

ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ 45 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದರೂ ನನೆಗುದಿಗೆ ಬಿದ್ದಿರುವ ಕ್ಯಾನ್ಸರ್ ಆಸ್ಪತ್ರೆಯನ್ನು ಆರಂಭಿಸಬೇಕೆಂದು ಒತ್ತಾಯಿಸಿ ಕನ್ನಡಸೇನೆ ಸಂಘಟನೆಯಿಂದ ಶನಿವಾರ ನಗರದ ಹಿಂದಿಭವನದ ಸಮೀಪ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯ ಕ್ಯಾನ್ಸರ್ ರೋಗಿಗಳು ಬೆಂಗಳೂರಿನ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಅಲೆದಾಡುವುದನ್ನು ತಪ್ಪಿಸಲು ಹಲವು ದಿಗ್ಗಜರ ಪ್ರಯತ್ನದಿಂದ ಕ್ಯಾನ್ಸರ್ ನಿಯಂತ್ರಣ ಯೋಜನೆಯಡಿ 1994 ಫೆ.5ರಂದು ಮಂಡ್ಯದಲ್ಲಿ ಪೆರಿಫೆರಲ್ ಕ್ಯಾನ್ಸರ್ ಕೇಂದ್ರ ಆರಂಭವಾಯಿತು. ಹಲವು ವರ್ಷ ಉತ್ತಮ ಸೇವೆಯೂ ಸಿಗುತ್ತಿತ್ತು. ಮಂಡ್ಯ ಜಿಲ್ಲೆ ಮಾತ್ರವಲ್ಲದೆ ರಾಮನಗರ, ಚನ್ನಪಟ್ಟಣ, ಮಾಗಡಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ತಿ.ನರಸೀಪುರ ಸೇರಿದಂತೆ ಹಲವು ಜಿಲ್ಲೆಗಳಿಂದ ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕಳೆದೆರಡು ವರ್ಷದಿಂದ ಆಸತ್ರೆಗೆ ಕಾಯಕಲ್ಪ ಸಿಗದೆ ದುಸ್ಥಿತಿಯತ್ತ ಸಾಗಿರುವುದು ರೋಗಿಗಳ ಸಂಕಟವನ್ನು ಹೆಚ್ಚು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಮ್ಯಾ ಅವರು ಸಂಸದೆಯಾಗಿದ್ದ ವೇಳೆ ಆಸ್ಪತ್ರೆಗೆ ಸುಸಜ್ಜಿತ ಕಟ್ಟಡ ಸೇರಿದಂತೆ ಅಗತ್ಯ ಯಂತ್ರೋಪಕರಣಗಳೊಂದಿಗೆ ಮೇಲ್ದರ್ಜೆಗೇರಿಸಲು ಮಂಜೂರಾತಿ ಕೊಡಿಸಿದ್ದರು. ಈಗಿನ ಪರಿಸ್ಥಿತಿ ಹೇಗಾಗಿದೆ ಎಂದರೆ ಜಿಲ್ಲೆಯಲ್ಲಿ 1200ಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳಿದ್ದು, ಮಿಮ್ಸ್ ಆಸ್ಪತ್ರೆಗೆ ರೋಗಿಗಳು ಬಂದರೆ ಅವರನ್ನು ಬೆಂಗಳೂರು-ಮೈಸೂರು ಆಸ್ಪತ್ರೆಗಳಿಗೆ ರವಾನಿಸುವ ಕೆಟ್ಟ ಚಾಳಿ ನಡೆಯುತ್ತಿದೆ. ಆದರೆ ಇದರಿಂದ ರೋಗಿಗಳಿಗೆ ಆಗುತ್ತಿರುವ ತೊಂದರೆ ಬಗ್ಗೆ ಕನಿಷ್ಟ ಮಟ್ಟದಲ್ಲಿಯೂ ಜನಪ್ರತಿನಿಧಿಗಳು ಅಧಿಕಾರಿಗಳಿಂದ ಸ್ಪಂದನೆ ಸಿಗದೆ ಇರುವುದು ದುರಂತ. ಪ್ರತಿವಾರವೂ ರೋಗಕ್ಕೆ ಚಿಕಿತ್ಸೆ ಪಡೆಯಲು ಬೆಂಗಳೂರು-ಮೈಸೂರಿಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದ್ದ ಗ್ರಾಮೀಣ ಭಾಗದ ಜನರು ಚಿಕಿತ್ಸೆಗೆ ಹಣ ಕೊಡುವುದಲ್ಲದೆ ದೂರದ ಪ್ರಯಾಣವನ್ನು ಮಾಡಬೇಕಾಗಿದೆ. ಇನ್ನೂ ಆರ್ಥಿಕವಾಗಿ ಹಿಂದುಳಿದಿರುವವರ ಪಾಡು ಹೇಳತೀರದು ಎಂದು ಆಕ್ರೋಶ ಹೊರಹಾಕಿದರು.
ಇಂದಿಗೂ ಪ್ರತಿನಿತ್ಯ 25-30 ಜನ ರೋಗಿಗಳು ಚಿಕಿತ್ಸೆಗೆಂದು ಬಂದು ಚಿಕಿತ್ಸೆ ಸಿಗದೇ ಹೋಗಬೇಕಾಗಿದೆ. ರಾಜ್ಯ ಸರ್ಕಾರ ಇದನ್ನು ಮನಗಂಡು ತಕ್ಷಣ ರೋಗಿಗಳಿಗೆ ಮತ್ತು ಹೊರ ಜಿಲ್ಲೆಗಳ ರೋಗಿಗಳಿಗೆ ಅನುಕೂಲವಾಗಲು ಕ್ಯಾನ್ಸರ್ ಆಸ್ಪತ್ರೆಯನ್ನು 15 ದಿನದ ಒಳಗಡೆ ಪ್ರಾರಂಭಿಸಲು ತಾವು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್, ಮಹಿಳಾಧ್ಯಕ್ಷೆ ಸೌಭಾಗ್ಯ, ಉಪಾಧ್ಯಕ್ಷರಾದ ಮಹಾಂತಪ್ಪ, ಬೆಟ್ಟಳ್ಳಿ ಮಂಜುನಾಥ್, ಮಂಡ್ಯ ನಗರಾಧ್ಯಕ್ಷ ಶಿವಾಲಿ, ಜಿಲ್ಲಾ ಕಾರ್ಯದರ್ಶಿ ಶಿವು, ಸಂಘಟನೆ ಕಾರ್ಯದರ್ಶಿ ಅಂದಾನಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಸಂಚಾಲಕ ಶಿವರಾಜ್, ಅರಕೆರೆ ರಾಘು, ಅಭಿಷೇಕ್, ಚಂದ್ರು, ಬಸವರಾಜ್, ರವಿ ಇತರರಿದ್ದರು.