ಶುಕ್ರವಾರ ಕನ್ನಡ ಗಜಲ್ ಯಾತ್ರೆಗೆ ಚಾಲನೆ; ಗಾಯಕ ಅನುರಾಗ್ ಗದ್ದಿ ಗಾಯನ

gajal
Published on

ಬೆಂಗಳೂರು: ಅನುರಾಗ್ಸ್ ಸಂಗೀತ ಗುರುಕುಲದ ವತಿಯಿಂದ ಕನ್ನಡ ಗಜಲ್ ಗಾಯನವನ್ನು ಜನರ ಬಳಿ ಕೊಂಡೊಯ್ಯಲು ಕನ್ನಡ ಗಜಲ್ ಯಾತ್ರೆ-100 ಎಂಬ ವಿಶೇಷ ಕಾಯಕ್ರಮಕ್ಕೆ ಶುಕ್ರವಾರ (ಜ.24) ಚಾಲನೆ ದೊರೆಯಲಿದೆ. ಕನ್ನಡ ಭವನದ ನಯನ ಸಭಾಂಗಣದಲ್ಲಿ ಅಂದು ಸಂಜೆ 4.30ಕ್ಕೆ ನಡೆಯುವ ಕಾರ್ಯಕ್ರಮವನ್ನು ಸಂಗೀತ ನಿರ್ದೇಶಕ ವಿ.ಮನೋಹರ ಉದ್ಘಾಟಿಸಲಿದ್ದು, ಸಂಗೀತ ವಿದ್ವಾಂಸೆ ಡಾ.ಜಯಶ್ರೀ ಅರವಿಂದ ಅಧ್ಯಕ್ಷತೆ ವಹಿಸಲಿದ್ದಾರೆ. ವಿಷ್ಣುಸೇನಾ ಮುಖ್ಯಸ್ಥ ವೀರಕಪುತ್ರ ಶ್ರೀನಿವಾಸ್ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಗಾಯಕ ಅನುರಾಗ್ ಗದ್ದಿ ಮತ್ತು ಶ್ರೀರಕ್ಷ ಪ್ರಿಯರಾಮ್ ಗಜಲ್ ಗಾಯನ ನಡೆಸಿಕೊಡಲಿದ್ದಾರೆ. ಸಂಗೀತದಲ್ಲಿ ಗಜಲ್ ಪ್ರಕಾರ ಬಹಳ ಪ್ರಸಿದ್ಧವಾಗಿದ್ದು, ಉರ್ದು ಮತ್ತು ಹಿಂದಿಯಲ್ಲಿ ಗಜಲ್ ಗಾಯನಕ್ಕೆ ಬಹು ಸುದೀರ್ಘ ಹಿನ್ನೆಲೆ ಇದೆ. ಕನ್ನಡದಲ್ಲೂ ಕೂಡಾ ಗಜಲ್ ಕವಿಗಳು ಸಾಕಷ್ಟಿದ್ದು, ಗಾಯಕರ ಕೊರತೆಯಿಂದ ಹೆಚ್ಚಿನ ಪ್ರಸಿದ್ಧಿಯಾಗಿಲ್ಲ. ಕವಿ ಶಾಂತರಸರಿಂದ ಆರಂಭವಾಗಿ ಇತ್ತೀಚಿನ ವರೆಗಿನ ಹಲವು ಕವಿಗಳ ಗಜಲ್‌ಗಳನ್ನು ಪ್ರಸಿದ್ಧಿ ಮಾಡುವ ಉದ್ದೇಶದಿಂದ ಅನುರಾಗ್ ಗದ್ದಿ ಗಜಲ್ ಗಾಯನದ ನೂರು ಕಾರ್ಯಕ್ರಮಗಳ ಯಾತ್ರೆಯನ್ನು ಕೈಗೊಂಡಿದ್ದು, 100 ಕಾರ್ಯಕ್ರಮಗಳ ನಂತರ ಬೃಹತ್ ಸಮಾರೋಪ ಸಮಾರಂಭ ಏರ್ಪಡಿಸುವ ಉದ್ದೇಶ ಹೊಂದಿದ್ದಾರೆ.

ಕಾರ್ಯಕ್ರಮದ ರುವಾರಿ ಅನುರಾಗ ಗದ್ದಿ

ಕನ್ನಡ ಗಜಲ್ ಯಾತ್ರೆ ಯೋಜನೆಯ ರುವಾರಿ ಅನುರಾಗ್ ಗದ್ದಿ ಮೂಲತಃ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಹುಲಿಹೈದರ ಎಂಬ ಊರಿನ ಗ್ರಾಮೀಣ ಪ್ರತಿಭೆ. ಕನಕಗಿರಿಯ ಶ್ರೀಪುಟ್ಟರಾಜ ಗವಾಯಿಗಳ ಸಂಗೀತ ಪಾಠ ಶಾಲೆಯಲ್ಲಿ ಸಂಗೀತ ಅಭ್ಯಾಸ ಮಾಡಿ ಸಂಗೀತದಲ್ಲಿ ಎಂ.ಎ ಮತ್ತು ವಿದ್ವತ್ ಪದವಿ ಪಡೆದಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಅನುರಾಗ್ಸ ಸಂಗೀತ ಗುರುಕುಲ ಹೆಸರಿನಲ್ಲಿ ಸಂಗೀತ ಶಾಲೆ ನಡೆಸುತ್ತಿರುವ ಅನುರಾಗ ಗದ್ದಿ, ಸಾಕಷ್ಟು ಕಡೆ ಸಂಗೀತ ಕಚೇರಿ ನಡೆಸಿದ್ದಾರೆ.

ಸದ್ಯ ನೂರಾರು ವಿದ್ಯಾರ್ಥಿಗಳಿಗೆ ಸಂಗೀತ ಪಾಠ ಹೇಳುತ್ತಲೇ, ಮುಂಬೈನಲ್ಲಿ ಗಜಲ್ ಗಾಯನದಲ್ಲಿ ಸಂಗೀತದ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಹಿಂದುಸ್ಥಾನಿ ಶಾಸ್ರ್ತೀಯ ಸಂಗೀತ ಪರಿಣತಿ ಹಾಗೂ ಸುಗಮ ಸಂಗೀತ, ವಚನ, ತತ್ವಪದ, ಭಾವಗೀತೆ ಮತ್ತು ಹಿಂದಿ ಹಾಗೂ ಕನ್ನಡ ಗಜಲ್ ಹಾಡುತ್ತಾರೆ. ಜತೆಗೆ ಹಾರ್ಮೋನಿಯಂ, ತಬಲಾ ನುಡಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net