ಮತ ಯಂತ್ರಗಳೊಂದಿಗೆ ಮತಗಟ್ಟೆಗೆ ತೆರಳಿದ ಸಿಬ್ಬಂದಿ

06-05-Shiva-1
ರಾಯಚೂರಿನ ಎಸ್‌ಆರ್‌ಪಿಎಸ್ ಪಿಯು ಕಾಲೇಜಿನಲ್ಲಿ ಲೋಕಸಭೆ ಚುನಾವಣೆಯ ಮಸ್ಟರಿಂಗ್ ಕೇಂದ್ರದಲ್ಲಿ ಮತ ಯಂತ್ರಗಳೊಂದಿಗೆ ಸೋಮವಾರ ಮತಗಟ್ಟೆಗೆ ತೆರಳುತ್ತಿರುವ ಸಿಬ್ಬಂದಿ.
Published on

ರಾಯಚೂರು: ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಮಂಗಳವಾರ ನಡೆಯಲಿರುವ ಮತದಾನಕ್ಕಾಗಿ ಆಯಾ ತಾಲೂಕು ಕೇಂದ್ರಗಳಿಂದ ಮತಯಂತ್ರ ಮತ್ತು ಇನ್ನಿತರ ಸಾಮಗ್ರಿಗಳನ್ನು ತೆಗೆದುಕೊಂಡು ಸಿಬ್ಬಂದಿಗಳು ಸೋಮವಾರ ಮತಗಟ್ಟೆಗಳಿಗೆ ತೆರಳಿದರು.
ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಒಳಗೊಂಡಿರುವ ಕ್ಷೇತ್ರದಲ್ಲಿ ಒಟ್ಟು 2,203 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದ್ದು, ಸಿಬ್ಬಂದಿಗಳು ಮತ ಯಂತ್ರಗಳೊಂದಿಗೆ ಮತಗಟ್ಟೆಗಳಿಗೆ ತೆರಳಲು ತಾಲೂಕುವಾರು ಬಸ್, ಮಿನಿ ಬಸ್ ಹಾಗೂ ಟ್ರಾಕ್ಸ್‌ಗಳ ವ್ಯವಸ್ಥೆ ಮಾಡಲಾಗಿತ್ತು.
ಜಿಲ್ಲೆಯ ಲಿಂಗಸುಗೂರು ಕ್ಷೇತ್ರದಲ್ಲಿ 285 ಮತಗಟ್ಟೆ, ದೇವದುರ್ಗ ಕ್ಷೇತ್ರದಲ್ಲಿ 276, ಮಾನ್ವಿ 276, ರಾಯಚೂರು ನಗರ 250, ರಾಯಚೂರು ಗ್ರಾಮೀಣ 275, ಯಾದಗಿರಿ ಜಿಲ್ಲೆಯ ಸುರಪುರ 317, ಶಹಾಪುರ 265, ಯಾದಗಿರಿ ಕ್ಷೇತ್ರದಲ್ಲಿ 268 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ರಾಯಚೂರು ನಗರ ಮತ್ತು ಗ್ರಾಮೀಣ ಕ್ಷೇತ್ರದ ಮತಯಂತ್ರಗಳನ್ನು ನಗರದ ಎಸ್‌ಆರ್‌ಪಿಎಸ್ ಪಿಯು ಕಾಲೇಜಿನಿಂದ ರವಾನಿಸಲಾಗಿದ್ದು, ಜಿಲ್ಲೆಯ ಇತರ ಕ್ಷೇತ್ರಗಳಲ್ಲಿನ ಮತಯಂತ್ರಗಳನ್ನು ಆಯಾ ತಾಲೂಕು ಕೇಂದ್ರಗಳಿಂದ ಮತಗಟ್ಟೆಗೆ ರವಾನಿಸಲಾಯಿತು.
ಕ್ಷೇತ್ರದ ಒಟ್ಟು 2,203 ಮತಗಟ್ಟೆಗಳಲ್ಲಿ 479 ಸೂಕ್ಷ್ಮ ಮತ್ತು 42 ದುರ್ಬಲ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, 1,471 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. 309 ಮೈಕ್ರೋ ವೀಕ್ಷಕರ ನೇಮಕ ಮಾಡಲಾಗಿದೆ. ಜತೆಗೆ ಚುನಾವಣೆ ಕರ್ತವ್ಯಕ್ಕೆ 8,464 ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net