ಶಿರಸಿ ನಗರಸಭೆಯಲ್ಲಿ ಸಿಬ್ಬಂದಿ ಕೊರತೆ

20sirsi1
Published on

ಶಿರಸಿ: ಶಿರಸಿ ನಗರಸಭೆಯಲ್ಲಿ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗತೊಡಗಿವೆ. ಇದರ ನಡುವೆಯೇ ಕೆಲ ಅಧಿಕಾರಿಗಳು ಭ್ರಷ್ಟಾಚಾರ ಆರೋಪದಡಿ ಅಮಾನತುಗೊಂಡಿದ್ದಾರೆ.

70 ಸಾವಿರ ಜನಸಂಖ್ಯೆ ಹೊಂದಿರುವ ನಗರಸಭೆಯಲ್ಲಿ 31 ವಾರ್ಡ್‌ಗಳಿವೆ. ಬಹುತೇಕ ವಾರ್ಡ್‌ಗಳು ಅತಿಕ್ರಮಣ ಜಾಗದಲ್ಲಿರುವ ಕಾರಣ ಇದುವರೆಗೂ ಇ ಖಾತಾ ಪಡೆಯಲು ಸಮಸ್ಯೆ ಆಗುತ್ತಿತ್ತು. ರಾಜ್ಯ ಸರ್ಕಾರ ಈಗ ಬಿ ಖಾತಾ ಮೂಲಕ ಇಲ್ಲಿಯ ಜನತೆಗೆ ಮನೆ ನಿರ್ಮಿಸಿಕೊಳ್ಳಲು, ವಾಣಿಜ್ಯ ವಹಿವಾಟು ನಡೆಸಲು ಅವಕಾಶ ಮಾಡಿಕೊಟ್ಟಿದೆ. ಆದರೆ, ಬಿ ಖಾತಾ ಸೇರಿದಂತೆ ಪ್ರಮುಖ ಕಾಗದ ಪತ್ರಗಳನ್ನು ಮಾಡಿಸಿಕೊಳ್ಳಲು ಸಾರ್ವಜನಿಕರು ನಗರಸಭೆಗೆ ತೆರಳಿದರೆ ಅಲ್ಲಿ ಸಿಬ್ಬಂದಿ ಇರದೇ, ಮತ್ತೇ ಮತ್ತೆ ನಗರಸಭೆಗೆ ಅಲೆದಾಡುವಂತಾಗಿದೆ.

146 ಹುದ್ದೆಗಳು ಖಾಲಿ !

ನಗರಸಭೆಯ ವಿವಿಧ ಹಂತಗಳಲ್ಲಿ ಒಟ್ಟೂ 238 ಹುದ್ದೆಗಳಿವೆ. ಆದರೆ, ಈ ಹುದ್ದೆಗಳ ಪೈಕಿ 92 ಸಿಬ್ಬಂದಿ ಇದ್ದು, ಇನ್ನೂ 146 ಹುದ್ದೆಗಳು ಖಾಲಿ ಇವೆ. ಮುಖ್ಯ ಹುದ್ದೆಗಳೇ ಖಾಲಿ ಇರುವುದು ಕೆಲಸ ಕಾರ್ಯಗಳಿಗೆ ತೊಡಕಾಗಿದೆ.

ನಗರಸಭೆಯ ಸೀನಿಯರ್ ಪ್ರೋಗ್ರಾಮರ್, ಸಹಾಯಕ ಇಂಜಿನಿಯರ್, ಪರಿಸರ ಇಂಜಿನಿಯರ್, ಲೆಕ್ಕಾಧಿಕಾರಿ, ಕಂದಾಯ ಅಧಿಕಾರಿ, ಅಕೌಂಟೆಂಟ್ ಹುದ್ದೆಗಳು ಖಾಲಿ ಇವೆ. ಜತೆಗೆ ಹಿರಿಯ ಆರೋಗ್ಯ ನಿರೀಕ್ಷಕರ ಮೂರು ಹುದ್ದೆಗಳು ಖಾಲಿ ಇವೆ. ಪ್ರಥಮ ದರ್ಜೆ ಸಹಾಯಕ ಮೂರು ಹುದ್ದೆಗಳಲ್ಲಿ ಒಂದು ಸ್ಥಾನ ಖಾಲಿ ಇದೆ. ಶೀಘ್ರ ಲಿಪಿಕಾರರ ಎರಡೂ ಹುದ್ದೆಗಳು ಖಾಲಿ, ನೀರು ಸರಬರಾಜು ಸಹಾಯಕರ ಎಲ್ಲ 8 ಹುದ್ದೆಗಳು ಖಾಲಿ, ಕಂಪ್ಯೂಟರ್ ಆಪರೇಟರ್‌ಗಳ ಎಲ್ಲ ಮೂರು ಹುದ್ದೆಗಳು ಖಾಲಿ, ಕಿರಿಯ ಆರೋಗ್ಯ ನಿರೀಕ್ಷಕರ ಎಲ್ಲ ಮೂರು ಹುದ್ದೆಗಳೂ ಖಾಲಿ, ಸಮುದಾಯ ಸಂಘಟಕರ ಎರಡು ಹುದ್ದೆಗಳಲ್ಲಿ ಒಂದು ಹುದ್ದೆ ಖಾಲಿ, ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಲ್ಲಿ ಒಂದು ಖಾಲಿ ಇದೆ.

