ಮೈಸೂರು: ಮುಡಾ ಪ್ರಕರಣದಲ್ಲಿ ತಮ್ಮ ಪಾತ್ರ ಏನೂ ಇಲ್ಲ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪ್ರಭಾವ ಬೀರಿ ಮುದ್ರಾಂಕ ಶುಲ್ಕವನ್ನು ವಿಶೇಷ ತಹಸೀಲ್ದಾರ್‌ರಿಂದ ಪಾವತಿಸುವಂತೆ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದೂರಿದ್ದಾರೆ.
ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪ್ರಭಾವ ಇದೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಸಾಮಾಜಿಕ ಜಾಲತಾಣದಲ್ಲಿ ಶುಲ್ಕ ಪಾವತಿಯ ಪ್ರತಿಯನ್ನು ಪೋಸ್ಟ್ ಮಾಡಿ, ನಿಯಮದ ಪ್ರಕಾರ ನಿವೇಶನ ಪಡೆಯುವಾಗ ಕ್ರಯಪತ್ರ ನೋಂದಣಿ ಮಾಡಿಸಿಕೊಳ್ಳುವವರು ನೋಂದಣಿ ಶುಲ್ಕ ಪಾವತಿಸಬೇಕು. ಆದರೆ ಈ ಪ್ರಕರಣದಲ್ಲಿ ನಿವೇಶನ ಖರೀದಿದಾರರ ಪರ ಸರ್ಕಾರಿ ಅಧಿಕಾರಿಯೇ ಶುಲ್ಕ ಪಾವತಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮುಡಾದ ನಿವೇಶನಗಳನ್ನು ಪಡೆಯುವಾಗ ನಿವೇಶನದಾರ ಎನ್.ಮಂಜುನಾಥ್ ಅವರು ಮುದ್ರಾಂಕ ಶುಲ್ಕ ಪಾವತಿ ಮಾಡಿದ್ದಾರೆ. ಆದರೆ ಮುಡಾದ 50:50 ಅನುಪಾತದ ಬದಲಿ ನಿವೇಶನಗಳನ್ನು ಪಾರ್ವತಿ ಸಿದ್ದರಾಮಯ್ಯ ಅವರು ಪಡೆಯುವಾಗ ಮುಡಾದ ವಿಶೇಷ ತಹಸೀಲ್ದಾರ್ ಮುದ್ರಾಂಕ ಶುಲ್ಕ ಪಾವತಿ ಮಾಡಿದ್ದಾರೆ. ನನ್ನ ಆರೋಪಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ? ಸಿದ್ದರಾಮಯ್ಯನವರೇ ಈ ವಿಚಾರ ಕುರಿತು ರಾಜ್ಯದ ಜನತೆಗೆ ಏನೆಂದು ಉತ್ತರಿಸುತ್ತಿರಾ? ಎಂದು ಪ್ರಶ್ನಿಸಿದ್ದಾರೆ.
ನಿವೇಶನ ನೋಂದಣಿ ಸಮಯದಲ್ಲಿ ನನ್ನ ತಾಯಿಗೆ ಹುಷಾರಿರಲಿಲ್ಲ. ಹೀಗಾಗಿ ಮಂಜುನಾಥ್ ಅವರು ಶುಲ್ಕ ಪಾವತಿಸಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ವಿಧಾನ ಪರಿಷತ್ತಿನ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.