ನಾಲ್ಕನೇ ಹಂತ ತಲುಪಿದ್ದ ಕ್ಯಾನ್ಸರ್‌ಗೆ ಮೈಸೂರಿನಲ್ಲಿ ಯಶಸ್ವಿ ಚಿಕಿತ್ಸೆ

14
Published on

ಮೈಸೂರು: ನಾಲ್ಕನೇ ಹಂತ ತಲುಪಿದ್ದ 70 ವರ್ಷದ ಕ್ಯಾನ್ಸರ್ ರೋಗಿಯನ್ನು ಗುಣಪಡಿಸುವಲ್ಲಿ ನಗರದ ಎನ್‌ಜೆ (ನಂಜಮ್ಮ ಜವರೇಗೌಡ) ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿದೆ.

ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದ ಮಂಗಳೂರು ಮೂಲದ ಗಣೇಶ್ ಶರ್ಮಾ ಅವರಿಗೆ ವೈದ್ಯರ ತಂಡ ಅತ್ಯಾಧುನೀಕ ಯಂತ್ರಗಳ ಸಹಾಯದಿಂದ ಎರಡು ಬಾರಿ ಒಟ್ಟು 28 ಗಂಟೆಗಳ ಕಾಲ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಮರು ಜೀವ ನೀಡಿದ್ದಾರೆ.

ಆಸ್ಪತ್ರೆಯ ತಜ್ಞ ವೈದ್ಯ ಡಾ.ಸತೀಶ್ ದುರ್ಗೇಶ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಫೈಲ್ಸ್ ಸಮಸ್ಯೆಯಿಂದ ಬಳಲುತ್ತಿದ್ದ ಗಣೇಶ್‌ಶರ್ಮಾ ಅವರು ಸಮಸ್ಯೆ ಉಲ್ಬಣಗೊಂಡಿದ್ದರಿಂದ ಹುಣಸೂರು ರಸ್ತೆ ಇಲವಾಲ ಬಳಿಯ ಅಲೋಕ ಅರಮನೆ ಸಮೀಪದ ಎನ್‌ಜೆ ಆಸ್ಪತ್ರೆಗೆ ಬಂದರು. ರೋಗಿಯನ್ನು ಪರಿಶೀಲಿಸಿದಾಗ ಫೈಲ್ಸ್ ಸಮಸ್ಯೆ ಹೆಚ್ಚಾಗಿ ಅದು ಕ್ಯಾನ್ಸರ್‌ನ ನಾಲ್ಕನೇ ಹಂತಕ್ಕೆ ತಿರುಗಿದ್ದು, ಪತ್ತೆಯಾಯಿತು. ಹೊಟ್ಟೆನೋವು, ಊಟ ಮಾಡದೆ ಇರುವುದರಿಂದ ಬೇರೆ ಬೇರೆ ತಪಾಸಣೆ ನಡೆಸಿ ಗುದನಾಳದ ಕ್ಯಾನ್ಸರ್ ಇದೆ ಎಂದು ಪತ್ತೆಯಾಗುವ ವೇಳೆಗೆ ರೋಗ ಎರಡು ಹಂತ ದಾಟಿತ್ತು. ಬೇರೆ ಆಸ್ಪತ್ರೆಗಳಿಗೆ ತೋರಿಸಿದಾಗ ಈ ವೇಳೆ ಶಸ್ತ್ರಚಿಕತ್ಸೆ ನಡೆಸಿದರೂ ಫಲಪ್ರದವಾಗುವುದಿಲ್ಲ ಎಂದು ಹೇಳಿದ್ದರಿಂದ ೋಗಿಯ ಕುಟುಂಬದವರು ಚಿಂತೆಗೀಡಾಗಿದ್ದರು.

