

ಮಾಲೂರು: ಹಾಲು ಉತ್ಪಾದಕರ ಸಂಘಗಳು ಇಲ್ಲದ ಎಲ್ಲ ಗ್ರಾಮಗಳಲ್ಲಿ ಡೇರಿ ಆರಂಭಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕ ಕೆ.ವೈ.ನಂಜೇಗೌಡ ಸೂಚಿಸಿದರು.
ಪಟ್ಟಣದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಉಪಕಚೇರಿಯಲ್ಲಿ ಗುರುವಾರ ರಾಜ್ಯ ಸಹಕಾರ ಸಂಘ ಮಹಾಮಂಡಳಿ, ಕೋಲಾರ ಜಿಲ್ಲಾ ಸಹಕಾರ ಒಕ್ಕೂಟ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಕೋಲಾರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಮಾಲೂರು ಉಪಕಚೇರಿ ಹಾಗೂ ಜಿಲ್ಲಾ ಸಹಕಾರ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಲೂರು ತಾಲೂಕಿನಲ್ಲಿ ಈಗಾಗಲೇ 179 ಡೇರಿಗಳಿದ್ದು, ಹಾಲು ಉತ್ಪಾದಕರ ಸಹಕಾರ ಸಂಘಗಳು ಇಲ್ಲದ ಹಳ್ಳಿಗಳಲ್ಲಿ, 50 ಲೀಟರ್ ಹಾಲು ಉತ್ಪಾದನೆಯಾಗುವ ಹಳ್ಳಿಗಳಲ್ಲಿ ಹೊಸದಾಗಿ ಡೇರಿ ಪ್ರಾರಂಭಿಸಬೇಕು. ತಾಲೂಕಿನಲ್ಲಿ ಹೆಚ್ಚು ಹಾಲು ಉತ್ಪಾದನೆ ಮಾಡುವಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಶಾಸಕ ಕೆ.ವೈ.ನಂಜೇಗೌಡ ಸೂಚಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಹಾಲಿನ ದರ ಹೆಚ್ಚಿಸಬೇಕೆಂದು ಮನವಿ ಮಾಡಲಾಗಿದೆ. ಹಾಗೂ ಕೋಲಾರ ಡಿಸಿಸಿ ಬ್ಯಾಂಕ್ನ ಚುನಾವಣೆ ನಡೆಸಿದರೆ ಇದರಿಂದ ಮಹಿಳಾ ಸಂಘಗಳಿಗೆ ಮತ್ತು ರೈತ ಸಂಘಗಳಿಗೆ ಸಾಲ ನೀಡಲು ಅನುಕೂಲವಾಗುತ್ತದೆ ಎಂದು ಶಾಸಕ ನಂಜೇಗೌಡ ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಕೆ.ವೈ.ನಂಜೇಗೌಡ ಅವರನ್ನು ಸನ್ಮಾನಿಸಲಾಯಿತು. ಕೋಲಾರ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಪಿ.ಎಂ.ವೆಂಕಟೇಶ್, ಉಪಾಧ್ಯಕ್ಷ ಟಿ.ಕೆ.ಬೈರೇಗೌಡ, ನಿರ್ದೇಶಕರಾದ ಎಸ್.ವಿ.ಗೋವರ್ಧನ ರೆಡ್ಡಿ, ಶಂಕರನಾರಾಯಣಗೌಡ, ಲಕ್ಷ್ಮೀನಾರಾಯಣ, ರಾಮಚಂದ್ರಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ
ಕೆ.ಎಚ್.ಚನ್ನರಾಯಪ್ಪ, ಮಾಲೂರಿನ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ರಾಮಸ್ವಾಮಿ, ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಮುನೇಗೌಡ, ಮಾಲೂರಿನ ಶಿಬಿರ ಕಚೇರಿಯ ಉಪವ್ಯವಸ್ಥಾಪಕ ಡಾ.ಲೋಹಿತ್, ಸಹಕಾರ ಅಭಿವೃದ್ಧಿ ಅಧಿಕಾರಿ ವೀಣಾ, ವ್ಯವಸ್ಥಾಪಕ ಟಿ.ಆರ್.ಮಂಜುನಾಥ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ ಕೆಎಂ, ಸಮನ್ವಯ ಅಧಿಕಾರಿ ಎಂ.ಮಲ್ಲರಾಜ್ ವ್ಯವಸ್ಥಾಪಕಿ ಲಕ್ಷ್ಮೀದೇವಿ, ಇದ್ದರು.
₹ 250 ಕೋಟಿ ವೆಚ್ಚದಲ್ಲಿ ಮೆಗಾಡೇರಿ
ತಾಲೂಕಿನಲ್ಲಿ ಈಗಾಗಲೇ 45 ಬಿಎಂಸಿಗಳಿವೆ. ಜಿಲ್ಲೆಯಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ಮೆಗಾಡೇರಿ ನಿಮಾರ್ಣ ಕಾರ್ಯ ಪ್ರಗತಿಯಲ್ಲಿದ್ದು, ಹಾಲು ಉತ್ಪಾದಕರ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಲು ವಿದ್ಯಾರ್ಥಿ ನಿಲಯವನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಲಾಗಿದೆ. ಹಾಲು ಉತ್ಪಾದಕರ ಮಕ್ಕಳು ಇದರ ಅನುಕೂಲ ಪಡೆಯಬೇಕು. ಸಹಕಾರ ಸಂಘಗಳಲ್ಲಿ ಜಾತ್ಯತಿತವಾಗಿ ಪಕ್ಷಾತಿತವಾಗಿ ಸಹಕಾರ ಸಂಘಗಳನ್ನು ಪ್ರಾರಂಭಿಸಿ ಕಾರ್ಯ ಚಟುವಟಿಕೆಗಳನ್ನು ಮಾಡುವುದರಿಂದ ಬಡ ರೈತರಿಗೆ ಅನುಕೂಲವಾಗುತ್ತದೆ ಎಂದು ನಂಜೇಗೌಡ ತಿಳಿಸಿದರು.