

ಸಿಂಧನೂರು: ಸ್ಥಳೀಯ ನಗರಸಭೆ, ತುರ್ವಿಹಾಳ ಹಾಗೂ ಬಳಗಾನೂರು ಪಟ್ಟಣ ಪಂಚಾಯಿತಿಗಳಲ್ಲಿ ಸಿಬ್ಬಂದಿ ಕೊರತೆ ಇದ್ದು, ಅಭಿವೃದ್ಧಿ ಕಾರ್ಯ, ಸಕಾಲಕ್ಕೆ ಅರ್ಜಿ ವಿಲೇವಾರಿ, ತೆರಿಗೆ ಸಂಗ್ರಹಕ್ಕೆ ತೊಡಕಾಗಿ ಪರಿಣಮಿಸಿದೆ.
ಸಿಂಧನೂರು ನಗರಸಭೆಗೆ ಮಂಜೂರಾದ 262 ಹುದ್ದೆಗಳಲ್ಲಿ 104 ಭರ್ತಿ ಮಾಡಿದ್ದು, 158 ಹುದ್ದೆಗಳು ಖಾಲಿ ಉಳಿದಿವೆ. 126 ಮಂಜೂರಾದ ಪೌರ ಕಾರ್ಮಿಕರ ಹುದ್ದೆಗಳಲ್ಲಿ ಸದ್ಯ 60 ಜನ ಕಾರ್ಯನಿರ್ವಹಿಸುತ್ತಿದ್ದು, ಇನ್ನೂ 66 ಹುದ್ದೆಗಳು ಭರ್ತಿ ಮಾಡಬೇಕಿದೆ. ನೀರು ಸರಬರಾಜು ಸಹಾಯಕ 8 ಹುದ್ದೆ ಖಾಲಿ ಇವೆ.
ವಾಟರ್ ಸಪ್ಲೈ ವಾಲ್ವ್‌ಮನ್ 24 ಖಾಲಿ ಇವೆ. ಇನ್ನೂ ತುರ್ವಿಹಾಳ ಪಪಂಗೆ ಮಂಜೂರಾದ 44 ಹುದ್ದೆ ಪೈಕಿ 15 ಖಾಲಿ ಇವೆ. ಬಳಗಾನೂರು ಪಪಂನಲ್ಲಿ ಮಂಜೂರಾದ 49 ಹುದ್ದೆಗಳಲ್ಲಿ 21 ಹುದ್ದೆ ಖಾಲಿ ಉಳಿದಿವೆ. ಸಿಂಧನೂರು ನಗರಸಭೆ ಹೊರತುಪಡಿಸಿ, ತುರ್ವಿಹಾಳ ಮತ್ತು ಬಳಗಾನೂರು ಪಟ್ಟಣದಲ್ಲಿ ಮುಖ್ಯಾಧಿಕಾರಿಗಳು ಹೆಚ್ಚು ದಿನ ಕಾರ್ಯ ನಿರ್ವಹಿಸದೆ ಒಂದೆರಡು ವರ್ಷದಲ್ಲಿ ವರ್ಗಾವಣೆಗೊಳ್ಳುತ್ತಿದ್ದು ಹೊಸಬರಿಗೆ ಹಿಡಿತ ಸಿಗುತ್ತಿಲ್ಲ.
ಪ್ರಮುಖವಾಗಿರುವ ಕಂದಾಯ ನಿರೀಕ್ಷಕರು, ಕಿರಿಯ ಇಂಜಿನಿಯರ್, ಪರಿಸರ ಇಂಜಿನಿಯರ್, ಆರೋಗ್ಯ ನಿರೀಕ್ಷಕ, ಬಿಲ್ ಕಲೆಕ್ಟರ್ ಹುದ್ದೆಗಳು ಖಾಲಿಯೇ ಉಳಿಯುವಂತಾಗಿದೆ. ಇವುಗಳನ್ನು ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗದು. ಅನ್ಯ ಸ್ಥಳೀಯ ಸಂಸ್ಥೆಗಳಲ್ಲಿರುವವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಿ ನಿಭಾಯಿಸಬೇಕಾದ ಸ್ಥಿತಿ ಇದೆ. ಕೆಲ ಸಿಬ್ಬಂದಿಗೆ ಸ್ಥಳೀಯ ಸಂಸ್ಥೆಗಳ ಹುದ್ದೆ ನಿಭಾಯಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದ ತ್ವರಿತ ಕೆಲಸಗಳಾಗದೆ ಸಮಸ್ಯೆಗಳು ಎದುರಾಗುತ್ತಿವೆ.
