ನಿಂತ ನೀರು ಸೊಳ್ಳೆಗಳ ತವರೂರು

DENGUE
Published on

ನರಗುಂದ: ಮಾರಕ ಡೆಂೆ ರೋಗ ನಿಯಂತ್ರಣಕ್ಕೆ ಈ ವರ್ಷದ ಧ್ಯೇಯ ವಾಕ್ಯ ಡೆಂೆ ಸೋಲಿಸಲು ಹೆಜ್ಜೆಗಳು: ಪರಿಶೀಲಿಸಿ, ಸ್ವಚ್ಛಗೊಳಿಸಿ, ಮುಚ್ಚಿಡಿ ಎಂಬುದಾಗಿದೆ. ಆರೋಗ್ಯ ಇಲಾಖೆಯ ಈ ವಾಕ್ಯ ಗಮನದಲ್ಲಿಟ್ಟುಕೊಂಡು ಮನೆಯ ನೀರಿನ ತೊಟ್ಟಿ, ಬ್ಯಾರಲ್, ಮಳೆ ನೀರು ನಿಲ್ಲುವುದನ್ನು ಪ್ರತಿಯೊಬ್ಬರೂ ತಡೆಯಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ರೇಣುಕಾ ಕೊರವನವರ ಹೇಳಿದರು.

ರಾಷ್ಟ್ರೀಯ ಡೆಂೆ ದಿನಾಚರಣೆ ಅಂಗವಾಗಿ ಪಟ್ಟಣದ ಬಾಬಾಸಾಹೇಬ ಭಾವೆ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಪೌರ ಕಾರ್ಮಿಕರಿಗೆ ಕೀಟಜನ್ಯ ರೋಗಗಳ ಕುರಿತು ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಿ.ವಿ. ಕೊಣ್ಣೂರ ಮಾತನಾಡಿ, ಪ್ರತಿವರ್ಷ ಮಳೆಗಾಲ ಆರಂಭಕ್ಕೂ ಮುನ್ನ ಸಾರ್ವಜನಿಕರಿಗೆ ತಿಳಿವಳಿಕೆ ನೀಡಲು ಮೇ 16ರಂದು ರಾಷ್ಟ್ರೀಯ ಡೆಂೆ ದಿನ ಆಚರಿಸಲಾಗುತ್ತದೆ. ನಿಂತ ನೀರು ಸೊಳ್ಳೆಗಳ ತವರೂರು. ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಸೋಂಕಿತ ಹೆಣ್ಣು ಸೊಳ್ಳೆ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಕೀಟಜನ್ಯ ರೋಗಗಳಾದ ಮಲೇರಿಯಾ, ಡೆಂೆ, ಚಿಕೂನ್ ಗುನ್ಯಾ, ಮಿದುಳು ಜ್ವರ, ಆನೆಕಾಲು ರೋಗಗಳು ಹರಡುತ್ತವೆ. ಸೊಳ್ಳೆಗಳನ್ನು ನಿಯಂತ್ರಿಸಿದತೆ ಈ ಐದು ರೋಗಗಳನ್ನು ನಿಯಂತ್ರಿಸಬಹುದು ಎಂದರು.

ಸಾರ್ವಜನಿಕರು ಸೊಳ್ಳೆ ಕಚ್ಚದಂತೆ ಮೈತುಂಬಾ ಬಟ್ಟೆ ಧರಿಸಬೇಕು. ಸೊಳ್ಳೆಬತ್ತಿ, ಸೊಳ್ಳೆ ಬ್ಯಾಟ್, ಲಿಕ್ವಿಡ್, ಸೊಳ್ಳೆ ಪರದೆಗಳನ್ನು ಉಪಯೋಗಿಸಬೇಕು. ಆರೋಗ್ಯ ಇಲಾಖೆಯಿಂದ ಕೆರೆ, ಕಟ್ಟೆ ಮುಂತಾದ ನಿಂತ ನೀರಿನ ತಾಣಗಳಿಗೆ ಲಾರ್ವಾಹಾರಿ ಮೀನುಗಳನ್ನು ಬಿಡಲಾಗುತ್ತದೆ. ಡೆಂೆ ರೋಗ ಪತ್ತೆ ಹಚ್ಚಲು ಯಾವುದೇ ಜ್ವರವಿದ್ದಲ್ಲಿ ಕಡ್ಡಾಯವಾಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆಕಸ್ಮಾತ್ ಮಲೇರಿಯಾ ಕಂಡು ಬಂದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಎಂ.ಪಿ. ಶಿಗ್ಗಾಂವಕರ, ವಿ.ಬಿ. ಹಡಗಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೀಟಜನ್ಯ ರೋಗಗಳ ಕುರಿತು ವಸ್ತು ಪ್ರದರ್ಶನ ಏರ್ಪಡಿಸಿ ಸಾರ್ವಜನಿಕರಿಗೆ ಕರಪತ್ರ ವಿತರಣೆ ಮಾಡಲಾಯಿತು. ಶ್ರೀಕಾಂತ ನರಗುಂದ, ಜಮುನಾ ಪಾಟೀಲ, ಎಸ್.ಎಚ್. ಕಲೂತಿ, ಬಸವರಾಜ ಕೌಜಗೇರಿ, ಎಂ.ಎಂ. ಮಸೂತಿಮನಿ, ಎ.ಎಂ. ಕಾಡದೇವರಮಠ, ರೇಖಾ ಹಿರೆಹೋಳಿ, ಬಿ.ಕೆ. ಪಾಟೀಲ ಉಪಸ್ಥಿತರಿದ್ದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸಿ.ಎಫ್. ಕುಂಬಾರ ನಿರೂಪಿಸಿದರು.

ಸೊಳ್ಳೆಗಳನ್ನು ನಿಯಂತ್ರಿಸುವಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ. ಸಾರ್ವಜನಿಕರು ತಮ್ಮ ಮನೆಗಳಲ್ಲಿರುವ ನೀರಿನ ಪರಿಕರಗಳನ್ನು ನಾಲ್ಕೈದು ದಿನಗಳಿಗೊಮ್ಮೆ ಚೆನ್ನಾಗಿ ತಿಕ್ಕಿ ತೊಳೆದು, ಒಣಗಿಸಿ ಹೊಸ ನೀರನ್ನು ತುಂಬಿಸಿ ಭದ್ರವಾಗಿ ಮುಚ್ಚಿಡಬೇಕು. ಮನೆ ಸುತ್ತಲಿನ ವಾತಾವರಣ ಮತ್ತು ಚರಂಡಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆಗಳಿಗೆ ನಿಂತ ನೀರು ಸಿಗದಂತೆ ನೋಡಿಕೊಳ್ಳಬೇಕು. ಡಾ.ರೇಣುಕಾ ಕೊರವನವರ, ನರಗುಂದ ತಾಲೂಕು ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net