ಜಾತಿ ಗಣತಿ ತ್ವರಿತವಾಗಿ ಆರಂಭಿಸಿ: ಜಿಬಿಎ ಮುಖ್ಯ ಆಯುಕ್ತರ ಸೂಚನೆ

gba board
Published on

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಕಾರ್ಯವನ್ನು ತ್ವರಿತವಾಗಿ ಪ್ರಾರಂಭಿಸಲು ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿ ಬುಧವಾರ ವರ್ಚ್ಯುವಲ್ ಮೂಲಕ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸಮೀಕ್ಷೆ ಕೈಗೊಳ್ಳಲು ವಿವಿಧ ಇಲಾಖೆಗಳಿಂದ ನಿಯೋಜಿಸಲ್ಪಟ್ಟ ಗಣತಿದಾರರಿಗೆ ಆಯಾ ನಗರ ಪಾಲಿಕೆಗಳಲ್ಲಿ ತರಬೇತಿ ನೀಡಿ ಬೇಗನೆ ಗಣತಿ ಪ್ರಾರಂಭಿಸಬೇಕು. ಇದಕ್ಕಾಗಿ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಬೇಕು ಎಂದು ನಿರ್ದೇಶಿಸಿದರು.

ಸಮೀಕ್ಷೆ ಮೇಲ್ವಿಚಾರಣೆಗಾಗಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಆಯಾ ನಗರ ಪಾಲಿಕೆಗಳ ಆಯುಕ್ತರು ತರಬೇತಿ ನಡೆಸುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಸಮೀಕ್ಷಾ ಕಾರ್ಯಕ್ಕೆ ಗೈರಾದವರಿಗೆ ಸಮೀಕ್ಷಾ ಅಧಿನಿಯಮದ ಅಡಿಯಲ್ಲಿ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ಸ್ಟಿಕ್ಕರ್‌ನಲ್ಲಿ ಯುಎಚ್‌ಐಡಿ ಸಂಖ್ಯೆ ನಮೂದು:

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾದ ತುಳಸಿ ಮದ್ದಿನೇನಿ ಮಾತನಾಡಿ, ಮಹಾನಗರದಲ್ಲಿ ಸಮೀಕ್ಷೆಗಾಗಿ ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ. ಸಮೀಕ್ಷೆಗಾಗಿ ಜಿಪಿಎಸ್ ಆಧಾರಿತ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು, ಮನೆ-ಮನೆಗೆ ಅಂಟಿಸುವ ಸ್ಟಿಕ್ಕರ್‌ನಲ್ಲಿ ಯುಎಚ್‌ಐಡಿ ಸಂಖ್ಯೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತರ ವಿಶೇಷ ಕರ್ತವ್ಯಾಧಿಕಾರಿ ಸೆಲ್ವಮಣಿ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ), ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತ ದಯಾನಂದ್, ನಗರ ಪಾಲಿಕೆಗಳ ಆಯುಕ್ತರಾದ ರಾಜೇಂದ್ರ ಚೋಳನ್, ಡಿ.ಎಸ್.ರಮೇಶ್, ಪಿ. ಸುನೀಲ್ ಕುಮಾರ್, ಕೆ.ಎನ್.ರಮೇಶ್, ಡಾ. ಕೆ.ವಿ. ರಾಜೇಂದ್ರ, ಅಪರ ಆಯುಕ್ತರು, ಜಂಟಿ ಆಯುಕ್ತರು ಹಾಜರಿದ್ದರು.

ಜಿಬಿಎ ವ್ಯಾಪ್ತಿಯಲ್ಲಿ ಸಮೀಕ್ಷಾ ಕಾರ್ಯ ಸಮರ್ಪಕವಾಗಿ ಕೈಗೊಳ್ಳಲು ಅಗತ್ಯ ತಯಾರಿ ನಡೆಸಲಾಗಿದೆ. ಹೆಚ್ಚು ಗಣತಿದಾರರನ್ನು ನಿಯೋಜಿಸಿಕೊಂಡು ವಾರ್ಡ್ ಮಟ್ಟದಲ್ಲಿ ಸರಿಯಾದ ಯೋಜನೆ ರೂಪಿಸಿ ಗಣತಿಯನ್ನು ಕಾಲಮಿತಿಯೊಳಗಾಗಿ ಪೂರ್ಣಗೊಳಿಸಲಾಗುವುದು. ಗಣತಿ ಕಾರ್ಯವನ್ನು ಅಧಿಕಾರಿಗಳು ರಾಂಡಮ್ ತಪಾಸಣೆ ಮಾಡಲಿದ್ದಾರೆ.

- ಮುನೀಶ್ ಮೌದ್ಗಿಲ್, ಜಿಬಿಎ ವಿಶೇಷ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net