ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಎಸ್.ಸಿ. ಸತೀಶ್

11mdk05
Published on

ಮಡಿಕೇರಿ
ಮಡಿಕೇರಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಎಸ್.ಸಿ. ಸತೀಶ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಬಿಜೆಪಿ ಸದಸ್ಯ ಕೆ.ಎಸ್. ರಮೇಶ್ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸತೀಶ್ ಹೆಸರು ಸೂಚಿಸಿದರು. ಉಳಿದ ಸದಸ್ಯರಾದ ಬಿಜೆಪಿಯ ಸಬಿತಾ, ಉಷಾ ಕುಮಾರಿ, ಚಂದ್ರಶೇಖರ್, ಕಲಾವತಿ, ಶಾರದಾ ನಾಗರಾಜ್, ಕಾಂಗ್ರೆಸ್‌ನ ರಾಜೇಶ್ ಯಲ್ಲಪ್ಪ ಮತ್ತು ಜೆಡಿಎಸ್ ಸದಸ್ಯ ಮುಸ್ತಾಫ ಅನುಮೋದನೆ ನೀಡಿದರು. ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಸಮಿತಿಗೆ ನೂತನ ಅಧ್ಯಕ್ಷರ ಹೆಸರು ಘೋಷಿಸಿದರು. ಈ ಸಂದರ್ಭ ಮಾತನಾಡಿದ ಅನಿತಾ ಪೂವಯ್ಯ ನಗರದ ಅಭಿವೃದ್ಧಿಗೆ ಎಲ್ಲರೂ ಒಗ್ಗೂಡಿ ಶ್ರಮಿಸುವಂತೆ ಕರೆ ನೀಡಿದರು.

ಈ ವೇಳೆ ಮಾತನಾಡಿದ ಕಾಂಗ್ರೆಸ್ ಸದಸ್ಯ ರಾಜೇಶ್ ಯಲ್ಲಪ್ಪ, ಕಳೆದ ಬಾರಿ ಸ್ಥಾಯಿ ಸಮಿತಿಯಲ್ಲಿ ವಿರೋಧ ಪಕ್ಷದವರನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ. ಈ ಬಾರಿ ತಾರತಮ್ಯ ಮಾಡಿಲ್ಲ ಎಂದರು. ಕೆಲವೊಮ್ಮೆ ಅನಿವಾರ್ಯ ಸಂದರ್ಭದಲ್ಲಿ ಸದಸ್ಯರ ಅಭಿಪ್ರಾಯ ಪಡೆಯದೆ ಅಧ್ಯಕ್ಷರೇ ದಿಢೀರ್ ನಿರ್ಧಾರ ತೆಗೆದುಕೊಳ್ಳಬೇಕಾಗಬಹುದು. ಅಂತಹ ವಿಚಾರದಲ್ಲಿ ವಿರೋಧ ಇರುವುದಿಲ್ಲ. ಉಳಿದಂತೆ ಎಲ್ಲರ ಸಲಹೆ ಸೂಚನೆ ಪಡೆದು ಕೆಲಸ ನಿರ್ವಹಿಸಬೇಕು ಎಂದರು. ಜೆಡಿಎಸ್ ಸದಸ್ಯ ಮುಸ್ತಫಾ ಮಾತನಾಡಿ, ನೂತನ ಅಧ್ಯಕ್ಷರು ಪಕ್ಷಾತೀತವಾಗಿ ಕಾರ್ಯ ನಿರ್ವಹಿಸಬೇಕು. ನಗರದ ೨೩ ವಾರ್ಡ್‌ಗಳಿಗೂ ಸಮಾನವಾಗಿ ಅನುದಾನ ಹಂಚಿಕೆ ಮಾಡಬೇಕೆಂದರು. ಸದಸ್ಯ ಕೆ.ಎಸ್. ರಮೇಶ್ ಮಾತನಾಡಿ, ಸ್ಥಾಯಿ ಸಮಿತಿ ಅಧ್ಯಕ್ಷರು ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು. ತಿಂಗಳಿಗೊಮ್ಮೆಯಾದರೂ ಕಡ್ಡಾಯವಾಗಿ ಸಭೆ ನಡೆಸಬೇಕೆಂದು ಸಲಹೆ ನೀಡಿದರು.

ನೂತನ ಅಧ್ಯಕ್ಷ ಸಿ.ಎಸ್. ಸತೀಶ್ ಮಾತನಾಡಿ, ನಗರದ ಸವಾರ್ಂಗೀಣ ಅಭಿವೃದ್ದಿಗೆ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ಸಮಸ್ಯೆಗಳ ಕುರಿತು ಗಮನಕ್ಕೆ ತಂದಲ್ಲಿ ನಗರಸಭೆ ಅಧ್ಯಕ್ಷರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪಕ್ಷ ಬೇಧ ಮರೆತು ಎಲ್ಲರೂ ಸಹೋದರರಂತೆ ಇರೋಣವೆಂದು ಹೇಳಿದರು. ಮುಂದಿನ ೧ ವರ್ಷದ ಅವಧಿಗೆ ಸಿ.ಎಸ್. ಸತೀಶ್ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ನೂತನ ಅಧ್ಯಕ್ಷರಿಗೆ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಪೌರಾಯುಕ್ತ ವಿಜಯ್ ಸೇರಿದಂತೆ ಸ್ಥಾಯಿ ಸಮಿತಿ ಸದಸ್ಯರು ಹೂಗುಚ್ಚ ನೀಡಿ ಅಭಿನಂದಿಸಿ, ಶುಭ ಹಾರೈಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net