

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸಲು ಕೈಗಾರಿಕೆಗಳಿಗೆ ಮಾನದಂಡಗಳು ಮುಖ್ಯ. ಇವು ರಾಷ್ಟ್ರೀಯ ಅಭಿವೃದ್ಧಿ ಮತ್ತು ನಾಗರಿಕ ಕಲ್ಯಾಣವನ್ನು ನಿರ್ಧರಿಸುತ್ತದೆ ಎಂದು ಬೆಳಗಾವಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸತ್ಯನಾರಾಯಣ ಭಟ್ ಹೇಳಿದರು.
ಭಾರತೀಯ ಮಾನಕ ಸಂಸ್ಥೆ (ಬಿಐಎಸ್) ಹುಬ್ಬಳ್ಳಿ ಶಾಖೆ, ಬೆಳಗಾವಿಯಲ್ಲಿ ಬುಧವಾರ ಆಯೋಜಿಸಿದ್ದ ಮಧ್ಯಸ್ಥಗಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಕೈಗಾರಿಕೆಗಳು ಬಿಐಎಸ್ ಪ್ರಮಾಣೀಕರಣವನ್ನು ಪಾಲಿಸುವುದು ಅಗತ್ಯ. ಉತ್ಪನ್ನ ಮತ್ತು ಸೇವೆಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಲು ನಿರ್ಧರಿತ ಮಾನದಂಡಗಳು ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದರು.
ಏಕಸ್ ಪ್ರೖೆವೇಟ್ ಲಿಮಿಟೆಡ್ ಹಿರಿಯ ಉಪಾಧ್ಯಕ್ಷ ಡಾ. ರವಿ ಗುತ್ತಲ ಮಾತನಾಡಿ, ಕೈಗಾರಿಕೆಗಳು ನಾವೀನ್ಯತೆ ಅಳವಡಿಸಿಕೊಳ್ಳಲು ಮಾನದಂಡಗಳನ್ನು ಪಾಲಿಸುವುದು ಅವಶ್ಯವಾಗಿರುತ್ತದೆ. ಇದು ಎಲ್ಲರನ್ನು ಒಳಗೊಳ್ಳುವ ಮತ್ತು ಸುಸ್ಥಿರ ಕೈಗಾರಿಕೀಕರಣವನ್ನು ಉತ್ತೇಜಿಸುತ್ತದೆ ಎಂದು ಹೇಳಿದರು.
ಜೈನ್ ಕಾಲೇಜ್ ಆಫ್ ಇಂಜಿನಿಯರಿಂಗ್ನ ಡಾ. ಸಂಜೀವ ಸಂಗಮಿ ಮಾತನಾಡಿ, ಉತ್ಪಾದನಾ ವಲಯವು ಪರಿಸರ ಸ್ನೇಹಿ ಕ್ರಮಗಳಿಗೆ ಪ್ರಾಮುಖ್ಯತೆ ನೀಡಬೇಕು. ಭಾರತೀಯ ಮಾನದಂಡಗಳು ಪರಿಸರ ಸುಸ್ಥಿರತೆಯನ್ನು ಸಾಧಿಸಲು ಕೊಡುಗೆ ನೀಡುತ್ತದೆ ಎಂದರು.
ಬಿಐಎಸ್ ಹುಬ್ಬಳ್ಳಿ ಶಾಖೆ ನಿರ್ದೇಶಕ ಡಿ.ಪಿ. ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಉಪ ನಿರ್ದೇಶಕ ಎಂ. ಪ್ರದೀಪ ಕುಮಾರ್ ಇದ್ದರು. ಬೆಳಗಾವಿ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ, ಸರ್ಕಾರಿ ಇಲಾಖೆ, ಶಿಕ್ಷಣ ಸಂಸ್ಥೆ, ಕೈಗಾರಿಕೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
.