ಇನ್ನು ವಾಹನ ಚಾಲಕರ 5 ಹುದ್ದೆಗಳಲ್ಲಿ 2 ಹುದ್ದೆ ಖಾಲಿ ಇದ್ದರೆ, ಇಲೆಕ್ಟ್ರಿಷಿಯನ್ ಒಂದು ಹುದ್ದೆ ಖಾಲಿ, ಲ್ಯಾಬ್ ಟೆಕ್ನಿಷಿಯನ್ 1, ಪ್ಲಂಬರ್ 1, ಹೆಡ್ ಗಾರ್ಡನರ್ 1 ಹುದ್ದೆ , ಸ್ಯಾನಿಟರಿ ಸೂಪರ್‌ವೈಸರ್ ನಾಲ್ಕು ಹುದ್ದೆಗಳಲ್ಲಿ ಒಂದು ಖಾಲಿ ಇದೆ. ಅಟೆಂಡರ್ 8 ಹುದ್ದೆಗಳಲ್ಲಿ 3 ಖಾಲಿ, ನಾಲ್ಕು ಕ್ಲೀನರ್ ಹುದ್ದೆಗಳು ಖಾಲಿ, ಗಾರ್ಡನರ್ ಒಂದು ಹುದ್ದೆ ಖಾಲಿ ಇದೆ. ಎಲ್ಲಕ್ಕಿಂತ ಪೌರ ಕಾರ್ಮಿಕರ ಹುದ್ದೆ ಬಹುತೇಕ ಖಾಲಿ ಇರುವುದು ಸಮಸ್ಯೆಯಾಗಿದೆ. ಮಂಜೂರು ಇರುವ 100 ಹುದ್ದೆಗಳ ಪೈಕಿ 54 ಹುದ್ದೆಗಳು ಖಾಲಿ ಇದ್ದರೆ ಹೆಲ್ಪರ್, ವಾಟರ್ ಸಪ್ಲೆಯರ್, ವಾಲ್ವಮನ್ 30 ಹುದ್ದೆಗಳಲ್ಲಿ 24 ಖಾಲಿ ಇವೆ.

ಅನಿರೀಕ್ಷಿತ ತೆರವು !

ನಗರಸಭೆಯ ಮುಖ್ಯ ಹುದ್ದೆಯಾದ ಪೌರಾಯುಕ್ತ ಹುದ್ದೆಯೇ ಈಗ ಖಾಲಿ ಇದ್ದು, ಪ್ರಭಾರಿಯಾಗಿ ಇಂಜಿನಿಯರ್ ಶಿವರಾಜ ಕಾರ್ಯ ನಿರ್ವಹಿಸುತ್ತಿದ್ದಾರೆ. ನಗರಸಭೆಯನ್ನೇ ನಲುಗಿಸಿದ ಕಾಸ್ಟ್ ಐರನ್ ಪೈಪು ಕಳ್ಳತನದಲ್ಲಿ ಪೌರಾಯುಕ್ತ ಕಾಂತರಾಜು ಶಾಮೀಲಾಗಿರುವ ಬಗ್ಗೆ ಪೊಲೀಸ್ ತನಿಖೆಯಿಂದ ಬಹಿರಂಗಗೊಂಡಿದೆ. ಆ ಬಳಿಕ ಕಾಂತರಾಜು ಸಹ ನಗರಸಭೆಗೆ ಬಾರದ ಕಾರಣ ಈ ಹುದ್ದೆಗೆ ಪ್ರಭಾರಿ ನೇಮಿಸಲಾಗಿದೆ. ಇನ್ನು ಕಂದಾಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಆರ್.ಎಂ. ವೆರ್ಣೇಕರ್ ಇತ್ತೀಚೆಗಷ್ಟೇ ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದರಿಂದ ಈ ಹುದ್ದೆಯೂ ಈಗ ಖಾಲಿ ಆಗಿದೆ. ಒಂದೆಡೆ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರ ಕೆಲಸ ಕಾರ್ಯಕ್ಕೆ ವಿಳಂಬವಾಗುತ್ತಿದ್ದ ನಗರಸಭೆಗೆ ಈಗ ಇರುವ ಸಿಬ್ಬಂದಿಯೂ ಭ್ರಷ್ಟಾಚಾರ ಮಾಡಿ ಹುದ್ದೆ ಖಾಲಿ ಮಾಡುತ್ತಿರುವುದು ಇನ್ನಷ್ಟು ಸಮಸ್ಯೆಯಾಗಿ ಪರಿಣಮಿಸಿದೆ.

ಖಾಲಿ ಇರುವ ಹುದ್ದೆಗಳ ಪಟ್ಟಿ ಮಾಡಿ ಭರ್ತಿ ಮಾಡುವಂತೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಈಗ ಕೆಲ ಕೆಲಸಗಳನ್ನು ಅನಿವಾರ್ಯವಾಗಿ ಗುತ್ತಿಗೆ ಆಧಾರದಲ್ಲಿ ಮಾಡಿಸುತ್ತಿದ್ದೇವೆ. ಇದರಿಂದ ನಗರಸಭೆಗೂ ಹೊರೆ, ಸಾರ್ವಜನಿಕರ ಕೆಲಸ ಕಾರ್ಯಗಳು ನಿರೀಕ್ಷಿತ ವೇಗದಲ್ಲಿ ಆಗುತ್ತಿಲ್ಲ. ಆದಾಗ್ಯೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಶ್ರಮಿಸುತ್ತಿದ್ದೇವೆ. ಶರ್ಮಿಳಾ ಮಾದನಗೇರಿ, ನಗರಸಭೆ ಅಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net