ಹು-ಧಾ ಪಾಲಿಕೆಯಲ್ಲಿ ಸಿಬ್ಬಂದಿ ಕೊರತೆ

New Tenginakayi mahesh New
Published on

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಸಮರ್ಪಕ ಆಡಳಿತ ನಡೆಸಲು ತೊಂದರೆಯಾಗುತ್ತಿದೆ. ಜನಸಾಮಾನ್ಯರು ಸಹ ಸಕಾಲದಲ್ಲಿ ತಮ್ಮ ಕೆಲಸಗಳು ಆಗದ ಕಾರಣ ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಸದನದ ಗಮನ ಸೆಳೆದಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಮಳೆಗಾಲದ ಅಧಿವೇಶನದಲ್ಲಿ ಗುರುವಾರದಂದು ಈ ಕುರಿತು ಸರ್ಕಾರದ ಗಮನ ಸೆಳೆದ ಶಾಸಕ ಟೆಂಗಿನಕಾಯಿ, ಸಿಬ್ಬದಿ ಕೊರತೆಯಿಂದಾಗಿ ಗಂಭೀರ ಸಮಸ್ಯೆ ಆಗುವುದಿಲ್ಲವೆಂದು ನಗರಾಭಿವೃದ್ಧಿ ಸಚಿವರು ಹೇಳಿದ್ದಾರೆ. ಆದರೆ, ಇದರಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ ಎಂದು ತಿಳಿಸಿದರು.

ಹು-ಧಾ ಮಹಾನಗರ ಪಾಲಿಕೆಯಲ್ಲಿ 3,794 ಮಂಜೂರಾದ ಹುದ್ದೆಗಳು ಇವೆ. ಅದರಲ್ಲಿ ಎ ಗ್ರೇಡ್​ನ 49 ಹುದ್ದೆಗಳು ಇದ್ದು, 17 ಹುದ್ದೆಗಳು ಖಾಲಿ ಇವೆ. ಅಂದರೆ ಶೇ. 35ರಷ್ಟು ಎ ಗ್ರೇಡ್ ಹುದ್ದೆಗಳು ಖಾಲಿ ಉಳಿದಿವೆ. ಗ್ರೇಡ್ ಬಿ ದಲ್ಲಿ ಮಂಜೂರಾಗಿರುವ ಹುದ್ದೆಗಳು 64 ಇದ್ದು, ಖಾಲಿ ಇರುವ ಹುದ್ದೆಗಳು 20. ಅಲ್ಲಿಯೂ ಶೇ. 33ರಷ್ಟು ಹುದ್ದೆಗಳು ಖಾಲಿ ಇವೆ. ಗ್ರೇಡ್ ಸಿ ದಲ್ಲಿ 1,183 ಹುದ್ದೆಗಳು ಇದ್ದು, 431 ಸಿಬ್ಬಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ. ಅಲ್ಲಿಯೂ ಶೇ. 64ರಷ್ಟು ಹುದ್ದೆಗಳು ಖಾಲಿ ಇವೆ. ಗ್ರೇಡ್ ಡಿ ದಲ್ಲಿ 2,498 ಮಂಜೂರಾದ ಹುದ್ದೆಗಳಿವೆ. ಆದರೆ, 1,130 ಹುದ್ದೆಗಳು ಖಾಲಿ ಇದ್ದು, ಶೇ. 77ರಷ್ಟು ಹುದ್ದೆಗಳು ಭರ್ತಿಯಾಗಬೇಕಿದೆ ಎಂದು ವಿವರಿಸಿದರು.

ಒಟ್ಟು 3,794 ಹುದ್ದೆಗಳ ಪೈಕಿ ಕರ್ತವ್ಯ ನಿರ್ವಹಿಸುತ್ತಿರುವವರು 1,358 ಸಿಬ್ಬಂದಿ ಮಾತ್ರ. ಪಾಲಿಕೆಯಲ್ಲಿ ಶೇ. 35ರಷ್ಟು ಜನ ಸಿಬ್ಬಂದಿ ಮಾತ್ರ ಇದ್ದು, ಶೇ. 65ರಷ್ಟು ಹುದ್ದೆಗಳು ಖಾಲಿ ಇವೆ ಎಂದು ಕಳವಳ ವ್ಯಕ್ತಪಡಿಸಿದರು.