ವಿದೇಶದಲ್ಲಿಯೂ ಚಿಕಿತ್ಸೆ ಕೊಡಿಸಲು ಕುಟುಂಬದವರು ಯತ್ನಿಸಿ ಸರಿಯಾದ ಮಾಹಿತಿ ಇಲ್ಲದೇ ನಿರಾಶರಾಗಿದ್ದರು. ಅಂತಿಮವಾಗಿ ಎನ್‌ಜೆ ಆಸ್ಪತ್ರೆಗೆ ಬಂದಾಗ ರೋಗಿಯನ್ನು ಸಂಪೂರ್ಣ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ರೋಗ ಉಲ್ಬಣಿಸಿ ನಾಲ್ಕನೇ ಹಂತ ತಲುಪಿತ್ತು. ವಿದೇಶದಿಂದ ತರಿಸಲಾಗಿದ್ದ ಬರೋಬ್ಬರಿ 2 ಕೋಟಿ ರೂ. ವೆಚ್ಚದ ವೈದ್ಯಕೀಯ ಉಪಕರಣಗಳನ್ನು ಬಳಸಿ ನುರಿತ ತಜ್ಞ ವೈದ್ಯರ ತಂಡ ಎರಡು ಹಂತದಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿತು.

ರೋಗಿಗೆ 3ಡಿ 4ಕೆ ಲ್ಯಾಪ್ರೋಸ್ಕೋಪಿ, ಲ್ಯಾಪ್ರೊಸ್ಕೋಪಿಕ್ ಅಲ್ಟ್ರಾ ಸೌಂಡ್ ಮತ್ತು ಪ್ರೋರೊಸೆನ್ಸ್ ಇಮೇಜ್ ಗೈಡೆಡ್ ಮಾದರಿ 16 ಗಂಟೆಗಳ ಸರ್ಜರಿ ನಡೆಸಿ ಕ್ಯಾನ್ಸರ್ ಗಡ್ಡೆಗಳನ್ನು ಬೇರು ಸಹಿತ ಕತ್ತರಿಸಿ ತೆಗೆಯಲಾಗಿದೆ. ಕೆಲವೇ ದಿನಗಳ ಅಂತರದಲ್ಲಿ ಎರಡನೇ ಹಂತದಲ್ಲಿ 12 ಗಂಟೆಗಳ ಶಸ್ತ್ರಚಿಕಿತ್ಸೆ ಮೂಲಕ ಯಕೃತ್ತು ಹಾಗೂ ಶ್ವಾಸಕೋಶದಲ್ಲಿ ವ್ಯಾಪಿಸಿದ್ದ ಕ್ಯಾನ್ಸರ್ ಗಡ್ಡೆಗಳನ್ನು ತೆಗೆಯಲಾಯಿತು. ಐದು ತಿಂಗಳಿನಿಂದ ರೋಗಿ ಸಹಜ ಸ್ಥಿತಿಗೆ ಮರಳಿದ್ದು, ನಿತ್ಯದ ಕೆಲಸ ಮಾಡಿಕೊಂಡು ಆರಾಮವಾಗಿ ಇದ್ದಾರೆ. ಮುಂದೆ ಕ್ಯಾನ್ಸರ್ ಕಣಗಳು ಉತ್ಪತ್ತಿ ಆಗದಂತೆ ಕೀಮೋಥೆರಫಿ ನೀಡಲಾಗುತ್ತಿದೆ. ಈ ರೀತಿಯಲ್ಲಿ ಶಸ್ತ್ರಚಿಕಿತ್ಸೆ ನಡೆದಿರುವುದು ದೇಶದಲ್ಲಿಯೇ ಮೊದಲನೆಯದಾಗಿದೆ ಎಂದರು.

