

| ರುದ್ರಣ್ಣ ಹರ್ತಿಕೋಟೆ ಬೆಳಗಾವಿ
ಗ್ಯಾರಂಟಿಗಳ ಘೋಷಣೆಯ ಬೆನ್ನ ಹಿಂದೆಯೇ ಸಂಪನ್ಮೂಲ ಕ್ರೋಡೀಕರಣಕ್ಕೆ ಹಲವು ಮಾರ್ಗಗಳನ್ನು ಹುಡುಕುತ್ತಿರುವ ಸರ್ಕಾರ, ಇದೀಗ ಜನವರಿಯಿಂದ ಅನ್ವಯವಾಗುವಂತೆ ಮುದ್ರಾಂಕ ಶುಲ್ಕ (ಸ್ಟಾ್ಯಂಪ್ ಡ್ಯೂಟಿ) ಹೆಚ್ಚಳಕ್ಕೆ ತೀರ್ಮಾನ ಮಾಡಿದೆ. ಸರ್ಕಾರ ಇತ್ತೀಚೆಗೆ ಭೂಮಿಯ ಮಾರ್ಗಸೂಚಿ ಬೆಲೆ ಹೆಚ್ಚಿಸಿತ್ತು. ಇದೀಗ ಎಲ್ಲ ದಾಖಲೆಗಳಿಗೆ ಸಂಬಂಧಿಸಿದಂತೆ ಸ್ಟಾ್ಯಂಪ್ ಡ್ಯೂಟಿ ಹೆಚ್ಚಳಕ್ಕೆ ಮುಂದಾಗಿದೆ. ಆ ಮೂಲಕ ಜನಸಾಮಾನ್ಯರ ಮೇಲೆ ಹೊರೆಯನ್ನು ಹಾಕಲಾಗುತ್ತಿದೆ.
ನೆರೆಯ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಉತ್ತರಪ್ರದೇಶಗಳಲ್ಲಿ ಸ್ಟಾ್ಯಂಪ್ ಡ್ಯೂಟಿ ಇಲ್ಲಿಗಿಂತ ಹೆಚ್ಚಿನ ಪ್ರಮಾಣ ದಲ್ಲಿರುವುದು ರಾಜ್ಯ ಸರ್ಕಾರದ ನೆಪವಾಗಿದೆ. ಉತ್ತರಪ್ರದೇಶದಲ್ಲಿ ಡಿಟಿಟಿಗೆ ಪ್ರತಿ ಸಾವಿರ ರೂ.ಗಳ ಮೇಲೆ 5 ರೂ. ಮುದ್ರಾಂಕ ಶುಲ್ಕ ಇದೆ. ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಡಿಟಿಡಿಗೆ ಮೊತ್ತದ ಶೇ.0.5 ರಷ್ಟು ದರ ಇದೆ. ಆದರೆ, ರಾಜ್ಯದಲ್ಲಿ ಅತ್ಯಂತ ಕಡಿಮೆ ಶೇ.0.1 ರಷ್ಟು ಮಾತ್ರ ಇದೆ. ಆದ್ದರಿಂದಲೇ ಸರ್ಕಾರ ಎಲ್ಲ ರೀತಿಯ ಮುದ್ರಾಂಕ ಶುಲ್ಕವನ್ನು ಹೆಚ್ಚಳ ಮಾಡುವ ಉದ್ದೇಶ ಹೊಂದಿದೆ. ಮಾರ್ಗಸೂಚಿ ಬೆಲೆಗಳ ಹೆಚ್ಚಳದ ಸಂದರ್ಭದಲ್ಲಿಯೇ ಮುದ್ರಾಂಕ ಶುಲ್ಕವನ್ನು ಹೆಚ್ಚಳ ಮಾಡಬೇಕಾಗಿತ್ತು. ಆದರೆ ಸರ್ಕಾರ ಬೇರೆ ಬೇರೆ ಕಾರಣಗಳಿಂದ ಹೆಚ್ಚಿಸಿರಲಿಲ್ಲ.
