ಸಾಂಸ್ಕೃತಿಕ ವೈಭವದ ಅದ್ದೂರಿ ಮೆರವಣಿಗೆ

10bk1
ಬಸವಕಲ್ಯಾಣದಲ್ಲಿ ಶುಕ್ರವಾರ ಬಸವೇಶ್ವರ ಜಾತ್ರೆ ನಿಮಿತ್ತ ಶುಕ್ರವಾರ ತೊಟ್ಟಿಲು ಮೆರವಣಿಗೆ ವೇಳೆ ಶ್ರೀ ಡಾ.ಶಿವಾನಂದ ಸ್ವಾಮೀಜಿ ಹುಲಸೂರು ಧ್ವಜಾರೋಹಣ ನೆರವೇರಿಸಿದರು. ಸಾಯಗಾಂವದ ಶ್ರೀ ಶಿವಾನಂದ ಸ್ವಾಮೀಜಿ, ಶಾಸಕ ಶರಣು ಸಲಗರ, ಮಾಜಿ ಎಂಎಲ್‌ಸಿ ವಿಜಯಸಿಂಗ್, ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ, ಬಿಡಿವಿಸಿ ಶಶಿಕಾಂತ ದುರ್ಗೆ ಇತರರಿದ್ದರು.
Published on

ಬಸವಕಲ್ಯಾಣ: ಅಲಂಕೃತ ವಾಹನದಲ್ಲಿ ಗಮನಸೆಳೆದ ಬಸವಾದಿ ಶರಣ ವೇಷಧಾರಿಗಳು, ಮಾರ್ದನಿಸಿದ ಬಸವ ಘೋಷಣೆ, ವಚನ ಸಂಗೀತಕ್ಕೆ ಹೆಜ್ಜೆ ಹಾಕಿದ ಯುವಕರು, ವಿದ್ಯಾರ್ಥಿನಿಯರಿಂದ ವಚನ ನ್ಯತ್ಯ. ಛತ್ರಿ, ಚಾಮರ, ವಿವಿಧ ಕಲಾತಂಡಗಳಿಂದ ವೈವಿಧ್ಯಮಯ ಕಲಾ ಪ್ರದರ್ಶನ…

ಇದು ಬಸಬಣ್ಣನವರ ಕಾಯಕ ಭೂಮಿ ಬಸವಕಲ್ಯಾಣದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಹಾಗೂ ವಿಶ್ವಸ್ಥ ಸಮಿತಿಯಿಂದ ಬಸವ ಜಯಂತಿ ನಿಮಿತ್ತ ಮೂರು ದಿನದ ಮಹಾತ್ಮ ಬಸವೇಶ್ವರರ ಜಾತ್ರಾ ಮಹೋತ್ಸವದ ಮೊದಲ ದಿನ ಶುಕ್ರವಾರ ನಡೆದ ಶ್ರೀ ಬಸವಣ್ಣನವರ ಬೆಳ್ಳಿ ತೊಟ್ಟಿಲು ಮೆರವಣಿಗೆಯಲ್ಲಿ ಕಂಡುಬಂದ ಶರಣ ಸಂಸ್ಕೃತಿ ವೈಭವ.

ಬೆಳಗ್ಗಿನ ಜಾವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಗೋರ್ಟಾ(ಬಿ) ಗ್ರಾಮದ ನೀಲಮ್ಮನ ಬಳಗದಿಂದ ಬಸವಣ್ಣನವರ ಮೂರ್ತಿಗೆ ಅಷ್ಟಗಂಧ ಪೂಜೆ ನೆರವೇರಿದ ಬಳಿಕ ೭ಕ್ಕೆ ಬಸವಣ್ಣನವರ ಬೆಳ್ಳಿ ತೊಟ್ಟಿಲು ಮೆರವಣಿಗೆ ವಿವಿಧ ಕಲಾ ತಂಡಗಳ ಸಾಂಸ್ಕೃತಿಕ ವೈಭವದೊಂದಿಗೆ ಜರುಗಿತು. ಮುಚಳಂಬದ ಶ್ರೀ ಪ್ರಣವಾನಂದ ಸ್ವಾಮೀಜಿ ಬೆಳ್ಳಿ ತೊಟ್ಟಿಲು ಪೂಜೆ ನೆರವೇರಿಸಿದರೆ, ಬಿಕೆಡಿಬಿ ಆಯುಕ್ತ ರಮೇಶ ಕೋಲಾರ ಮೆರವಣಿಗೆಗೆ ಚಾಲನೆ ನೀಡಿದರು.

