

ಕೆ.ಎನ್.ರಾಘವೇಂದ್ರ ಮಂಡ್ಯ
ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿ 5,67 ಲಕ್ಷ ಮತ ಗಳಿಸಿ ಗಮನ ಸೆಳೆದಿದ್ದ ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಅವರಿಗೆ ವಿಧಾನ ಪರಿಷತ್ ನಾಮನಿರ್ದೇಶನ ಪಟ್ಟ ದಕ್ಕುವ ಸಾಧ್ಯತೆ ಇದೆ.
ಕಾಂಗ್ರೆಸ್‌ನ ಯು.ಬಿ.ವೆಂಕಟೇಶ್, ಪ್ರಕಾಶ್ ರಾಥೋಡ್ ಅವರ ಪರಿಷತ್ ಸದಸ್ಯತ್ವ ಅವಧಿ ಮುಕ್ತಾಯವಾಗಿದೆ. ಬಿಜೆಪಿ ವಿಧಾನ ಪರಿಷತ್ ಸದಸ್ಯರಾಗಿದ್ದ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗಿರುವುದರಿಂದ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನು ಜೆಡಿಎಸ್ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ಅಧಿಕಾರಾವಧಿ ಜು.27ಕ್ಕೆ ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ವಿಧಾನ ಪರಿಷತ್‌ನ ನಾಲ್ಕು ಸ್ಥಾನಕ್ಕೆ ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಸ್ಟಾರ್ ಚಂದ್ರು ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.
ಸ್ಟಾರ್ ಚಂದ್ರು ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅಚ್ಚರಿಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಮೂಲತಃ ನಾಗಮಂಗಲ ತಾಲೂಕು ಕನ್ನಾಘಟ್ಟ ಗ್ರಾಮದವರಾದ ಇವರು, ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಿದ್ದಾರೆ. ರಾಜಕೀಯವಾಗಿ ಯಾವೊಂದು ಚುನಾವಣೆಗೆ ಸ್ಪರ್ಧೆ ಮಾಡಿರಲಿಲ್ಲ. ಆದರೆ ಏಕಾಏಕಿ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾದರು. ಎರಡು ಬಾರಿ ಸಿಎಂ ಆಗಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಎದುರು ಸಮರ್ಥವಾಗಿ ಚುನಾವಣೆ ಎದುರಿಸಿದರು. ಈ ಚುನಾವಣೆಯಲ್ಲಿ ಸೋಲು ಕಂಡರೂ ಗಳಿಸಿದ ಮತಗಳು ಕಡಿಮೆ ಏನಲ್ಲ. 5,67,261 ಮತ ಗಳಿಸಿ ಪ್ರಥಮ ಪ್ರಯತ್ನದಲ್ಲಿಯೇ ತಮ್ಮ ಬಲ ಸಾಬೀತುಪಡಿಸಿಕೊಂಡರು. ಎಚ್‌ಡಿಕೆ ಹೊರತುಪಡಿಸಿ ಇನ್ಯಾವುದೇ ಎದುರಾಳಿ ಅಭ್ಯರ್ಥಿಯಾಗಿದ್ದರೂ ಫಲಿತಾಂಶ ಜೆಡಿಎಸ್‌ಗೆ ಸುಲಭವಾಗಿರಲಿಲ್ಲ ಎನ್ನುವುದು ಬಹಿರಂಗ ಸತ್ಯ.
ಲೋಕಸಭಾ ಚುನಾವಣೆ ಸೋಲಿನ ಬಳಿಕವೂ ಜಿಲ್ಲಾ ರಾಜಕಾರಣದಲ್ಲಿ ಸ್ಟಾರ್ ಚಂದ್ರು ಸಕ್ರಿಯವಾಗಿದ್ದಾರೆ. ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಮಾತ್ರವಲ್ಲದೆ ಮಂಡ್ಯ ಲೋಕಸಭೆಯ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪಕ್ಷದ ಸಂಘಟನೆ ಜತೆಗೆ ಆರ್ಥಿಕವಾಗಿಯೂ ಬಲ ತುಂಬುತ್ತಿದ್ದಾರೆ. ಮುಖ್ಯವಾಗಿ ಕಾಂಗ್ರೆಸ್‌ನ ಶಾಸಕರು, ಮಾಜಿ ಶಾಸಕರು ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ.
