ಉದ್ಯಮದ ಒತ್ತಡ ಮೆಟ್ಟಿ ನಿಲ್ಲಿ

industry
h29-womens
Published on

ಹುಬ್ಬಳ್ಳಿ: ಹೊಸ ಉದ್ಯಮ ಸ್ಥಾಪನೆಯಾದ ಬಳಿಕೆ ಒತ್ತಡ ಸಹಜವಾಗಿಯೇ ಬರುತ್ತವೆ. ಅವುಗಳನ್ನು ಮೆಟ್ಟಿನಿಲ್ಲುವ ಧೈರ್ಯವನ್ನು ಯುವ ಉದ್ಯಮಿಗಳು ತಂದುಕೊಳ್ಳಬೇಕು ಎಂದು ರೇಣುಕಾ ಶುಗರ್ಸ್ ಅಧ್ಯಕ್ಷೆ ಡಾ. ವಿದ್ಯಾ ಮರ್ಕುಂಬಿ ಸಲಹೆ ನೀಡಿದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಮಹಿಳಾ ವಿಭಾಗದಿಂದ ಇಲ್ಲಿನ ಜೆ.ಸಿ. ನಗರದ ಕೆಸಿಸಿಐ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಮಹಿಳಾ ಉದ್ಯಮಿಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆ ಸ್ವಾವಲಂಬಿ. ಆರ್ಥಿಕ ಸಬಲೀಕರಣ ಆಕೆಗೆ ಅಗತ್ಯ. ಕುಟುಂಬ ನಿರ್ವಹಣೆ ಜತೆಗೆ ಸಾಮಾಜಿಕ ಉದ್ಯಮವನ್ನು ಸ್ಥಾಪಿಸಿ ಬಹಳಷ್ಟು ಮಹಿಳೆಯು ಮುನ್ನಡೆಯುತ್ತಿದ್ದಾರೆ. ಇವರೆಲ್ಲರೂ ನವೋದ್ಯಮಿಗಳಿಗೆ ಸ್ಫೂರ್ತಿ ಎಂದರು.
ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ಉತ್ಪನ್ನಗಳನ್ನು ಉತ್ಪಾದಿಸುವ ಜಾಣ್ಮೆ ಮೈಗೂಡಿಸಿಕೊಳ್ಳಬೇಕು. ಜತೆಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಬಳಕೆ ಮಾಡಿಕೊಳ್ಳಬೇಕು. ಸತತ ಮಾರುಕಟ್ಟೆಯ ಅಧ್ಯಯನವನ್ನು ಮಾಡುತ್ತಿರಬೇಕು ಎಂದು ತಿಳಿವಳಿಕೆ ನೀಡಿದರು.
ಕೆಸಿಸಿಐ ಅಧ್ಯಕ್ಷ ವಿನಯ ಜವಳಿ ಮಾತನಾಡಿ, ಉದ್ಯಮ ಎಂದರೆ ಬರೀ ಪುರುಷರಿಗಷ್ಟೇ ಸೀಮಿತವಲ್ಲ. ಬಹಳಷ್ಟು ಮಹಿಳೆಯರು ಉದ್ಯಮದಲ್ಲಿ ಉತ್ತುಂಗ ತಲುಪಿದ್ದಾರೆ. ಮಹಿಳಾ ಉದ್ಯಮಿಗಳಿಗೆ ನೆರವಾಗಲೆಂದು ಕೆಸಿಸಿಐನಲ್ಲಿ ತರಬೇತಿ ನೀಡಲಾಗುತ್ತಿದೆ ಎಂದರು.
ಕೆಸಿಸಿಐ ಮಹಿಳಾ ವಿಭಾಗದ ಅಧ್ಯಕ್ಷೆ ಅಂಜನಾ ಬಸನಗೌಡರ್ ಪ್ರಾಸ್ತಾವಿಕವಾಗಿ ಮಾತನಾಡಿ, ಉದ್ಯಮದಲ್ಲಿ ಹೊಸ ಮನ್ವಂತ ಶುರುವಾಗಿದೆ. ಸಮಾಜಕ್ಕೆ ಹೊಸ ಉತ್ಪನ್ನ ಕೊಡುವ ಉತ್ಸಾಹ ನವೋದ್ಯಮಿಗಳಿಗೆ ಬಂದಿದೆ. ಇಂಥ ಉದ್ಯಮಿಗಳಿಗೆ ಪ್ರೋತ್ಸಾಹಿಸುವುದಲ್ಲದೇ, ಅವರನ್ನು ಗೌರವಿಸುವ ಕಾರ್ಯವನ್ನು ನಮ್ಮ ವಿಭಾಗ ಮಾಡುತ್ತಿದೆ ಎಂದರು.
ನೆಕ್ಟರ್ ಫ್ರೆಷ್ ಮತ್ತು ನಮನ್ ಸಂಸ್ಥಾಪಕಿ ಛಾಯಾ ನಂಜಪ್ಪ, ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ, ಹಣಕಾಸು ಯೋಜಕಿ ಕಿರಣ್ ತೆಲಂಗ್ ಅವರಿಗೆ ‘ವಾಣಿಜ್ಯ ಮಹಿಳಾ ಉದ್ಯಮಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇವರ ಜತೆಗೆ ವಿವಿಧ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಾಧಕರಾದ ಕವಿತಾ ಸಿದ್ದಾಪುರ, ಜ್ಯೋತಿ ದೊಡ್ಡಮನಿ, ಲತಾ ಪಾಟೀಲ, ಮಹಾದೇವಿ ಬಳ್ಳಾರಿ, ಸುಧಾ ನಾಯ್ಕರ್, ಮೀನಾಕ್ಷಿ ಎಂ., ನಾಗರತ್ನ ತಂಬೂರ, ಶಿವಕ್ಕ ಪಾಟೀಲ, ಸಾವಿತ್ರಿ ಹೊನ್ನಾಳ, ಚೈತ್ರಾ ಸುರಪುರ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮೊದಲು ಸಾಧಕರು, ತಮ್ಮ ಸಾಧನೆಯ ಅನುಭವಗಳನು ಹಂಚಿಕೊಂಡರು.
ಕೆಸಿಸಿಐ ಸಹ ಕಾರ್ಯದರ್ಶಿ ಶಂಕರ ಕೋಳಿವಾಡ, ಉಪಾಧ್ಯಕ್ಷ ಎಸ್.ಪಿ. ಸಂಶಿಮಠ, ಕಾರ್ಯಕ್ರಮ ಸಂಯೋಜಕಿ ಸ್ಮಿತಾ ಮಹೇಶ, ಪ್ರಮುಖರಾದ ಶಶಿಧರ ಶೆಟ್ಟರ್, ಶ್ರಾವಣಿ ಪವಾರ, ದೇವಕಿ ಯೋಗಾನಂದ, ತಾರಾಮತಿ ಪೋಲ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net