ಕಾಮಗಾರಿಗಳಲ್ಲಿ ಬಿ.ಐ.ಎಸ್. ಮಾನ್ಯತೆಯ ವಸ್ತುಗಳನ್ನು ಬಳಸಿ: ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

Bis meeting
Published on

ಕಾರವಾರ: ಜಿಲ್ಲೆಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ನಿರ್ವಹಿಸುವ ಇಲಾಖೆಗಳು, ಕಾಮಗಾರಿಗೆ ಬಳಸುವ ಉತ್ಪನ್ನಗಳು ಭಾರತೀಯ ಮಾನಕ ಬ್ಯುರೋ ಬಿಐಎಸ್ ಮಾನ್ಯತೆ ಹೊಂದಿರುವ ಬಗ್ಗೆ ಪರಿಶೀಲಿಸಿ, ಅಂತಹ ಉತ್ಪನ್ನಗಳನ್ನು ಕಾಮಗಾರಿಯಲ್ಲಿ ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ, ಜಿಲ್ಲಾ ಮಟ್ಟದ ಅಧಿಕಾರಿಗಳಿಗಾಗಿ ಶುಕ್ರವಾರ ಭಾರತೀಯ ಮಾನಕ ಬ್ಯುರೋ ಹಮ್ಮಿಕೊಂಡಿದ್ದ ಭಾರತೀಯ ಗುಣಮಟ್ಟದ ಕುರಿತು ಅರಿವು ಮೂಡಿಸುವ ಸಂವೇದನಾಶೀಲ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರದ ವಿವಿಧ ಇಲಾಖೆಗಳು ಸಾರ್ವಜನಿಕರ ತೆರಿಗೆ ಹಣದಿಂದ ನಿರ್ವಹಿಸುವ ಸಾರ್ವಜನಿಕ ರಸ್ತೆ, ಸೇತುವೆ, ಕಟ್ಟಡಗಳು ಮುಂತಾದ ನಿರ್ಮಾಣ ಕಾಮಗಾರಿಗಳು ಉತ್ತಮ ಗುಣಮಟ್ಟದಿಂದ ಕುಡಿದ್ದು, ಧೀರ್ಘಕಾಲ ಸಾರ್ವಜನಿಕರ ಸೇವೆಗೆ ಲಭ್ಯವಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲ ಅಧಿಕಾರಿಗಳಿಗಿದೆ. ಆದ್ದರಿಂದ ಈ ಕಾಮಗಾರಿಗಳ ನಿರ್ಮಾಣಕ್ಕೆ ಬಳಸುವ ವಸ್ತುಗಳನ್ನು ಭಾರತೀಯ ಮಾನಕ ಬ್ಯುರೋದಿಂದ ಮಾನ್ಯತೆ ಪಡೆದ ಸಂಸ್ಥೆಗಳಿಂದ ತಯಾರಿಸಿದ ಮತ್ತು ಅಧಿಕೃತ ಮುದ್ರೆ ಹೊಂದಿರುವ ವಸ್ತುಗಳನ್ನು ಬಳಕೆ ಮಾಡುವಂತೆ ತಿಳಿಸಿದರು.

ಗ್ರಾಹಕರಿಗೆ ತಮ್ಮ ಹಕ್ಕು ಮತ್ತು ಕರ್ತವ್ಯಗಳ ಅರಿವಿದ್ದರೆ ಯಾರು ಕೂಡ ಮೋಸ ಮಾಡಲು ಸಾಧ್ಯವಿಲ್ಲ. ವಸ್ತುಗಳ ಖರೀದಿಯಲ್ಲಿ ಗ್ರಾಹಕರನ್ನು ಮೋಸ ಮಾಡುವ ಕಾರ್ಯ ನಡೆಯುತ್ತಿದೆ. ಇದನ್ನು ತಡೆಗಟ್ಟಬೇಕಾದರೆ ಗ್ರಾಹಕರಿಗೆ ವಸ್ತುಗಳ ಗುಣಮಟ್ಟದ ಅರಿವು ಇರಬೇಕಾಗುತ್ತದೆ. ಆ ನಿಟ್ಟಿನಲ್ಲಿ ಭಾರತೀಯ ಮಾನಕ ಬ್ಯುರೋ ಬಿಐಎಸ್ ಕಾರ್ಯ ನಿರ್ವಹಿಸುತ್ತಿದ್ದು, ಗ್ರಾಹಕರು ತಾವು ಖರೀದಿಸುವ ವಸ್ತುಗಳು ಮೇಲೆ ಬಿಐಎಸ್ ಪ್ರಮಾಣಿಕೃತ ಮುದ್ರೆಗಳಿದ್ದರೆ ಆ ವಸ್ತುವಿನ ಗುಣಮಟ್ಟ ಉತ್ತಮವಾಗಿದೆ ಎಂದರ್ಥ. ಹಾಗಾಗಿ ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಬಿಐಎಸ್ ಪ್ರಮಾಣಿಕೃತ ಮುದ್ರೆಗಳು ಇರುವ ಬಗ್ಗೆ ಪರಿಶೀಲಿಸಿ ಖರಿದಿಸುವುದು ಉತ್ತಮ. ಆ ನಿಟ್ಟಿನಲ್ಲಿ ಸಾರ್ವಜನಿಕರಿಗೂ ಬಿಐಎಸ್ ಪ್ರಮಾಣಿಕೃತದ ಬಗ್ಗೆ ಅರಿವು ಅಗತ್ಯ ಎಂದರು.