ಬಸವೇಶ್ವರ ದೇವಸ್ಥಾನದಿಂದ ಶುರುವಾದ ಮೆರವಣಿಗೆ ಕಾಳಿಗಲ್ಲಿ, ಐತಿಹಾಸಿಕ ಕೋಟೆ, ಮುಖ್ಯ ರಸ್ತೆ ಮೂಲಕ ಹರಳಯ್ಯ ವೃತ್ತದವರೆಗೆ ಆಗಮಿಸಿದ ಬಳಿಕ ಪುನಃ ದೇವಸ್ಥಾನ ತಲುಪಿ ಸಮಾಪ್ತಿಗೊಂಡಿತು.

ಮೆರವಣಿಗೆ ಎದುರು ಅಲಂಕೃತ ತೆರೆದ ವಾಹನದಲ್ಲಿ ಬೆಳ್ಳಿ ತೊಟ್ಟಿಲು ಸಾಗಿದರೆ, ಹಿಂಭಾಗದಲ್ಲಿದ್ದ ತೆರೆದ ವಾಹನಗಳಲ್ಲಿ ವಚನ ಪಿತಾಮಹ ಫ.ಗು. ಹಳಕಟ್ಟಿ, ನಂತರ ಬಾಬಾಸಾಹೇಬ್ ವಾರದ್ ಅವರ ಬ್ಯಾನರ್ ಹಾಕಲಾಗಿತ್ತು. ಬಸವೇಶ್ವರ ದೇವಸ್ಥಾನ ಶಾಲೆ ವಿದ್ಯಾರ್ಥಿಗಳಿಂದ ವಚನಗಳ ಹಾಡಿಗೆ ನಡೆದ ನೃತ್ಯ ನೋಡುಗರ ಕಣ್ಮನ ಸೆಳೆಯಿತು.

ಮೆರವಣಿಗೆಯಲ್ಲಿ ಪಾಲ್ಗೊಂಡ ಲಂಬಾಣಿ ಮಹಿಳೆಯರು ಪಾರಂಪರಿಕ ನೃತ್ಯ ಮಾಡಿ ಗಮನ ಸೆಳೆದರೆ, ಸಾಗರ ತಾಲೂಕಿನಿಂದ ಆಗಮಿಸಿದ ಮಹಿಳಾ ತಂಡ ಅಕರ್ಷಕವಾಗಿ ಡೊಳ್ಳು ಬಾರಿಸಿತು. ಡಿಜೆ ಸೌಂಡ್ ಸಿಸ್ಟಮ್ ಎದುರು ವಚನಗಳ ಹಾಡಿಗೆ ಯುವಕರ ಜತೆ ಶಾಸಕ ಶರಣು ಸಲಗರ ಹಾಗೂ ಗಣ್ಯರು, ಬಸವೇಶ್ವರ ದೇವಸ್ಥಾನ ಪದಾಧಿಕಾರಿಗಳು ಡಾನ್ಸ್ ಮಾಡಿ ಸಂತಸಪಟ್ಟರು.

ಕುದುರೆ ಮೇಲೆ ಕುಳಿತ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಸೇರಿ ವಿವಿಧ ಶರಣರ ವೇಷಧಾರಿ ಮಕ್ಕಳು ಮೆರವಣಿಗೆ ಮೆರುಗು ಹೆಚ್ಚಿಸಿದರು. ಭಾಗವಹಿಸಿದ ಜನರು ತಲೆ ಮೇಲೆ ಟೋಪಿ, ಬೆನ್ನಿನ ಹಿಂಭಾಗದಲ್ಲಿ ಷಟಸ್ಥಲದ ಸ್ಕಾರ್ಫ್ ಧರಿಸಿದ್ದರು.

ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್, ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ, ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ, ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಉಪಾಧ್ಯಕ್ಷ ಡಾ.ಜಿ.ಎಸ್. ಭುರಳೆ, ಬಿಡಿಪಿಸಿ ಕೋಶಾಧ್ಯಕ್ಷ ರಾಜಕುಮಾರ ಹೊಳಕುಂದೆ, ಕಾರ್ಯದರ್ಶಿ ಶ್ರೀಕಾಂತ ಬಡದಾಳೆ, ಸಹ ಕಾರ್ಯದರ್ಶಿ ವಿವೇಕಾನಂದ ಹೊದಲೂರೆ, ನಿರ್ದೇಶಕರಾದ ವೀರಣ್ಣ ಹಲಶೆಟ್ಟೆ, ಸುಭಾಷ ಹೊಳಕುಂದೆ, ಮಲ್ಲಯ್ಯ ಹಿರೇಮಠ, ಅಶೋಕ ನಾಗರಾಳೆ, ಕಾಶಪ್ಪ ಸಕ್ಕರಬಾವಿ, ಜಗನ್ನಾಥ ಖೂಬಾ, ಭದ್ರಿನಾಥ ಪಾಟೀಲ್, ಅನೀಲಕುಮಾರ ರಗಟೆ, ರೇವವಣಪ್ಪ ರಾಯವಾಡೆ, ವಿಜಯಲಕ್ಷ್ಮಿ ಗಡ್ಡೆ ಮತ್ತು ಬಿಡಿವಿಸಿ ಕಾರ್ಯದರ್ಶಿ ನಾಗಯ್ಯ ಸ್ವಾಮಿ, ಕೋಶಾಧ್ಯಕ್ಷ ಶಿವರಾಜ ಶಾಶೆಟ್ಟೆ, ವಿಶ್ವಸ್ಥರಾದ ಗದಗೆಪ್ಪ ಹಲಶೆಟ್ಟೆ, ಬಸವರಾಜ ಪಾಟೀಲ್, ಸೋಮಶೇಖರ ವಸದ, ಮಲ್ಲಿಕಾರ್ಜುನ ಮಂಠಾಳೆ, ನಗರಸಭೆ ಪೌರಾಯುಕ್ತ ರಾಜು ಬಣಕರ್, ಸಿಪಿಐ ಅಲಿಸಾಬ್, ಪ್ರಮುಖರಾದ ಪ್ರದೀಪ ವಾತಡೆ, ರವಿ ಚಂದನಕೆರೆ, ಬಸವರಾಜ ಬಾಲಕಿಲೆ, ಬಸವರಾಜ ತೊಂಡಾರೆ, ಅರ್ಜುನ ಕನಕ, ಮನೋಹರ ಮೈಸೆ, ರವಿ ಕೊಳಕೂರ, ಶಿವಕುಮಾರ ಬಿರಾದಾರ್, ಜಗನ್ನಾಥ ಪಾಟೀಲ್ ಚಿಕನಾಗಾಂವ, ಸಂಗಮೇಶ ಅವಸೆ, ಸುನೀಲ ಹೊಳಕುಂದೆ ಇತರರಿದ್ದರು.

ಬಸವಣ್ಣ ವಿಶ್ವದ ಸಾಂಸ್ಕೃತಿಕ ನಾಯಕ: ವಚನ ಸಾಹಿತ್ಯದ ಮೂಲಕ ಇಡೀ ವಿಶ್ವಕ್ಕೆ ಮಾನವೀಯ ಮೌಲ್ಯ ಸಾರಿದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರು ಕಾಯಕ ಸಿದ್ಧಾಂತದ ಜತೆಗೆ ಸಮಾನತೆ ಸಾರಿ ಎಲ್ಲರೂ ನಮ್ಮವರು ಎಂದು ಅಪ್ಪಿಕೊಂಡ ಮಹಾನ್ ನಾಯಕರಾಗಿದ್ದಾರೆ ಎಂದು ಹುಲಸೂರಿನ ಶ್ರೀ ಡಾ.ಶಿವಾನಂದ ಸ್ವಾಮೀಜಿ ಹೇಳಿದರು. ಶ್ರೀ ಬಸವೇಶ್ವರ ವೃತ್ತದಲ್ಲಿ ಧ್ವಜಾರೋಹಣ ನೆರವೇರಿಸಿದ ಅವರು, ೧೨ನೇ ಶತಮಾನದ ಬಸವಾದಿ ಶಿವಶರಣರ ವಚನಗಳು ಕೇವಲ ಕರ್ನಾಟಕಕ್ಕೆ ಸೀಮಿತಗೊಳ್ಳದೆ ಜಗತ್ತಿನಾದ್ಯಂತ ಪ್ರಚಾರ-ಪ್ರಸಾರವಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಎಲ್ಲರ ಮನೆ-ಮನಗಳಲ್ಲಿ ಬಸವ ತತ್ವ ಅಳವಡಿಸಿಕೊಳ್ಳಬೇಕು ಎಂದರು. ಬಸವಣ್ಣನನವರು ಯಾವುದೇ ಒಂದು ಜಾತಿ, ಜನಾಂಗಕ್ಕೆ ಸೀಮಿತರಲ್ಲ. ಅವರು ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಿಸಿದೆ. ಆದರೆ ಅವರು ರಾಜ್ಯಕಷ್ಟೇ ಸಾಂಸ್ಕೃತಿಕ ನಾಯಕರಲ್ಲ. ವಿಶ್ವದ ಸಾಂಸ್ಕೃತಿಕ ನಾಯಕರಾಗಿದ್ದಾರೆ. ಹೀಗಾಗಿ ರಾಜ್ಯ ಮಟ್ಟದ ಬಸವ ಜಯಂತ್ಯುತ್ಸವ ಬಸವಕಲ್ಯಾಣದಲ್ಲಿ ಸರ್ಕಾರದಿಂದಲೇ ಆಯೋಜಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net