ಸದ್ಯ ಬಿ-ಖಾತಾ ಹಂಚಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಆದರೆ, ಅಗತ್ಯ ದಾಖಲೆಗಳನ್ನು ಪಡೆಯಲು ಕಚೇರಿಗಳಲ್ಲಿ ಸಿಬ್ಬಂದಿ ಇಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಆಡಳಿತ ವ್ಯವಸ್ಥೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಜನನ-ಮರಣ ಪ್ರಮಾಣ ಪತ್ರ, ಕಟ್ಟಡ ಪರವಾನಗಿ, ನೀರಿನ ಸಂಪರ್ಕ, ಒಳಚರಂಡಿ ಸಂಪರ್ಕ, ಹೀಗೆ ಹಲವು ಕೆಲಸಗಳಿಗೆ ನಿತ್ಯ ನೂರಾರು ಜನರು ನಗರ ಸ್ಥಳೀಯ ಸಂಸ್ಥೆಗಳ ಕಚೇರಿಗೆ ಬರುತ್ತಿದ್ದಾರೆ. ಆದರೆ, ನಿಗದಿತ ಅವಧಿಯಲ್ಲಿ ಕೆಲಸ ಆಗದೆ ಬೇಸರದೊಂದಿಗೆ ಮರಳುತ್ತಿದ್ದಾರೆ.
ವಕೀಲ, ತುರ್ವಿಹಾಳಸಿದ್ದೇಶ ಗುರಿಕಾರಯಾವುದಾದರೂ ಕೆಲಸಕ್ಕೆ ಪಪಂ ಕಚೇರಿಗೆ ತೆರಳಿದರೆ ಸಿಬ್ಬಂದಿ ಇಲ್ಲದೆ ವಾರಗಟ್ಟಲೆ ಕಾಯಬೇಕಾಗಿದೆ. ಅಧಿಕಾರಿಗಳೇ ಇಲ್ಲದೆ ಹಲವು ಬಾರಿ ಜನರು ತೊಂದರೆ ಅನುಭವಿಸಿದ್ದಾರೆ. ಸಿಬ್ಬಂದಿ ಇದ್ದರೆ ಕೆಲಸಗಳು ತ್ವರಿತಗತಿಯಲ್ಲಿ ನಡೆಯಲಿದ್ದು, ಸರ್ಕಾರ ಹುದ್ದೆ ಭರ್ತಿಗೆ ಕ್ರಮಕೈಗೊಳ್ಳಬೇಕು. ಪೌರಾಯುಕ್ತ, ನಗರಸಭೆ, ಸಿಂಧನೂರು ಮಂಜುನಾಥ ಗುಂಡೂರುನಗರಸಭೆಯಲ್ಲಿ 158 ಹುದ್ದೆಗಳು ಖಾಲಿ ಇವೆ. ಮುಖ್ಯವಾಗಿ ಪೌರ ಕಾರ್ಮಿಕರು ಅಗತ್ಯವಾಗಿ ಬೇಕಾಗಿದ್ದಾರೆ. ಉಳಿದ ಹುದ್ದೆಗಳನ್ನು ಈಗ ಲಭ್ಯ ಇರುವ ಸಿಬ್ಬಂದಿಗಳಿಂದ ಸರಿದೂಗಿಸಲಾಗುತ್ತಿದೆ. ಮಂಜೂರಾದ ಹುದ್ದೆಗಳಲ್ಲಿ ಅರ್ಧದಷ್ಟು ಖಾಲಿ ಇವೆ. ಮುಂದಿನ ದಿನಗಳಲ್ಲಿ ನೇಮಕ ಪ್ರಕ್ರಿಯೆ ನಡೆಯಲಿದೆ. ಜನರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ.