

ಎನ್.ಆರ್.ಪುರ: ಸಂಜೀವಿನಿ ಒಕ್ಕೂಟದ ಸದಸ್ಯರು, ಸ್ವಸಹಾಯ ಸಂಘದ ಸದಸ್ಯರು ಪ್ರತಿ ತಿಂಗಳ ಸಭೆಯಲ್ಲಿ ಭಾಗವಹಿಸಬೇಕು ಎಂದು ಜಿಪಂ ಯೋಜನಾ ನಿರ್ದೇಶಕಿ ಎಸ್.ನಯನಾ ಹೇಳಿದರು.
ಕಾನೂರಿನಲ್ಲಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸ್ವಸಹಾಯ ಸಂಘದ ಸದಸ್ಯರು ಸಾಲವನ್ನು ಸಕಾಲಕ್ಕೆ ಮರು ಪಾವತಿಸಬೇಕು. ಯೋಜನೆಯಿಂದ ನೀಡುವ ತರಬೇತಿಗಳನ್ನು ಪಡೆದು ಮಹಿಳೆಯರು ಆರ್ಥಿಕವಾಗಿ ಸ್ವಾವಲಭಿಯಾಗಬೇಕು. ಮಲೆನಾಡು ಭಾಗದಲ್ಲಿ ನಿಮಗೆ ಅನುಕೂಲವಾಗುವ ಉದ್ಯಮ ಆರಂಭಿಸಬಹುದು. ಹೈನುಗಾರಿಕೆ ಮಾಡಬಹುದು ಎಂದರು.
ಕಾನೂರು ಗ್ರಾಪಂ ಉಪಾಧ್ಯಕ್ಷೆ ಮೋಹಿನಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳ ಮಾದರಿಯಲ್ಲೇ ನೀವೂ ಸದಾ ಕೆಲಸ ಮಾಡಬೇಕು. ಸರ್ಕಾರದ ಅನುದಾನ ಸದ್ಬಳಕೆ ಮಾಡಿಕೊಳ್ಳಿ ಎಂದರು.
ಪಿಡಿಒ ಶ್ರೀನಿವಾಸ್ ಮಾತನಾಡಿ, ಕಾನೂರು ಗ್ರಾಪಂ ತಾಲೂಕಿನಲ್ಲೇ ಪ್ರಥಮವಾಗಿ 9 ಲಕ್ಷ ರೂಪಾಯಿ ವೆಚ್ಚದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಸಂಜೀವಿನಿ ಶೆಡ್ ನಿರ್ಮಿಸಿಕೊಟ್ಟಿದ್ದೇವೆ. ಗ್ರಾಪಂನಲ್ಲಿ ಕಸ ವಿಂಗಡಿಸಿ ಮಾರಾಟ ಮಾಡಿದರೆ ಸಂಘಗಳಿಗೆ ಆದಾಯ ಬರಲಿದೆ ಎಂದು ಹೇಳಿದರು.
ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಉಮಾ ಮಾತನಾಡಿ, ಕಾನೂರು ಗ್ರಾಪಂನಲ್ಲಿ 45 ಸ್ವಸಹಾಯ ಸಂಘಗಳಿವೆ. ಸಂಜೀವಿನಿ ಒಕ್ಕೂಟದ ಬಗ್ಗೆ ಹೆಚ್ಚಿನ ಮಾಹಿತಿ, ತರಬೇತಿ ಪಡೆದು ಕಾರ್ಯಕ್ರಮ ರೂಪಿಸಲಾಗುವುದು ಎಂದರು.
ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಸುಬ್ರಹ್ಮಣ್ಯ, ಲತಾ, ಜಿಲ್ಲಾ ವ್ಯವವ್ಥಾಪಕ ರಾಜೇಶ್, ಗ್ರಾಪಂ ಅಧ್ಯಕ್ಷ ಎಸ್.ರತ್ನಾಕರ್, ಸದಸ್ಯರಾದ ವಿಜಯಕುಮಾರ್, ವಿಶಾಂತಿ, ಶಿವಮೂರ್ತಿ, ಸವಿತಾ, ಸುಮಲತಾ, ನಯನಾ, ನಾಗರತ್ನಾ, ಜಯಲಕ್ಷ್ಮೀ, ಮನೋಹರ್ ಇದ್ದರು.