ಚಂದ್ರುಗಿದೆ ಪ್ರಬಲ ಬೆಂಬಲ
ಸ್ಟಾರ್ ಚಂದ್ರು ರಾಜಕೀಯವಾಗಿ ಇತ್ತೀಚಿನ ವರ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಮೂಲತಃ ರಾಜಕೀಯ ಕುಟುಂಬಕ್ಕೆ ಸೇರಿದವರು. ಇವರ ಸಹೋದರ ಕೆ.ಎಚ್.ಪುಟ್ಟಸ್ವಾಮಿಗೌಡ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪ್ರಥಮ ಪ್ರಯತ್ನದಲ್ಲಿಯೇ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಇವರ ಬೆಂಬಲವೂ ರಾಜ್ಯಸರ್ಕಾರಕ್ಕಿದೆ.
ಸಧ್ಯ ರಾಜ್ಯಸರ್ಕಾರಕ್ಕೆ ನಾಲ್ಕು ಸ್ಥಾನಗಳ ನಾಮನಿರ್ದೇಶನ ಮಾಡುವ ಅವಕಾಶವಿದೆಯಾದರೂ, ಇದಕ್ಕೆ ಪೈಪೋಟಿಯೂ ಪ್ರಬಲವಾಗಿದೆ. 40ಕ್ಕೂ ಹೆಚ್ಚು ಆಕಾಂಕ್ಷಿತರು ನಾಯಕರಿಗೆ ದುಂಬಾಲು ಬಿದ್ದಿದ್ದಾರೆ. ಈ ಪೈಕಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುತಿಸಿಕೊಂಡಿರುವ ಹಲವರು ಪೈಪೋಟಿ ನಡೆಸುತ್ತಿದ್ದಾರೆ. ಆದರೆ ಸ್ಟಾರ್ ಚಂದ್ರು ಸಿಎಂ, ಡಿಸಿಎಂ ಎರಡು ಪಾಳಯದಲ್ಲಿ ಸಕ್ರಿಯವಾಗಿದ್ದಾರೆ. ಇನ್ನು ಒಕ್ಕಲಿಗ ಕೋಟಾದಲ್ಲಿ ಚಂದ್ರು ಅವರಿಗೆ ಚನ್ನಪಟ್ಟಣ ಕ್ಷೇತ್ರದ ರಘುನಂದನ್ ರಾಮಣ್ಣ ಅವರು ಪೈಪೋಟಿ ಎನಿಸಬಹುದಾದರೂ ರಾಜಕೀಯವಾಗಿ ಸ್ಟಾರ್ ಚಂದ್ರು ಅವರಷ್ಟು ಪ್ರಬಲವಾಗಿ ಗುರುತಿಸಿಕೊಂಡಿಲ್ಲ. ಜೆಡಿಎಸ್ ಭದ್ರಕೋಟೆಯಾಗಿದ್ದ ಮಂಡ್ಯ ಜಿಲ್ಲೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಪತ್ಯ ಸಾಧಿಸುವಲ್ಲಿ ಜೋಡೆತ್ತುಗಳಾದ ಚಲುವರಾಯಸ್ವಾಮಿ ಮತ್ತು ನರೇಂದ್ರಸ್ವಾಮಿ ಸಫಲರಾಗಿದ್ದರು. ಇದಕ್ಕೆ ಪೂರಕವಾಗಿ ಜಿಲ್ಲೆಯಲ್ಲಿ ಬಹುಸಂಖ್ಯಾತ ಒಕ್ಕಲಿಗರನ್ನು ಸೆಳೆಯಲು ಸ್ಟಾರ್ ಚಂದ್ರು ಅವರಿಗೆ ಪರಿಷತ್ ಸದಸ್ಯ ಸ್ಥಾನ ಕಲ್ಪಿಸುವ ಹೊಣೆಗಾರಿಕೆಯೂ ಕಾಂಗ್ರೆಸ್‌ವರಿಷ್ಠರ ಮೇಲಿದೆ.
