

ಮುಂಡಗೋಡ: ತಾಲೂಕಿನ ಕಾತೂರ-ಆಲಳ್ಳಿ ಮಾರ್ಗವಾಗಿ ಹಾವೇರಿ ಜಿಲ್ಲೆಯತ್ತ ಅಕ್ರಮವಾಗಿ ಸಾಗುವಾನಿ ಕಟ್ಟಿಗೆ ಸಾಗಾಟ ನಡೆಯುತ್ತಿದ್ದು, ಕಾತೂರನಿಂದ ಬೊಮ್ಮನಳ್ಳಿಗೆ ತೆರಳುವ ಮಾರ್ಗದಲ್ಲಿ ಅರಣ್ಯ ಇಲಾಖೆಯ ತನಿಖಾ ಚೆಕ್ ಪೋಸ್ಟ್ ಆರಂಭಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ತಾಲೂಕಿನಲ್ಲಿ ಅಪಾರವಾದ ಅರಣ್ಯ ಪ್ರದೇಶವಿದೆ. ಮುಂಡಗೋಡದಿಮದ ಶಿರಸಿಗೆ ತೆರಳುವ ಮಾರ್ಗದಲ್ಲಿರುವ ಕಾತೂರ ಎಂಬ ಗ್ರಾಮದಿಂದ 10 ಕಿಮೀ ದೂರದಲ್ಲಿ ಹಾವೇರಿ ಜಿಲ್ಲೆಯ ಗಡಿ ಆರಂಭವಾಗುತ್ತದೆ. ಕಾತೂರನಿಂದ ಈ ಮಾರ್ಗದಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಹಾಗೂ ಹಾನಗಲ್ಲ ತಾಲೂಕುಗಳು ಸಮೀಪದಲ್ಲಿವೆ. ಇದರಿಂದ ಈ ಮಾರ್ಗದಲ್ಲಿ ಅರಣ್ಯಗಳ್ಳರು ಇಲಾಖೆಯವರ ಕಣ್ತಪ್ಪಿಸಿ ಆಗಾಗ ಅಕ್ರಮವಾಗಿ ಕಟ್ಟಿಗೆ ಸಾಗಾಟ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಶಿಗ್ಗಾಂವಿ ಹಾಗೂ ಹಾನಗಲ್ಲ ತಾಲೂಕುಗಳು ಬಯಲು ಸೀಮೆಯಂತಿವೆ. ಈ ತಾಲೂಕುಗಳಲ್ಲಿ ಅರಣ್ಯ ಪ್ರದೇಶ ತುಂಬಾ ಕಡಿಮೆ ಇರುವ ಕಾರಣ ಮುಂಡಗೋಡ ತಾಲೂಕಿನಿಂದ ಕಟ್ಟಿಗೆಯನ್ನು ಈ ಮಾರ್ಗದಲ್ಲಿ ಸಾಗಾಟ ಮಾಡುತ್ತಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ.
ತಾಲೂಕಿನ ಕಲಘಟಗಿ ಗಡಿ ಭಾಗದ ಸನಿಹದ ಅಗಡಿ ಗ್ರಾಮದ ಬಳಿ ಚೆಕ್ ಪೋಸ್ಟ್ ಮಾಡಲಾಗಿದೆ. ಇನ್ನೂ ಬಂಕಾಪುರ ಮಾರ್ಗದ ಬಸನಕಟ್ಟಿ, ಹಾನಗಲ್ಲ ಮಾರ್ಗದ ಕೊಪ್ಪರಸಿಕೊಪ್ಪ ಗಡಿ ಭಾಗದಲ್ಲಿ ಅರಣ್ಯ ಇಲಾಖೆಯ ಚೆಕ್ಪೋಸ್ಟ್ಗಳನ್ನು ನಿರ್ವಿುಸಿದ್ದು, ದಿನದ 24 ಗಂಟೆಗಳ ಕಾಲ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ. ಇದರಿಂದ ಈ ಮಾರ್ಗದಲ್ಲಿ ಅರಣ್ಯಗಳ್ಳರು ಅಕ್ರಮವಾಗಿ ಯಾವುದೇ ಕಟ್ಟಿಗೆ ಸಾಗಿಸಲು ಸಾಧ್ಯವಾಗುವುದಿಲ್ಲ.
ಚೆಕ್ಪೋಸ್ಟ್ ನಿರ್ವಿುಸಿ: ಕಾತೂರನಿಂದ ಆಲಳ್ಳಿ ಮಾರ್ಗವಾಗಿ ಆರೆಗೊಪ್ಪ ಹಾಗೂ ಬೊಮ್ಮನಳ್ಳಿಗೆ ತೆರಳುವ ಮಾರ್ಗವಾಗಿರುವ ಕಾರಣ ಈ ಮಾರ್ಗದಲ್ಲಿ ತಾಲೂಕಿನ ಗಡಿ ಭಾಗದಲ್ಲಿ ಅರಣ್ಯ ಇಲಾಖೆಯವರು ಚೆಕ್ಪೋಸ್ಟ್ ನಿರ್ವಿುಸಿ ಅಕ್ರಮ ಕಟ್ಟಿಗೆ ಸಾಗಾಟಕ್ಕೆ ಕಡಿವಾಣ ಹಾಕಬೇಕಿದೆ. ದಿನದ 24 ಗಂಟೆ ಕಾರ್ಯನಿರ್ವಹಿಸಲು ಸಾಧ್ಯವಾಗದಿದ್ದರೆ ಸಂಜೆ 5ರಿಂದ ಬೆಳಗ್ಗೆ 8 ಗಂಟೆಯವರೆಗೆ ಈ ಮಾರ್ಗದಲ್ಲಿ ಚೆಕ್ಪೋಸ್ಟ್ ಕಾರ್ಯನಿರ್ವಹಿಸುವಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಕ್ರಮ ವಹಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಕಾತೂರನಿಂದ ಬೊಮ್ಮನಳ್ಳಿ ತೆರಳುವ ಮಾರ್ಗದಲ್ಲಿ ಆಗಾಗ ರಾತ್ರಿ ವೇಳೆ ಅಕ್ರಮವಾಗಿ ಕಟ್ಟಿಗೆ ಸಾಗಾಟವಾಗುತ್ತಿರುವ ಮಾತುಗಳು ಕೇಳಿ ಬರುತ್ತಿವೆ. ಈ ಮಾರ್ಗದಲ್ಲಿ ಅರಣ್ಯ ಇಲಾಖೆಯವರು ಚೆಕ್ಪೋಸ್ಟ್ ನಿರ್ವಿುಸಿದರೆ ಅಕ್ರಮ ಕಟ್ಟಿಗೆ ಸಾಗಾಟಕ್ಕೆ ಕಡಿವಾಣ ಹಾಕಲು ಅನುಕೂಲವಾಗುತ್ತದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕು. | ನೀತಿನ್ ರಾಯ್ಕರ ಕಾತೂರ