ಮೇಲುಕೋಟೆಯಲ್ಲಿ ಶ್ರೀಕೃಷ್ಣರಾಜಮುಡಿ ಉತ್ಸವಕ್ಕೆ ಚಾಲನೆ

ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿಗೆ ಕೃಷ್ಣರಾಜಮುಡಿ ಬ್ರಹ್ಮೋತ್ಸವದ ಆರಂಭೋತ್ಸವದ ಪ್ರಯುಕ್ತ ಮಂಗಳವಾರ ಮಹಾಭಿಷೇಕ ನೆರವೇರಿತು.
ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿಗೆ ಕೃಷ್ಣರಾಜಮುಡಿ ಬ್ರಹ್ಮೋತ್ಸವದ ಆರಂಭೋತ್ಸವದ ಪ್ರಯುಕ್ತ ಮಂಗಳವಾರ ಮಹಾಭಿಷೇಕ ನೆರವೇರಿತು.
Published on

ಮೇಲುಕೋಟೆ: ಮೈಸೂರು ಅರಸ ಮುಮ್ಮುಡಿ ಶ್ರೀ ಕೃಷ್ಣರಾಜ ಒಡೆಯರ್ ಜನ್ಮ ನಕ್ಷತ್ರದ ವರ್ಧಂತಿ ದಿನವಾದ ಮಂಗಳವಾರ ಮೇಲುಕೋಟೆ ಚೆಲುವನಾರಾಯಣಸ್ವಾಮಿಗೆ ಮಹಾಭಿಷೇಕ ನೆರವೇರುವುದರೊಂದಿಗೆ ಐತಿಹಾಸಿಕ ಶ್ರೀಕೃಷ್ಣ ರಾಜಮುಡಿ ಉತ್ಸವಕ್ಕೆ ಚಾಲನೆ ದೊರೆಯಿತು.

ಮೂಲಮೂರ್ತಿ ಚೆಲ್ವತಿರುನಾರಾಯಣಸ್ವಾಮಿ, ಬೆಟ್ಟದೊಡೆಯ ಯೋಗನರಸಿಂಹಸ್ವಾಮಿ ಮತ್ತು ಮಹಾಲಕ್ಷ್ಮಿ ಯದುಗಿರಿ ನಾಯಕಿ ಅಮ್ಮನವರಿಗೆ ಶಾಸ್ತ್ರೋಕ್ತವಾಗಿ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿ ಮಹಾಭಿಷೇಕ ನೆರವೇರಿಸಿ, ಕೃಷ್ಣರಾಜಮುಡಿ ಬ್ರಹ್ಮೋತ್ಸವಕ್ಕೆ ಚಾಲನೆ ನೀಡಲಾಯಿತು.
ದೇವಾಲಯದ ಪಾತಾಣಾಂಕಣದಲ್ಲಿರುವ ಮುಮ್ಮುಡಿ ಕೃಷ್ಣರಾಜ ಒಡೆಯರ್ ಸಮೇತ ರಾಣಿಯರ ಭಕ್ತವಿಗ್ರಹಕ್ಕೆ ಸ್ವಾಮಿಯ ಪ್ರಸಾದ ಪಾದುಕೆ ಮತ್ತು ಮಾಲೆಯ ಗೌರವಾರ್ಪಣೆ ಸಲ್ಲಿಸಲಾಯಿತು. ಸಂಜೆ ದೇವಸೇನ ವಿಶ್ವಕ್ಸೇನರ ಉತ್ಸವ ನಂತರ ಅಮ್ಮನವರ ಸನ್ನಿಧಿಯ ಮುಂಭಾಗ ಚೆಲುವನಾಯಣಸ್ವಾಮಿ ಮತ್ತು ಕಲ್ಯಾಣ ನಾಯಕಿಗೆ ಸಮನ್ಮಾಲೆ ಲಾಜಹೋಮ, ಮುಂತಾದ ವಿದಿವಿಧಾನ ನೆರವೇರಿಸಿ ಕಲ್ಯಾಣೋತ್ಸವ ನೆರವೇರಿಸಲಾಯಿತು.

ವಜ್ರಖಚಿತ ಕಿರೀಟ ಸಮರ್ಪಣೆ: ಮುಮ್ಮುಡಿ ಶ್ರೀ ಕೃಷ್ಣರಾಜ ಒಡೆಯರ್ ತಮ್ಮ ಕುಲದೈವ ಮೇಲುಕೋಟೆ ಚೆಲುವನಾರಾಯಣನಿಗೆ ವಜ್ರಖಚಿತ ಕೃಷ್ಣರಾಜ ಮುಡಿ ಕಿರೀಟ ಅರ್ಪಿಸಿ ಆರಂಭಿಸಿದ ಆಷಾಢ ಬ್ರಹ್ಮೋತ್ಸವ ಶತಮಾನಗಳ ನಂತರವೂ ಮುಂದುವರಿದಿದ್ದು, ಐತಿಹಾಸಿಕ ಪರಂಪರೆಯ ಕೊಂಡಿಯಾಗಿ ನೆರವೇರುತ್ತಾ ಬಂದಿದೆ. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಮಹೋತ್ಸವದ ನಾಲ್ಕನೇ ದಿನವಾದ ಜು.26ರಂದು ಶುಕ್ರವಾರ ರಾತ್ರಿ ಕೃಷ್ಣರಾಜಮುಡಿ ಉತ್ಸವ ವೈಭವದಿಂದ ನೆರವೇರಲಿದೆ.

ಗರುಡ ದ್ವಜಾರೋಹಣ: ಆಷಾಢ ಮಾಸದ ಕೃಷ್ಣರಾಜಮುಡಿ ಜಾತ್ರಾ ಮಹೋತ್ಸವದ ಮೊದಲತಿರುನಾಳ್ ಅಂಗವಾಗಿ ಮಂಗಳವಾರ ಬೆಳಗ್ಗೆ ಗರುಡಧ್ವಜಾರೋಹಣ ನೆರವೇರಿತು. ಗರುಡದೇವನ ಪೂಜೆ ಕೈಗೊಂಡು ಗರುಡಸಾಮದ ಪಠಣದ ನಂತರ ಬ್ರಹ್ಮೋತ್ಸವಕ್ಕೆ ದೇವಾನುದೇವತೆಗಳನ್ನು ಆಹ್ವಾನಿಸುವಂತೆ ಪ್ರಾರ್ಥಿಸಿ ಚಿನ್ನದ ದ್ವಜಸ್ಥಂಭದ ಮೇಲೆ ಗರುಡಧ್ವಜಾರೋಹಣ ನೆರವೇರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net