ಎಷ್ಟಿದೆ ಮುದ್ರಾಂಕ ಸಂಗ್ರಹ?: ನೋಂದಾಯಿತ ದಾಖಲೆಗಳಲ್ಲಿ ಮುದ್ರಾಂಕ ಶುಲ್ಕ ಸಂಗ್ರಹವಾಗುತ್ತಿರುವುದೇ ಶೇ.11.3 ರಷ್ಟು. ಇದರಿಂದ ಸಂಗ್ರಹವಾಗುತ್ತಿರುವ ಮೊತ್ತ ವಾರ್ಷಿಕ ಸರಾಸರಿ 2,027 ಕೋಟಿ ರೂ.ಗಳಷ್ಟಿದೆ. ಈ ಮೊತ್ತವನ್ನು 5 ಸಾವಿರ ಕೋಟಿ ರೂ.ಗಳಷ್ಟು ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಕಾನೂನು ತಿದ್ದುಪಡಿ: ಇದೇ ಅಧಿವೇಶನದಲ್ಲಿಯೇ ಮುದ್ರಾಂಕ ಕಾಯ್ದೆಗೆ ಈ ತಿದ್ದುಪಡಿ ತರಲು ಸರ್ಕಾರ ಉದ್ದೇಶಿಸಿದೆ. ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕಾಯ್ದೆ ತಿದ್ದುಪಡಿಗೆ ಒಪ್ಪಿಗೆ ಸಿಗುವ ಸಾಧ್ಯತೆಗಳಿವೆ. ಕಾಯ್ದೆ ತಿದ್ದುಪಡಿಯಾದರೆ ಜನವರಿಯಿಂದಲೇ ಹೊಸ ದರಗಳು ಜಾರಿಗೆ ಬರಲಿವೆ ಎಂದು ಕಂದಾಯ ಇಲಾಖೆಯ ಮೂಲಗಳು ಖಚಿತಪಡಿಸಿವೆ.
ಸರ್ಕಾರ ಹೇಳುವುದೇನು: ಮನೆ ಬಾಡಿಗೆ ಹಾಗೂ ಇತರೆ ಒಪ್ಪಂದಗಳ ಸಂದರ್ಭದಲ್ಲಿ 10 ರೂ., 20 ರೂ.ಗಳ ಸ್ಟಾ್ಯಂಪ್ ಪೇಪರ್ನಲ್ಲಿ ಆಗುತ್ತಿರುವ ಒಪ್ಪಂದಗಳಿಗೆ ನ್ಯಾಯಾಲಯದಲ್ಲಿ ಮಾನ್ಯತೆ ಸಿಗುತ್ತಿಲ್ಲ. ಹನ್ನೊಂದು ತಿಂಗಳ ನಂತರ ಅಂತಹ ಸ್ಟಾ್ಯಂಪ್ ಪೇಪರ್ಗಳ ಒಪ್ಪಂದಗಳು ಮತ್ತೆ ಹೊಸದಾಗಿ ಆಗಬೇಕಾಗುತ್ತದೆ. ಸ್ಟಾ್ಯಂಪ್ ಪೇಪರ್ಗಳ ದರವನ್ನು ಕನಿಷ್ಠ 500 ರೂ. ಗಳಿಗೆ ಏರಿಕೆ ಮಾಡಲಾಗುತ್ತದೆ. ಆಗ ನ್ಯಾಯಾಲಯದಲ್ಲಿಯೂ ಮಾನ್ಯತೆ ಸಿಗುತ್ತದೆ. ಆದ್ದರಿಂದಲೇ ದರಗಳನ್ನು ಹೆಚ್ಚಳ ಮಾಡಲಾಗುತ್ತದೆ ಎಂದು ಮೂಲಗಳು ಹೇಳುತ್ತವೆ.
ಟೋಲ್ನಲ್ಲೂ ಪಾಲು ವಸೂಲಿ: ಟೋಲ್ಗಳಲ್ಲೂ ಪ್ರತಿ ವಾಹನ ಸಲ್ಲಿಸುವ ಶುಲ್ಕದ ಶೇ.0.05 ರಷ್ಟು ಮುದ್ರಾಂಕದ ಪಾಲು ಸರ್ಕಾರಕ್ಕೆ ಬರಬೇಕಾಗಿದೆ. ಆದರೆ, ಯಾವುದೇ ಟೋಲ್ಗಳು ಸರ್ಕಾರಕ್ಕೆ ನಯಾ ಪೈಸೆ ಪಾವತಿಸುತ್ತಿಲ್ಲ. ಈಗ ಕಾಯ್ದೆ ತಿದ್ದುಪಡಿ ಮಾಡಿ ಟೋಲ್ಗಳಿಂದ ಬರಬೇಕಾದ ಮೊತ್ತವನ್ನು ವಸೂಲಿ ಮಾಡುವ ಗುರಿ ಹೊಂದಲಾಗಿದೆ.
ಯಾವ ಮೂಲದಲ್ಲಿ ಎಷ್ಟು ಸ್ಟ್ಯಾಂಪ್ ಶುಲ್ಕ: ಬ್ಯಾಂಕ್ ಸಾಲದ ಡಿಟಿಡಿಯಲ್ಲಿ 487 ಕೋಟಿ ರೂ., ಮಾರ್ಟ್ಗೇಜ್ ಮೂಲಕ 273 ಕೋಟಿ ರೂ., ಬಾಂಡ್ಗಳಲ್ಲಿ 270 ಕೋಟಿ ರೂ.ಗಳು., ಪವರ್ ಆಫ್ ಅಟಾರ್ನಿಯಲ್ಲಿ 299 ಕೋಟಿ ರೂ.ಗಳು, ಒಪ್ಪಂದಗಳಿಂದ 80 ಕೋಟಿ ರೂ.ಗಳು ಹಾಗೂ ಪ್ರಮಾಣಪತ್ರಗಳಿಂದ 33 ಕೋಟಿ ರೂ.ಗಳು ಸಂಗ್ರಹವಾಗುತ್ತಿದೆ.
ಎಲ್ಲೆಲ್ಲಿ ಮುದ್ರಾಂಕ ಶುಲ್ಕ ಏರಿಕೆ?
* ಮನೆಗಳ ಬಾಡಿಗೆ ಕರಾರು
* ಗುತ್ತಿಗೆ ಕರಾರು
* ಬ್ಯಾಂಕ್ ಸಾಲದ ದಾಖಲೆಗಳು (ಡಿಟಿಡಿ)
* ಪವರ್ ಆಫ್ ಅಟಾರ್ನಿ
* ಒಪ್ಪಂದಗಳು
* ಪ್ರಮಾಣಪತ್ರಗಳು
ಸ್ಟ್ಯಾಂಪ್ ಡ್ಯೂಟಿಯನ್ನು ಬಹಳ ವರ್ಷಗಳಿಂದ ಹೆಚ್ಚಳ ಮಾಡಿಲ್ಲ. ಇದೀಗ ಸರ್ಕಾರದ ಮುಂದೆ ಪ್ರಸ್ತಾವನೆ ಮಂಡಿಸಲಾಗಿದೆ. ಸಂಪುಟದಲ್ಲಿ ಒಪ್ಪಿಗೆ ಸಿಕ್ಕಲ್ಲಿ ಇದೇ ಅಧಿವೇಶನದಲ್ಲಿ ಕಾಯ್ದೆ ಮಂಡನೆಯಾಗಲಿದೆ. ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಸಂಗ್ರಹವಾಗಲಿದೆ.
| ಡಾ. ಬಿ.ಆರ್. ಮಮತಾ ಮುದ್ರಾಂಕ ಆಯುಕ್ತರು, ನೋಂದಣಿ ಮಹಾ ನಿರ್ದೇಶಕರು