ಎರಡು ದಶಕದಿಂದ ಅವಕಾಶ ಸಿಕ್ಕಿಲ್ಲ
ಹಾಗೆ ನೋಡಿದರೆ ಕಾಂಗ್ರೆಸ್‌ನಿಂದ ವಿಧಾನ ಪರಿಷತ್ ನಾಮನಿರ್ದೇಶನ ಜಿಲ್ಲೆಗೆ ದೊರೆತು ಬರೋಬರಿ 24 ವರ್ಷವಾಗಿದೆ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಾಜಿ ಶಾಸಕ ಜೆ.ದೇವಯ್ಯ ಅವರ ಪುತ್ರ ಎಂ.ಡಿ.ರಮೇಶ್‌ರಾಜು ಅವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಿದ್ದರು. ಇವರು 2001ರಿಂದ 2007ರವರೆಗೆ ಪರಿಷತ್ ಸದಸ್ಯರಾಗಿದ್ದರು. ಇದಾದ ಬಳಿಕ ಈವರೆಗೆ ಕಾಂಗ್ರೆಸ್‌ನಿಂದ ಜಿಲ್ಲೆಗೆ ಎಂಎಲ್‌ಸಿ ನಾಮನಿರ್ದೇಶನದ ಅವಕಾಶ ಒದಗಿ ಬಂದಿಲ್ಲ.
2013ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದರು. ಆ ವೇಳೆಯೂ ಜಿಲ್ಲೆಗೆ ಎಂಎಲ್‌ಸಿ ನಾಮನಿರ್ದೇಶನ ಸ್ಥಾನ ಕಲ್ಪಿಸಿಲ್ಲ. ಈಗ ಮತ್ತೊಮ್ಮೆ ಸಿಎಂ ಆಗಿದ್ದು, ಜಿಲ್ಲೆಯಲ್ಲಿ ಮೇಲುಕೋಟೆ ಸೇರಿದಂತೆ ಆರು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಆದ್ದರಿಂದ ನಾಮನಿರ್ದೇಶನದ ಅವಕಾಶವನ್ನು ಜಿಲ್ಲೆಗೆ ಕೊಡಬೇಕೆನ್ನುವ ಒತ್ತಾಯವಿದೆ.
ಪಿಎಂಎನ್‌ಗೆ ಸಚಿವ ಸ್ಥಾನ?
ಜಿಲ್ಲೆಯ ಹಿರಿಯ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಸಚಿವ ಸ್ಥಾನ ಸಿಗುವ ವಿಷಯ ಇನ್ನೂ ಇತ್ಯರ್ಥವಾಗಿಲ್ಲ. 2013ರಲ್ಲಿ ಜಿಲ್ಲೆಯಲ್ಲಿ ಆಯ್ಕೆಯಾಗಿದ್ದ ಇಬ್ಬರೇ ಶಾಸಕರ ಪೈಕಿ ನರೇಂದ್ರಸ್ವಾಮಿ ಕೂಡ ಒಬ್ಬರು. ಆದರೆ ಅಂದು ಅಂಬರೀಷ್ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. 2023ರ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲಿತ ಸೇರಿದಂತೆ ಆರು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ. ಆದಾಗ್ಯೂ ಪರಿಶಿಷ್ಟ ಜಾತಿ ಕೋಟಾದಿಂದ ನರೇಂದ್ರಸ್ವಾಮಿ ಅವರಿಗೆ ಅವಕಾಶ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ಸಂಪುಟ ಪುನರ್‌ರಚನೆ ವೇಳೆ ಪಿಎಂಎನ್‌ಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.