

ಸಾಗರ: ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತೆರೆಯಬೇಕು. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಗೌರವಧನ ಹೆಚ್ಚಿಸುವ ಆರನೇ ಗ್ಯಾರಂಟಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಶುಕ್ರವಾರ ಅಂಗನವಾಡಿ ಕಾರ್ಯಕತೆರ್ಯರು ಮತ್ತು ಸಹಾಯಕಿಯರ ಫೆಡರೇಶನ್ ಸ್ಥಳೀಯ ಘಟಕದಿಂದ ಶಾಸಕರು ಮತ್ತು ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಸರ್ಕಾರ ಅಂಗನವಾಡಿ ವ್ಯವಸ್ಥೆಗೆ ವಿರುದ್ಧವಾಗಿ ಹಾಗೂ ಪರ್ಯಾಯವಾಗಿ ಶಿಶುಪಾಲನಾ ಕೇಂದ್ರಗಳು ಮತ್ತು ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲು ಮುಂದಾಗಿರುವ ಕ್ರಮ ಸರಿಯಲ್ಲ. ಸರ್ಕಾರದ ವಿವಿಧ ಇಲಾಖೆಗಳು ಹೊರಡಿಸಿರುವ ಆದೇಶಗಳನ್ನು ವಾಪಾಸ್ ಪಡೆಯಬೇಕು. ಅಂಗನವಾಡಿ ಕೇಂದ್ರಗಳಲ್ಲಿಯೇ ಪೂರ್ವ ಪ್ರಾಥಮಿಕ ತರಗತಿಗಳನ್ನು ನಡೆಸಲು ವಿಶೇಷ ಸೌಲಭ್ಯ ಕಲ್ಪಿಸಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ರೂ. ಹಾಗೂ ಸಹಾಯಕಿಯರಿಗೆ 10 ಸಾವಿರ ರೂ. ಗೌರವಧನ ನೀಡಬೇಕು. ನಿವೃತ್ತರಿಗೆ ಮೂರು ಲಕ್ಷ ರೂ. ನೀಡುವ ರಾಜ್ಯ ಸರ್ಕಾರದ ಆರನೇ ಗ್ಯಾರಂಟಿಯನ್ನು ಜಾರಿಗೊಳಿಸಬೇಕು. ಗ್ರಾಚ್ಯುಟಿ ಪಡೆಯಲು ಅರ್ಹರು ಎಂಬುದಾಗಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು. ಎಲ್ಲ ನಿವೃತ್ತರಿಗೂ ಗ್ರಾಜ್ಯುಟಿ ಸೌಲಭ್ಯ ಒದಗಿಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
ರಾಜ್ಯ ಸಮಿತಿ ಸಂಚಾಲಕ ರವೀಂದ್ರ ಸಾಗರ್, ಪ್ರಮುಖರಾದ ಪುಷ್ಪಾ ಆವಿನಹಳ್ಳಿ, ಕಲಾವತಿ, ಶಾಂತಾ ದಾಸಕೊಪ್ಪ, ವಿಜಯಲಕ್ಷ್ಮೀ, ಶಿವಕುಮಾರಿ, ರೇಖಾ, ಗಾಯತ್ರಿ, ನಾಗರತ್ನಾ, ಜುಬೇದಾ, ಮಂಜುಳಾ, ಮೈತ್ರಿ, ಪ್ರತಿಮಾ ಇತರರಿದ್ದರು.
ಹೋರಾಟಕ್ಕೆ ಶಾಸಕರ ಬೆಂಬಲ
ಮನವಿ ಸ್ವೀಕರಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ನ್ಯಾಯಸಮ್ಮತ ಹೋರಾಟಕ್ಕೆ ನನ್ನ ಬೆಂಬಲವಿದೆ. ಸಂಘಟನೆ ನೀಡಿರುವ ಮನವಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರ ಗಮನಕ್ಕೆ ತರುವ ಕೆಲಸ ಮಾಡಲಾಗುತ್ತದೆ. ಜತೆಗೆ ಅಂಗನವಾಡಿಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸುವ ಬಗ್ಗೆ ಶಿಕ್ಷಣ ಸಚಿವರಿಗೆ ಮನವಿ ಮಾಡಲಾಗುತ್ತದೆ. ಈ ಬಗ್ಗೆ ಕೂಡಲೆ ಸಂಬಂಧಪಟ್ಟವರ ಜತೆಯಲ್ಲಿ ಮಾತನಾಡಿ, ಅಗತ್ಯ ಕ್ರಮ ಕೈಗೊಳ್ಳಲು ಕೋರುತ್ತೇನೆ ಎಂದು ಭರವಸೆ ನೀಡಿದರು.