕ ಹಾಗೂ ಪದವಿ ಪೂರ್ವ ಶಿಣ ಸಚಿವರು ಸಹ ಭರವಸೆ ನೀಡಿದ್ದು, ಮುಂದಿನ ಶೈಣಿಕ ವರ್ಷದಿಂದ ಕಾಲೇಜು ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಕ್ಯಾಸಂಬಳ್ಳಿ ಪಂಚಾಯಿತಿ ಹಾಗೂ ಸುತ್ತಮುತ್ತಲ ಹಲವು ಗ್ರಾಮಗಳ ಬಡ ರೈತ, ಕೂಲಿ ಕಾರ್ಮಿಕರ ಮಕ್ಕಳ ವಿಶೇಷವಾಗಿ ಹೆಣ್ಣು ಮಕ್ಕಳ ಹಿತದೃಷ್ಟಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾರಂಭಿಸಲು ದೃಢ ಸಂಕಲ್ಪ ಮಾಡಿದ್ದೇನೆ, ಮಾಡಿಯೇ ತೀರುತ್ತೇನೆ ನನ್ನ ಮೇಲೆ ಭರವಸೆ ಇಟ್ಟು ತಮ್ಮ ಧರಣಿ ಹಿಂಪಡೆಯಲು ಕೋರಿದರು.
ಶಾಸಕಿಯ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಧರಣಿ ಹಿಂಪಡೆದರು.