2,087 ಜನರನ್ನು ಡಿ ಗ್ರುಪ್​ಗೆ ಹೊರಗುತ್ತಿಗೆ ಆಧಾರದಡಿ ನೇಮಕ ಮಾಡಿಕೊಳ್ಳಲಾಗಿದೆ. ಆದರೂ, ಶೇ. 10ರಷ್ಟು ಹುದ್ದೆ ಇದುವರೆಗೂ ಖಾಲಿ ಉಳಿದಿವೆ ಎಂದರು.

ಖಾಲಿ ಹುದ್ದೆಗಳ ಒಟ್ಟಾರೆ ಪರಿಣಾಮದಿಂದಾಗಿ ಸಮರ್ಪಕ ಆಡಳಿತ ನಿರ್ವಹಣೆಯಲ್ಲಿ ಸಮಸ್ಯೆ ಆಗುತ್ತಿದೆ. ಒಬ್ಬ ಅಧಿಕಾರಿಗೆ 4-5 ಬೇರೆ ಬೇರೆ ವಿಭಾಗಗಳ ಜವಾಬ್ದಾರಿ ನೀಡಲಾಗಿದೆ ಎಂದರು.

ಎ ಗ್ರೇಡ್​ನ ಹೆಚ್ಚುವರಿ ಆಯುಕ್ತರ ಹುದ್ದೆ ಖಾಲಿ ಇದೆ. ಉಪ ಆಯುಕ್ತರು (ಅಭಿವೃದ್ಧಿ) ಇಲ್ಲ. ಮುಖ್ಯ ಲೆಕ್ಕ ಪರಿಶೋಧನಾ ಅಧಿಕಾರಿ, ಕಾನೂನು ಅಧಿಕಾರಿ, ಆರೋಗ್ಯ ಮುಖ್ಯಾಧಿಕಾರಿ, ಕೌನ್ಸಿಲ್ ಸೆಕ್ರೆಟರಿ, ತಾಂತ್ರಿಕ ಸಹಾಯಕರು, ಇ ಗರ್ವನನ್ಸ್, ಪಶು ಆರೋಗ್ಯಾಧಿಕಾರಿ, ಅಸಿಸ್ಟಂಟ್ ಕೌನ್ಸಿಲ್ ಸೆಕ್ರೆಟರಿ ಸೇರಿದಂತೆ ಹಲವಾರು ಪ್ರಮುಖ ಹುದ್ದೆಗಳನ್ನು ಭರ್ತಿ ಮಾಡಿಲ್ಲವೆಂದು ಸದನಕ್ಕೆ ತಿಳಿಸಿದರು.

ಒಬ್ಬ ಕಾರ್ಯನಿರ್ವಾಹಕ ಇಂಜಿನಿಯರ್​ಗೆ ಐದು ವಿವಿಧ ಜವಾಬ್ದಾರಿಗಳನ್ನು ನೀಡಲಾಗಿದೆ. ಆ ಅಧಿಕಾರಿಗೆ ಕೆಲಸದ ಒತ್ತಡವಾಗುವ ಜತೆಗೆ, ಜನರಿಗೂ ಸರಿಯಾದ ಸಮಯಕ್ಕೆ ತಮ್ಮ ಕೆಲಸ ಆಗದಂತಾಗಿದೆ ಎಂದು ಹೇಳಿದರು.

ಇವೆಲ್ಲ 2011ರ ಪ್ರಕಾರ ಮಂಜೂರಾದ ಹುದ್ದೆಗಳಾಗಿದ್ದು, 2025ರ ಪ್ರಕಾರ ಅಂದಾಜು ಮಾಡಿದರೆ ಇನ್ನೂ ಹೆಚ್ಚಿನ ಹುದ್ದೆಗಳನ್ನು ನೇಮಿಸಿಕೊಳ್ಳಬೇಕು ಎಂದು ತಿಳಿಸಿದರು.

ಶಾಸಕ ಮಹೇಶ ಟೆಂಗಿನಕಾಯಿ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಶಾಸಕರ ಕೋರಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ ಎಂದು ಭರವಸೆ ನೀಡಿದರು.

ಎ ಮತ್ತು ಬಿ ಗ್ರೇಡ್​ಗೆ ಬೇರೆ ಇಲಾಖೆಗಳಿಂದ ಎರವಲು ಪಡೆಯುವ ಅವಕಾಶ ಇದೆ. ಈ ನಿಟ್ಟಿನಲ್ಲಿ ಚಿಂತಿಸಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net