

ವಿಜಯಪುರ: ಕರೊನಾ ಪರೀಕ್ಷೆಗೆ ಗಂಟಲು ದ್ರವ ತೆಗೆದು ಬೆಂಗಳೂರಿಗೆ ಕಳುಹಿಸಬೇಕಾದ ಕಾರಣ ಲಿತಾಂಶಕ್ಕೆ 2-3 ದಿನ ಕಾಯಬೇಕಿದ್ದು, ಇದನ್ನು ತಪ್ಪಿಸಲು ತಾಲೂಕು ಕೇಂದ್ರಗಳಲ್ಲಿ ಕರೊನಾ ಪರೀಕ್ಷಾ ಪ್ರಯೋಗಾಲಯ ತೆರೆಯಲು ಗ್ರಾಮಾಂತರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ಆರ್.ನಟೇಶ ಅಧಿಕಾರಿಗಳು ಸೂಚಿಸಿದರು.
ಪಟ್ಟಣದ ದೇವನಹಳ್ಳಿ ರಸ್ತೆಯ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದಲ್ಲಿ ಆರಂಭಿಸಿರುವ ಕ್ವಾರಂಟೈನ್ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿ ಕ್ವಾರಂಟೈನಿಗಳೊಂದಿಗೆ ಕುಂದು-ಕೊರತೆ ಬಗ್ಗೆ ಚರ್ಚೆ ನಡೆಸಿದ ಬಳಿಕ ಮಾತನಾಡಿದರು.
ಕೇಂದ್ರದ ಹೊರ ಆವರಣದಲ್ಲಿ ಎತ್ತರವಾದ ಗೋಡೆ, ಸುಭದ್ರ ಗೇಟ್ ಇದೆ. ವೃದ್ಧರಿಗೆ ಹಾಗೂ ಮಹಿಳೆಯರಿಗೆ ದೈಹಿಕ ಅಂತರದಲ್ಲಿ ಓಡಾಡಿಕೊಂಡಿರಲು ಅನುಕೂಲ ಕಲ್ಪಿಸಿಕೊಡಬೇಕು ಎಂದು ಕ್ವಾರಂಟೈನಿ ಭೂಪೇಂದ್ರ ಕುಮಾರ್ ಮನವಿ ಮಾಡಿದರು.
ಮಾನವೀಯತೆಯ ದೃಷ್ಟಿಯಿಂದ ಬೇಡಿಕೆ ಪರಿಶೀಲಿಸಬೇಕೆಂದು ಅಧಿಕಾರಿಗಳಿಗೆ ಆರ್.ನಟೇಶ್ ತಿಳಿಸಿದರು.
ಆಹಾರ ವಿತರಣೆಯನ್ನು ಖುದ್ದು ಪರಿಶೀಲಿಸಿದ ಅವರು, ಕ್ವಾರಂಟೈನ್ ಕೇಂದ್ರದವರ ಮನವಿ ಮೇರೆಗೆ ಕಾಫಿ/ಟೀ ಹಾಗೂ ಬಿಸಿನೀರಿನ ವ್ಯವಸ್ಥೆ ಕಲ್ಪಿಸಿಕೊಡಲು ಸೂಚಿಸಿದರು.
ಮುಖ್ಯಪೇದೆ ನಾಗೇಶ್, ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಾದ ಡಾ.ಶ್ಯಾಂಸುಂದರ್, ಕಂದಾಯ ಇಲಾಖೆ ಗ್ರಾಮಲೆಕ್ಕಾಧಿಕಾರಿ ಸುನೀಲ್ ಇದ್ದರು.