

ಹುಬ್ಬಳ್ಳಿ : ಯುವಕರು ಸರ್ಕಾರಿ ನೌಕರಿಗಾಗಿ ಮುಗಿಬೀಳದೆ ಸ್ವಂತ ಉದ್ಯಮ ಪ್ರಾರಂಭಿಸುವ ಮೂಲಕ ಮತ್ತೊಬ್ಬರಿಗೆ ಉದ್ಯೋಗ ಕೊಡುವಂತಾಗಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಹುಬ್ಬಳ್ಳಿಯ ರೈಲ್ವೆ ಆಫೀಸರ್ಸ್ ಕ್ಲಬ್ನಲ್ಲಿ ಶನಿವಾರ ಆಯೋಜಿಸಿದ್ದ ರೋಜಗಾರ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಉದ್ಯೋಗ ಪಡೆಯುತ್ತಿರುವವರು ತಮ್ಮ ಸಂಬಂಧಿಗಳಿಗೂ ನೌಕರಿ ಕೊಡಿಸಬೇಕೆಂದು ಪ್ರಯತ್ನಿಸಬಾರದು. ಅದರ ಬದಲಾಗಿ, ಸ್ವಂತ ಉದ್ಯಮ ಪ್ರಾರಂಭಿಸುವಂತೆ ಅವರನ್ನು ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ನೌಕರರು ಜನರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಯಾವುದೇ ಒಬ್ಬ ಅಧಿಕಾರಿ ಜನರೊಂದಿಗೆ ಅನುಚಿತವಾಗಿ ವರ್ತಿಸಿದರೆ ಇಡೀ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಳೆದ ಎರಡು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರು ರೋಜಗಾರ ಮೇಳ ಆರಂಭಿಸಿದ್ದಾರೆ. ಇದು 16ನೇ ರೋಜಗಾರ ಮೇಳವಾಗಿದ್ದು, ಈವರೆಗೂ ರೋಜಗಾರ ಮೇಳದಲ್ಲಿ 2.22 ಲಕ್ಷ ನೇಮಕಾತಿ ಆದೇಶ ಪತ್ರ ಕೊಡಲಾಗಿದೆ. ರೈಲ್ವೆಯಲ್ಲಿ 8,440 ಉದ್ಯೋಗದ ನೇಮಕಾತಿ ಪತ್ರ ವಿತರಿಸಲಾಗಿದೆ. ಈ ಪೈಕಿ ನೈಋತ್ಯ ರೈಲ್ವೆ ವಲಯದಲ್ಲಿ 1,135 ಜನರಿಗೆ ಉದ್ಯೋಗ ನೀಡಲಾಗಿದೆ. ನೈಋತ್ಯ ರೈಲ್ವೆಯಲ್ಲಿ ಇನ್ನೂ ಖಾಲಿ ಇರುವ 3,500 ಹುದ್ದೆಗಳನ್ನು ಮುಂದಿನ ಎರಡು ವರ್ಷಗಳಲ್ಲಿ ಭರ್ತಿ ಮಾಡಲಾಗುವುದು ಎಂದು ವಿವರಿಸಿದರು.
ಕಳೆದ 10 ವರ್ಷದಲ್ಲಿ 23.73 ಕೋಟಿ ಇಪಿಎಫ್ಒ ನೋಂದಣಿ ಆಗಿರುವುದೇ ಹೊಸ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಸಾಕ್ಷಿ. ಮಹಿಳಾ ಉದ್ಯೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಕಳೆದ ಒಂದು ದಶಕದಲ್ಲಿ 43 ಸಾವಿರ ಕಿಮೀ ರೈಲ್ವೆ ಮಾರ್ಗ ವಿದ್ಯುದ್ದೀಕರಣಗೊಂಡಿದೆ. ಈ ಹಿಂದೆ ಗೇಜ್ ಬದಲಾಯಿಸಲೂ ವರ್ಷಗಟ್ಟಲೇ ಸಮಯ ವ್ಯರ್ಥವಾಗುತ್ತಿತ್ತು. ಆದರೆ, ಈಗ ಕಾಲ ಬದಲಾಗಿದೆ. ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದರು.
56 ಜನರಿಗೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ನೇಮಕಾತಿ ಪತ್ರ ವಿತರಿಸಲಾಯಿತು. ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರ, ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕಿ ಬೇಲಾ ಮೀನಾ, ಪಿಸಿಪಿಒ ಸೂರ್ಯ ಪ್ರಕಾಶ ಹಾಗೂ ಇತರರು ಇದ್ದರು.