

ಶಿವಮೊಗ್ಗ: ಸಿನಿಮಾ ಮಾತ್ರವಲ್ಲ ಎಲ್ಲ ರಂಗದಲ್ಲೂ ಈಗ ಸ್ಟಾರ್ ವಾರ್ ಕಾಮನ್ ಆಗಿಬಿಟ್ಟಿದೆ. ಸ್ಟಾರ್ ವಾರ್ ಎಂಬುದು ಸಿನಿಮಾಕ್ಕೆ ಸೀಮಿತವಾಗಬೇಕೇ ವಿನಃ ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು ಎಂದು ನಟ ಶಿವರಾಜ್‌ಕುಮಾರ್ ಹೇಳಿದರು.
ನಗರದಲ್ಲಿ ಶನಿವಾರ ಮಾತನಾಡಿದ ಅವರು, ಸಿನಿ ರಂಗದಲ್ಲಿ ನಾಯಕರ ಕಿತ್ತಾಟ ಮಾಮೂಲಿ ಆಗಿಬಿಟ್ಟಿದೆ. ಇದು ಕನ್ನಡವಷ್ಟೇ ಅಲ್ಲ, ಎಲ್ಲ ಭಾಷೆಗಳಲ್ಲೂ ಇದೆ. ಎವರಿಥಿಂಗ್ ಫೇರ್ ಇನ್ ಲವ್ ಆ್ಯಂಡ್ ವಾರ್ ಎಂಬಂತೆ ಆಗಿದೆ. ವಿಶೇಷವಾಗಿ ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟರ ನಡುವೆ ಅನ್ಯೋನ್ಯತೆ ಇದೆ. ಆ ವಾತಾವರಣ ಕನ್ನಡ ಚಿತ್ರರಂಗದಲ್ಲೂ ಬರುವಂತೆ ಮಾಡುತ್ತೇನೆ ಎಂದು ಹೇಳಿದರು.
ವೇದ ಸಿನಿಮಾದಲ್ಲಿ ಕಂಟೆಂಟ್ ಇತ್ತು. ಅದಾದ ನಂತರ ಅದರ ರೀತಿಯ ಸಿನಿಮಾ ಬರಲಿಲ್ಲವಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವೇದ ನಂತರ ಗೋಸ್ಟ್ ಕೂಡ ಕಂಟೆಂಟ್ ಓರಿಯಂಟ್ ಸಿನಿಮಾ ಆಗಿತ್ತು. ನನ್ನ ಅನೇಕ ಸಿನಿಮಾಗಳು ಕಂಟೆಂಟ್ ಓರಿಯೆಂಟ್ ಆಗಿಯೇ ಮೂಡಿಬಂದಿವೆ. ಅದು ಜನರಿಗೂ ಇಷ್ಟವಾಗುತ್ತಿದೆ ಎಂದರು. ಶೀಘ್ರ ಬಿಡುಗಡೆ ಆಗಲಿರುವ ಕರಟಕ ದಮನಕ ಸಿನಿಮಾದಲ್ಲಿ ಒಳ್ಳೆಯ ಕತೆ ಇದೆ. ಬೇರೆ ಹೆಸರು ಇಡಬಹುದಿತ್ತು. ಆದರೆ ಕತೆಗಾಗಿ ಅದೇ ಸಿನಿಮಾ ಟೈಟಲ್ ಉಳಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.