ಭಾರತೀಯ ಮಾನಕ ಬ್ಯುರೋ ಹುಬ್ಬಳ್ಳಿ ಕಚೇರಿಯ ಸಹಾಯಕ ನಿರ್ದೇಶಕ ಸೌವಿಕ್ ಸಿಕ್ದರ್ ಮಾತನಾಡಿ, ಬಿಐಎಸ್ ನಿಗದಿಪಡಿಸಿದ ಮಾನದಂಡಗಳ ಪ್ರಕಾರ ಉತ್ಪನ್ನ ತಯಾರಾಗಿರುತ್ತದೆ ಎಂಬುದನ್ನು ಉತ್ಪನ್ನದ ಮೇಲಿನ ಐಎಸ್ ಐ ಗುರುತು ಪ್ರಮಾಣೀಕರಿಸುತ್ತದೆ. ಇದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಗುಣಮಟ್ಟವನ್ನು ಹೊಂದಿರುವವ ಸಂಸ್ಥೆಯಾಗಿದೆ.

ಸರ್ಕಾರದ ಬಹುತೇಕ ಎಲ್ಲ ಇಲಾಖೆಗಳು ಬಿಐಎಸ್ ಅಡ ಬರಲಿದ್ದು, ಪೊಲೀಸ್, ಆರೋಗ್ಯ, ಲೋಕೋಪಯೋಗಿ, ಕೃಷಿ, ತೋಟಗಾರಿಕೆ, ಶಿಕ್ಷಣ ಇಲಾಖೆಗಳಲ್ಲಿ ವಿದ್ಯುತ್ ನಿಗಮಗಳಲ್ಲಿ ಬಳಸುವ ಉತ್ಪನ್ನಗಳಿಗೂ ಸಹ ಬಿಐಎಸ್‌ ಮಾನದಂಡಗಳನ್ನು ನಿಗಧಿಪಡಿಸಲಾಗಿದ್ದು, ಸರ್ಕಾರಿ ಕಾಮಗಾರಿಗಳಲ್ಲಿ ಗುತ್ತಿಗೆದಾರರು ಬಳಸುವ ಉತ್ಪನ್ನಗಳಲ್ಲಿ ನಿಗಧಿತ ಪ್ರಮಾಣಿಕೃತ ಮುದ್ರೆಗಳು ಇರುವ ಬಗ್ಗೆ ಅಧಿಕಾರಿಗಳು ಪರಿಶೀಲಿಸಬೇಕು ಎಂದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ವಿವಿಧ ಬಗೆಯ 21 ಉತ್ಪನ್ನಗಳಿಗೆ ಬಿಐಎಸ್ ಪರವಾನಿಗೆ ದೊರೆತಿದ್ದು, 130 ಚಿನ್ನ ಮಾರಾಟ ಮಳಿಗೆಗಳು, 8 ಬೆಳ್ಳಿ ಮಾರಾಟ ಮಳಿಗೆಗಳು ಹಾಗೂ 3 ಹಾಲ್ ಮಾರ್ಕ್ ಗುರುತಿಸಲಾದ ಕೇಂದ್ರಗಳು ಇವೆ ಮತ್ತು ಚಿನ್ನವನ್ನು ಮಾರಾಟ ಮಾಡಲು ಹಾಲ್ ಮಾರ್ಕ್ ಕಡ್ಡಾಯಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಸ್ಟಾಂಡರ್ಡ್ ಪ್ರಮೋಟಿಂಗ್ ಅಧಿಕಾರಿ ಅಹಮದ್ ಬಿಜಾಪುರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net