ಪುರಸಭೆಯಲ್ಲಿ ಸಿಬ್ಬಂದಿ ಕೊರತೆ

19 bangarpete 1
Published on

ವಿ.ಶಿವಾರೆಡ್ಡಿ, ಬಂಗಾರಪೇಟೆ : ಸ್ಥಳಿಯ ಪುರಸಭೆ ಕಚೇರಿಯಲ್ಲಿರುವ ವಿವಿಧ ಶಾಖೆಗಳಲ್ಲಿ ಸಿಬ್ಬಂದಿ ಕೊರತೆ ಎದುರಿಸುತ್ತಿರುವುದರಿಂದ ಇತರೆ ಸಿಬ್ಬಂದಿ ಹೆಚ್ಚಿನ ಕೆಲಸದ ಒತ್ತಡಕ್ಕೆ ಸಿಲುಕಿದ್ದು, ಜತೆಗೆ ತಮ್ಮ ಕೆಲಸಗಳಿಗೆ ಬರುವ ನಾಗರಿಕರು ವಿಳಂಬ ಎದುರಿಸುವ ಮೂಲಕ ಕಚೇರಿಗೆ ಅಲೆದಾಡುವಂತಾಗಿದೆ.

ಯಾವ ಶಾಖೆಯಲ್ಲಿ ಸಿಬ್ಬಂದಿಯ ಕೊರತೆ ಇದೆಯೋ ಆ ಶಾಖೆಗೆ ಪ್ರಸ್ತುತ ಕೆಲಸದ ಜತೆಗೆ ಹೆಚ್ಚುವರಿ ಶಾಖೆಯ ಕೆಲಸ ವಹಿಸಲಾಗುತ್ತಿದೆ. ಸಿಬ್ಬಂದಿ ಕೊರತೆ ಮಧ್ಯೆಯೂ ನಾಗರಿಕರ ಕೆಲಸಗಳಿಗೆ ಸ್ಪಂದಿಸಿ ಪ್ರಬಾರ ವಹಿಸಿಕೊಂಡಿರುವ ಸಿಬ್ಬಂದಿ ಎಷ್ಟೇ ಕೆಲಸದ ಒತ್ತಡ ಇದ್ದರೂ ಸಕಾಲಕ್ಕೆ ನಾಗರಿಕರ ಕೆಲಸ ಪೂರ್ಣಗೊಳಿಸಲು ಎಷ್ಟೇ ಪ್ರಯತ್ನಗಳು ಪಟ್ಟರೂ ವಿಳಂಬವಾಗುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದತೆಯಾಗುತ್ತಿದೆ.

ಕಚೇರಿಯಲ್ಲಿದ್ದ ಎಲ್ಲ ಶಾಖೆಗಳ ಸಿಬ್ಬಂದಿಗೆ ಒಬ್ಬರಂತೆ ಕಂಪ್ಯೂಟರ್​ ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿತ್ತು. ಅವಧಿ ಮುಗಿದ ಹಿನ್ನೆಲೆಯಲ್ಲಿ ಆಯಾ ಶಾಖೆಯ ಮಾಹಿತಿ ಅಪ್​ಡೇಟ್​ ಮಾಡಲು ಸಹ ಆಗುತ್ತಿಲ್ಲ ಎನ್ನಲಾಗಿದೆ.

ಪ್ರತಿವರ್ಷ ಕಂದಾಯ ಪಾವತಿ ಮಾಡಿದ ನಂತರ ಅದರ ಮಾಹಿತಿ ಅಪ್​ಲೋಡ್​ ಮಾಡಬೇಕು. ಅದಕ್ಕೆ ನಾಗರಿಕರು, ಕಚೇರಿಯ ಸಿಬ್ಬಂದಿ ಗಂಟೆಗಟ್ಟಲೇ ನಡೆದಾಡಬೇಕಿದೆ. ಒಂದು ವೇಳೆ ಕಂದಾಯ ಪಾವತಿ ಮಾಡಿರುವುದನ್ನು ಆನ್​ಲೈನ್​ಗೆ ಅಪ್​ಲೋಡ್​ ಮಾಡಿಸದಿದ್ದಲ್ಲಿ ಮುಂದಿನ ವರ್ಷ ಕಂದಾಯ ಕಟ್ಟುವ ವೇಳೆ ಪಾವತಿಸಿರುವ ಚಲನ್​ ತೋರಿಸಿ ಕಂದಾಯ ಪಾವತಿಸಬೇಕು. ಹಿಂದಿನ ವರ್ಷದ ಕರ ಪಾವತಿ ರಸೀದಿ ಇಲ್ಲದೆ ಇದ್ದರೇ ಆಗ ಹಿಂದಿನ ವರ್ಷದ ಕಂದಾಯ&ಪ್ರಸ್ತುತ ವರ್ಷದ ಕಂದಾಯಕ್ಕೆ ಸೇರಿಸಿ ಪಾವತಿ ಮಾಡಬೇಕಾಗುತ್ತದೆ. ಆದ್ದರಿಂದ ಕಂದಾಯ ಪಾವತಿ ಮಾಡಿದ ತಕ್ಷಣ ಸಿಸ್ಟಮ್​ಗೆ ಅಪ್​ಲೋಡ್​ ಮಾಡುವ ವ್ಯವಸ್ಥೆ ಮಾಡಬೇಕಿದೆ. ಹೀಗೆ ಹಲವು ಕೆಲಸಗಳಿಗೆ ಬರುವ ನಾಗರಿಕರಿಗೆ ಸರಿಯಾದ ಸಮಯಕ್ಕೆ ಕೆಲಸ ಆಗದೆ ಇರುವುದರಿಂದ ಮತ್ತಷ್ಟು ಸಮಸ್ಯೆ ಉಂಟಾಗುತ್ತಿದೆ.

