ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆಗೆ ಚಾಲನೆ

yuvanidhi
Published on

ಮಡಿಕೇರಿ: ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ ವತಿಯಿಂದ ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆಗೆ ಮಂಗಳವಾರ ಚಾಲನೆ ದೊರೆಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾರವರು ಭಿತ್ತಿಪತ್ರ ಬಿಡುಗಡೆ ಮಾಡುವ ಮೂಲಕ ಯುವನಿಧಿ ಯೋಜನಾ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿ, ೨೦೨೩ನೇ ವರ್ಷದಲ್ಲಿ ತೇರ್ಗಡೆಯಾಗಿ, ತೇರ್ಗಡೆಯಾದ ದಿನಾಂಕದಿಂದ ೧೮೦ ದಿನಗಳು ಕಳೆದರೂ ಉದ್ಯೋಗ ಲಭಿಸದ ಪದವೀಧರ ನಿರುದ್ಯೋಗಿಗಳಿಗೆ(ವೃತ್ತಿಪರ ಕೋರ್ಸ್ ಸೇರಿದಂತೆ) ಪ್ರತೀ ತಿಂಗಳು ೩ ಸಾವಿರ ರೂ ಯೋಜನೆಯಡಿ ನೀಡಲಾಗುತ್ತದೆ. ಹಾಗೂ ಡಿಪ್ಲೋಮಾ ಪಾಸಾದ ನಿರುದ್ಯೋಗಿಗಳಿಗೆ ಪ್ರತೀ ತಿಂಗಳು ೧೫೦೦ ರೂ. ನಿರುದ್ಯೋಗ ಭತ್ಯೆಯನ್ನು ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ ೨ ವರ್ಷಗಳ ಅವಧಿಗೆ ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ದೊರೆಯಲಿದೆ ಎಂದು ತಿಳಿಸಿದರು.


ಪದವಿ/ ಡಿಪ್ಲೋಮಾ ಮುಗಿಸಿ ೬ ತಿಂಗಳಾದರೂ ಉದ್ಯೋಗ ಲಭಿಸದೇ ಇರುವ ಕನ್ನಡಿಗರಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ. ಈ ಸೌಲಭ್ಯವು ಎರಡು ವರ್ಷಗಳ ಅವಧಿಗೆ ಮಾತ್ರ ಅನ್ವಯಿಸುತ್ತದೆ. ಎರಡು ವರ್ಷಗಳ ಅವಧಿಯೊಳಗೆ ಉದ್ಯೋಗ ದೊರೆತಲ್ಲಿ ಫಲಾನುಭವಿಗೆ ಯೋಜನೆಯ ಸೌಲಭ್ಯ ಸ್ಥಗಿತಗೊಳ್ಳಲಿದೆ. ಭತ್ಯೆಯನ್ನು ಡಿಬಿಟಿ ಮೂಲಕ ಒದಗಿಸಲು ಉದ್ದೇಶಿಸಲಾಗಿದ್ದು, ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವುದು. ನಿರುದ್ಯೋಗ ಸ್ಥಿತಿಯ ಬಗ್ಗೆ ಸ್ವತಂತ್ರ ಪರಿಶೀಲನೆ ಇರಬೇಕು ಎಂದು ತಿಳಿಸಿದ್ದಾರೆ.


ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಉಮಾ ಮಾಹಿತಿ ನೀಡಿ, ಉನ್ನತ ವ್ಯಾಸಂಗಕ್ಕೆ ದಾಖಲಾತಿ ಹೊಂದಿ ವಿದ್ಯಾಭ್ಯಾಸ ಮುಂದುವರೆಸುವವರು, ಶಿಶಿಕ್ಷು ವೇತನವನ್ನು ಪಡೆಯುತ್ತಿರುವವರು, ಸರ್ಕಾರಿ/ ಖಾಸಗಿ ವಲಯದಲ್ಲಿ ಉದ್ಯೋಗ ಪಡೆದಿರುವವರು, ರಾಜ್ಯ ಮತ್ತು ಕೇಂದ್ರದ ವಿವಿಧ ಯೋಜನೆಯಡಿ ಹಾಗೂ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಹೊಂದಿದವರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ. ಫಲಾನುಭವಿಗಳಿಗೆ ೨ ವರ್ಷ ಅವಧಿಯೊಳಗೆ ಉದ್ಯೋಗ ದೊರೆತಲ್ಲಿ ಫಲಾನುಭವಿಗೆ ಯೋಜನೆಯ ಸೌಲಭ್ಯ ಸ್ಥಗಿತಗೊಳಿಸಲಾಗುತ್ತದೆ ಎಂದು ತಿಳಿಸಿದರು.


ಕೊಡಗು ಜಿಲ್ಲೆಯಲ್ಲಿ ಬಿಕಾಂ ವಿಭಾಗದಲ್ಲಿ ೩೦೦, ಬಿಸಿಎ ವಿಭಾಗದಲ್ಲಿ ೧೨೦, ಬಿಬಿಎ ವಿಭಾಗದಲ್ಲಿ ೮೪, ಬಿಎ ವಿಭಾಗದಲ್ಲಿ ೧೨೦, ಬಿಎಸ್ಸಿ ವಿಭಾಗದಲ್ಲಿ ೭೦, ಡಿಪ್ಲೋಮಾ ವಿಭಾಗದಲ್ಲಿ ೧೮೭ ಒಟ್ಟು ೮೮೧ ಅಭ್ಯರ್ಥಿಗಳನ್ನು ಯುವನಿಧಿ ಯೋಜನೆಗೆ ಗುರುತಿಸಲಾಗಿದೆ. ಯುವನಿಧಿ ಯೋಜನೆಯಡಿ ಹೆಸರು ನೋಂದಾಯಿಸಿಕೊಳ್ಳಲು ಸೇವಾ ಸಿಂಧು ಪೋರ್ಟಲ್ https://sevasindhugs.karnataka.gov.in ಗೆ ಭೇಟಿ ನೀಡಬಹುದು. ಉಚಿತವಾಗಿ ಕರ್ನಾಟಕ ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಸಹಾಯವಾಣಿ ಸಂಖ್ಯೆ ೧೮೦೦೫೯೯೯೯೧೮ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.


ಈ ಸಂದರ್ಭದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಾಯಕ ಸಾಂಖ್ಯಿಕ ಅಧಿಕಾರಿ ಡಾ.ಎಚ್.ಜೆ.ರೂಪ, ಜಿಲ್ಲಾ ಸಂಯೋಜಕರಾದ ಎನ್.ಆರ್.ರವಿಕುಮಾರ್, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net