ದಕ್ಷಿಣ ಕೊರಿಯಾದಲ್ಲಿಯೂ ಇದೇ ಮಾದರಿಯಲ್ಲಿ 15 ಶಸ್ತ್ರಚಿಕಿತ್ಸೆಗಳನ್ನು ನಡೆಸಿ ಅಲ್ಲಿನ ವೈದ್ಯರು, 14 ಶಸ್ತ್ರ ಚಿಕಿತ್ಸೆಗಳಲ್ಲಿ ವಿಫಲರಾಗಿದ್ದರು. ಆದರೆ ಮೈಸೂರಿನಲ್ಲಿ ನಡೆದ ಈ ಮಾದರಿಯ ಮೊದಲ ಶಸ್ತ್ರಚಿಕಿತ್ಸೆಯಲ್ಲಿ ಯಶಸ್ವಿಯಾಗಿದ್ದೇವೆ ಎಂದು ಮಾಹಿತಿ ನೀಡಿದರು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜೆ.ದುರ್ಗೇಶ್ ಮಾರ್ಗದರ್ಶನದಲ್ಲಿ ತಜ್ಞ ವೈದ್ಯ ಅನ್ನನಾಳ ಮತ್ತು ಕೊಲೊರೆಕ್ಟಲ್ ಡಾ.ಸುಧೀಶ್ ದುರ್ಗೇಶ್, ಲ್ಯಾಪ್ರೊಸ್ಕೋಪಿಕ್ ಸರ್ಜನ್ ಡಾ.ಸಿ.ಮಮತಾ, ಇಂಟೆನ್ಸಿವಿಸ್ಟ್ ಮತ್ತು ಕ್ರಿಟಿಕಲ್ ಕೇರ್ ಅರಿವಳಿಕೆ ತಜ್ಞೆ ಡಾ.ಕೆ.ಪೂಜಾ, ಲ್ಯಾಪ್ರೋಸ್ಕೋಪಿಕ್ ಸರ್ಜನ್ ಡಾ.ಸಿಂಧುಲಕ್ಷ್ಮಿ, ಇಂಟೆನ್ಸಿವಿಸ್ಟ್ ಮತ್ತು ಕ್ರಿಟಿಕಲ್ ಕೇರ್ ಅರಿವಳಿಕೆ ತಜ್ಞ ಡಾ.ವಿವೇಕ್ ನಾಯಕ್ ತಂಡದಲ್ಲಿದ್ದು, ತಮ್ಮ ಅನುಭವ ಹಂಚಿಕೊಂಡರು.

ಹೊಸ ಜೀವನ ಕೊಟ್ಟಿದ್ದಾರೆ

ಪೈಲ್ಸ್‌ನಿಂದ ಸಮಸ್ಯೆ ತೋರಿಸಲು ಹೋದಾಗ ಕ್ಯಾನ್ಸರ್ ಇರುವುದು ಗೊತ್ತಾಯಿತು. ಹಲವು ಕಡೆ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಲಿಲ್ಲ. ಬದುಕುವುದೇ ಇಲ್ಲ ಎಂದು ತಿಳಿದಿದ್ದ ನನ್ನನ್ನು ಎನ್.ಜೆ. ಆಸ್ಪತ್ರೆ ವೈದ್ಯರು ಗುಣಮುಖರನ್ನಾಗಿಸಿ ಹೊಸ ಜೀವನ ಕೊಟ್ಟಿದ್ದಾರೆ.

ಗಣೇಶ್ ಶರ್ಮಾ, ಕ್ಯಾನ್ಸರ್‌ನಿಂದ ಗುಣಮುಖರಾದ ರೋಗಿ.

ನಮ್ಮ ಎನ್‌ಜೆ ಆಸ್ಪತ್ರೆಯಲ್ಲಿ ನಾಲ್ಕನೇ ಹಂತದಲ್ಲಿ ಕ್ಯಾನ್ಸರ್ ಇದ್ದ ರೋಗಿಗೆ ನಮ್ಮ ಆಸ್ಪತ್ರೆ ತಜ್ಞ ವೈದ್ಯರ ತಂಡ ವಿಶೇಷವಾಗಿ ಚಿಕಿತ್ಸೆ ನೀಡುವ ಮೂಲಕ ಗುಣಮುಖರನ್ನಾಗಿಸಿದ್ದಾರೆ. ಮಾದರಿಯಲ್ಲಿ ಶಸ ಚಿಕಿತ್ಸೆ ನಡೆದಿರುವುದು ದೇಶದಲ್ಲಿಯೇ ಮೊದಲನೇಯದಾಗಿದೆ.

ಡಾ.ಜೆ.ದುರ್ಗೇಶ್, ವೈದ್ಯಕೀಯ ನಿರ್ದೇಶಕರು, ಎನ್‌ಜೆ ಆಸ್ಪತ್ರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net