ಈ ಎಲ್ಲ ಸಮಸ್ಯೆಗಳನ್ನು ತಿಳಿದುಕೊಂಡು ಅಧ್ಯಕ್ಷ ಗೋವಿಂದ ಕಚೇರಿಯಲ್ಲಿ ಇದ್ದು ತಮ್ಮ ಕೈಯಲ್ಲಾದಷ್ಟು ನಾಗರಿಕರು ಎದುರಿಸುವ ಸಮಸ್ಯೆಗಳಿಗೆ ಸ್ಥಳದಲ್ಲೇ ಬಗೆಹರಿಸಿ ಕೊಡುವ ಕೆಲಸ ಮಾಡುತ್ತಿದ್ದಾರೆ. ಆದರೆ ಕೆಲಸಕ್ಕೆ ವೇಗ ಹೆಚ್ಚಿಸಲು ಕೊರತೆ ಇರುವ ಸಿಬ್ಬಂದಿ ಭರ್ತಿಯಾಗಬೇಕಿದೆ.

ಕಚೇರಿಗೂ ಮನೆಗೂ ಪರೇಡ್​: ಜನನ&ಮರಣ ಶಾಖೆ ನೋಡಿಕೊಳ್ಳುತ್ತಿದ್ದ ಹರೀಶ್​ ಎಂಬುವರಿಗೆ ಆರೋಗ್ಯ ನಿರೀಕ್ಷಕರ ಪ್ರಭಾರ ವಹಿಸಲಾಗಿದೆ. ಇದರಿಂದ ಜನನ&ಮರಣ ದೃಢೀಕರಣ ಪತ್ರ ಪಡೆಯಲು ನಾಗರಿಕರು ಕಾದು ಮರುದಿನ ಕಚೇರಿಗೆ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬಹುತೇಖ ಮಂದಿ ಇ&ಖಾತೆ ಮಾಡಿಸಿಕೊಳ್ಳಲು ಕಚೇರಿಗೆ ಬಂದು ಕಾದು ವಾಪಸ್​ ಹೋಗಿ, ಕಚೇರಿಗೆ ಮತ್ತು ಮನೆಗೆ ಪರೇಡ್​ ಮಾಡಬೇಕಾದ ದುಸ್ಥಿತಿ ಎದುರಾಗಿದೆ. ಸಿಬ್ಬಂದಿ ಕೊರತೆಯಿಂದ ನಾಗರಿಕರ ಕೆಲಸಗಳು ವಿಳಂಬವಾಗುತ್ತಿದ್ದರೆ, ಹಾಲಿ ಸಿಬ್ಬಂದಿಗೆ ಕೆಲಸದ ಒತ್ತಡದಿಂದ ಅವರ ಆರೋಗ್ಯದ ಮೇಲೂ ಪರಿಣಾಮ ಬೀರುವಂತಾಗಿದೆ.

ಎಲ್ಲೆಲ್ಲಿ ಕೊರತೆ? ಕಂದಾಯ ಅಧಿಕಾರಿ, ಬಿಲ್​ ಕಲೆಕ್ಟರ್​, ಅಕೌಂಟೆಂಟ್​, ಸಮುದಾಯ ಸಂಘಟನಾ ಅಧಿಕಾರಿ, ಸಮುದಾಯ ಸಂಘಟಕರು, ಇಬ್ಬರು ಹಿರಿಯ ಆರೋಗ್ಯ ನಿರೀಕ್ಷಕರು, ಕಿರಿಯ ಆರೋಗ್ಯ ನಿರೀಕ್ಷಕರು, ಪರಿಸರ ಅಭಿಯಂತರರು ಸೇರಿ ಒಟ್ಟು 9 ಶಾಖೆಗಳಲ್ಲಿ ಸಿಬ್ಬಂದಿ ಕೊರತೆ ಕಾಣುತ್ತಿದೆ. ಸಿಬ್ಬಂದಿ ಕೊರತೆ ಇವುರ ಶಾಖೆಯಲ್ಲಿ ಹಾಲಿ ಇರುವ ಒಬ್ಬೊಬ್ಬ ಸಿಬ್ಬಂದಿಗೆ ಎರಡು ಮೂರು ಶಾಖೆಗಳನ್ನು ಪ್ರಭಾರ ವಹಿಸಲಾಗಿದೆ.

ಸಿಬ್ಬಂದಿ ಕೊರತೆ ಇದ್ದರೂ ನಾಗರಿಕರಿಗೆ ತೊಂದರೆ ಆಗದ ರೀತಿಯಲ್ಲಿ ಕೆಲಸ ಮಾಡಿಸಿಕೊಡಲಾಗುತ್ತಿದೆ. ಶಾಸಕರ ಗಮನಕ್ಕೆ ತಂದು ಸಿಬ್ಬಂದಿ ಕೊರತೆ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು.  ಗೋವಿಂದ ಅಧ್ಯಕ್ಷ, ಪುರಸಭೆ, ಬಂಗಾರಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net