

ಗುಂಡ್ಲುಪೇಟೆ: ಚರಂಡಿ ನೀರು ಹರಿಯುತ್ತಿದ್ದ ಕಾಲುವೆಗೆ ಜಮೀನು ಮಾಲೀಕರೊಬ್ಬರು ಏರಿ ಹಾಕಿದ್ದರಿಂದ ಕೊಳಚೆ ನೀರು ರಸ್ತೆಯಲ್ಲಿ ಮಡುಗಟ್ಟಿದ್ದು, ಸಂಬಂಧಪಟ್ಟವರು ಕ್ರಮಕೈಗೊಳ್ಳದೆ ನಿರ್ಲಕ್ಷೃ ವಹಿಸಿದ್ದಾರೆ.
ತಾಲೂಕಿನ ಬೊಮ್ಮಲಾಪುರ ಗ್ರಾಮದ ಚರಂಡಿ ನೀರು ಹಿಂದಿನಿಂದಲೂ ವಡೆಯನಪುರ ರಸ್ತೆಯಲ್ಲಿ ಮಳೆನೀರು ಹರಿಯುತ್ತಿದ್ದ ಕಾಲುವೆಗೆ ಸೇರುತ್ತಿದೆ. ಇತ್ತೀಚೆಗೆ ಹೆಚ್ಚಾಗಿ ಮಳೆ ಬಿದ್ದಿದ್ದರಿಂದ ಸ್ವಲ್ಪ ಹೆಚ್ಚಿನ ನೀರು ಕಾಲುವೆಗೆ ಸೇರುತ್ತಿದ್ದು, ನೀರು ಅಕ್ಕಪಕ್ಕದ ಜಮೀನುಗಳಿಗೆ ನುಗ್ಗುತ್ತಿದೆ. ಇದರಿಂದೊಂದಿಗೆ ಕೊಳಚೆ ನೀರು ಸಹ ಜಮೀನಿನಲ್ಲಿ ನಿಲ್ಲುತ್ತಿದ್ದು, ಬೇಸತ್ತ ರೈತರೊಬ್ಬರು ವಾರದ ಹಿಂದೆ ತಮ್ಮ ಜಮೀನುಗೆ ಕಾಲುವೆ ನೀರು ಹರಿಯದಂತೆ ಎತ್ತರವಾಗಿ ಏರಿ ಹಾಕಿಸಿದ್ದಾರೆ.
ಇದರಿಂದ ಚರಂಡಿ ನೀರು ಸುಮಾರು ಮೂರು ಅಡಿ ಎತ್ತರಕ್ಕೆ ರಸ್ತೆಯ ಮೇಲೆ ನಿಂತಿದೆ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವ ಬಸ್ಸುಗಳು ಹಾಗೂ ಭಾರಿ ವಾಹನಗಳು ಕೊಳಚೆ ನೀರಿನಲ್ಲಿಯೇ ಸಂಚರಿಸುತ್ತಿವೆ. ಆದರೆ ಕಾರುಗಳು, ದ್ವಿಚಕ್ರವಾಹನಗಳು, ಬೈಸಿಕಲ್ ಸವಾರರು ಹಾಗೂ ಪಾದಚಾರಿಗಳು ಕೊಳಚೆ ನೀರಿನಲ್ಲಿ ಸಾಗುವವುದು ದುಸ್ತರವಾಗಿದೆ.
ಜಮೀನುಗಳಿಗೆ ಹೋಗುವ ರೈತರು, ಕಾರ್ಮಿಕರು, ಮಹಿಳೆಯರು ಹಾಗೂ ಜಾನುವಾರುಗಳು ಕೊಳಚೆ ನೀರನ್ನು ಹಾದುಕೊಂಡೇ ಹೋಗುವಂತಾಗಿದೆ. ದ್ವಿಚಕ್ರ ವಾಹನಗಳ ಸವಾರರು ಎರಡು ಕಾಲುಗಳನ್ನು ಮೇಲೆತ್ತಿ ಕೊಳಚೆ ನೀರು ಬಟ್ಟೆಗಳಿಗೆ ತಾಕದಂತೆ ಸರ್ಕಸ್ ಮಾಡುತ್ತಾ ಸಾಗುವುದು ಸಾಮಾನ್ಯವಾಗಿದೆ. ಅಯತಪ್ಪಿದರೆ ಕೊಳಚೆ ನೀರಿಗೆ ಬೀಳುವುದು ಗ್ಯಾರಂಟಿ.
ಈ ಬಗ್ಗೆ ಸಾರ್ವಜನಿಕರು ಸ್ಥಳೀಯ ಗ್ರಾಮಪಂಚಾಯಿತಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ತಾಲೂಕು ಪಂಚಾಯಿಯಲ್ಲಿ ದೂರು ದೂರು ಆಲಿಸಲು ಅಧಿಕಾರಿಗಳೇ ಇಲ್ಲ. ಗ್ರಾಮಪಂಚಾಯಿತಿಯವರು ತಾಲೂಕು ಅಡಳಿತದ ಗಮನಕ್ಕೂ ತಂದಿರುವುದಾಗಿ ಹೇಳುತ್ತಿದ್ದಾರೆ ಹೊರತು ಸಂಬಂಧಪಟ್ಟ ಯಾವುದೇ ಇಲಾಖೆಯವರು ಇದಕ್ಕೆ ಪರಿಹಾರ ಕಲ್ಪಿಸುತ್ತಿಲ್ಲ
.
ಇನ್ನಾದರೂ ಸಂಬಂಧಪಟ್ಟವರು ಕೊಳಚೆ ನೀರು ಸುಗಮವಾಗಿ ಹರಿದುಹೋಗಲು ಅಗತ್ಯ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಗ್ರಾಮಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗ್ರಾಮದ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.