ದ.ಕ.ದ 6 ತಾಲೂಕು ಪಶುವೈದ್ಯಕೀಯ ಕೇಂದ್ರಗಳಲ್ಲಿ ಮುಖ್ಯ ಆಡಳಿತಾಧಿಕಾರಿಯೇ ಇಲ್ಲ

Veterinary hospital
Published on

ಪ್ರಕಾಶ್ ಮಂಜೇಶ್ವರ, ಮಂಗಳೂರು

ಸುಧಾರಿತ ಪಶುಸಂಗೋಪನಾ ಚಟುವಟಿಕೆ ಮೂಲಕ ಗ್ರಾಮೀಣ ಭಾಗದ ಜನರ ಆರ್ಥಿಕ ಬೆಳವಣಿಗೆಯಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಮುಖ್ಯ ಪಾತ್ರ ವಹಿಸುತ್ತದೆ. ಕರೊನಾ ಕಾಲದಲ್ಲಿ ಈ ಕ್ಷೇತ್ರಕ್ಕೆ ಗರಿಷ್ಟ ಸಂಖ್ಯೆಯ ಜನರು ಬಂದಿದ್ದಾರೆ. ಆದರೆ ಈ ಸರ್ಕಾರಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಅಗತ್ಯವಿರುವ ಮಾನವ ಸಂಪನ್ಮೂಲವೇ ಇಲಾಖೆಯಲ್ಲಿಲ್ಲ ಇಲ್ಲ!

ಯೋಜನೆಯು ಫಲಾನುಭವಿಗಳನ್ನು ಪರಿಣಾಮಕಾರಿ ರೀತಿಯಲ್ಲಿ ತಲುಪುವುದು ಹೇಗೆ? ವೈದ್ಯರು, ಇತರ ಸಿಬ್ಬಂದಿ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಅವಕಾಶ ದೊರೆಯುವುದು ಹೇಗೆ? ಇಲಾಖೆಯಲ್ಲಿ ಅಧಿಕ ಪ್ರಮಾಣದ ಸಿಬ್ಬಂದಿ ಕೊರತೆ ಇರುವ ದಕ್ಷಿಣ ಕನ್ನಡದಲ್ಲಿ ಈ ಸಮಸ್ಯೆಗಳು ಎದುರಾಗಿವೆ.

ಇಲಾಖೆಯಲ್ಲಿ ಶೇ.73 ಹುದ್ದೆಗಳು ಖಾಲಿ. ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಸರಾಸರಿ ಶೇ.50ಕ್ಕಿಂತ ಅಧಿಕ ಹುದ್ದೆಗಳು ಖಾಲಿ ಬಿದ್ದಿವೆ. ಜಿಲ್ಲೆಯಲ್ಲಿ ಮಂಜೂರಾದ 449 ಹುದ್ದೆಗಳ ಪೈಕಿ ಭರ್ತಿಯಾಗಿರುವುದು 105 ಮಾತ್ರ. ಉಡುಪಿಯಲ್ಲಿ 357 ಹುದ್ದೆಗಳಲ್ಲಿ 267 ಭರ್ತಿಯಾಗಿವೆ. ದಕ್ಷಿಣ ಕನ್ನಡಕ್ಕೆ ಹೋಲಿಸಿದರೆ ಉಡುಪಿಯ ಪರಿಸ್ಥಿತಿ ಪರವಾಗಿಲ್ಲ.

ದ.ಕ.ಜಿಲ್ಲೆಯ ಏಳು ತಾಲೂಕು ಕೇಂದ್ರಗಳಲ್ಲಿ ಪುತ್ತೂರು ಹೊರತುಪಡಿಸಿ ಉಳಿದ ಕೇಂದ್ರಗಳಲ್ಲಿ ಮುಖ್ಯ ಆಡಳಿತಾಧಿಕಾರಿ ಹುದ್ದೆ ಖಾಲಿ ಇವೆ. ಹತ್ತಿರದ ಆಸ್ಪತ್ರೆಗಳ ವೈದ್ಯರೇ ಇಲ್ಲಿನ ಹೆಚ್ಚುವರಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಚಿಕಿತ್ಸೆಯಲ್ಲಿ ಪ್ರಧಾನ ಪಾತ್ರವಹಿಸುವ ಪಶು ವೈದ್ಯಕೀಯ ಸಹಾಯಕ ಹುದ್ದೆಗಳು ಖಾಲಿ ಇದ್ದು, ಕೆಲವೆಡೆ ವೈದ್ಯರು ಕ್ಷೇತ್ರ ಭೇಟಿ ಸಂದರ್ಭ ಆಸ್ಪತ್ರೆಗೆ ಬಾಗಿಲು ಹಾಕಿ ಹೋಗುವ ಪರಿಸ್ಥಿತಿ ಇದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2,50,500 ದನ, 1832 ಎಮ್ಮೆ, 32,200 ಆಡುಗಳನ್ನು ಸಾಕಲಾಗುತ್ತಿದೆ. ಕೋಳಿ, ಹಂದಿ ಸಹಿತ ಇತರ ಸಾಕುಪ್ರಾಣಿ, ಪಕ್ಷಿಗಳ ಅಂಕಿ ಅಂಶ ಪ್ರತ್ಯೇಕ ಇದೆ. ಉಡುಪಿಯಲ್ಲಿ ದನ, ಎಮ್ಮೆ ಸಹಿತ ಎಲ್ಲ ಜಾನುವಾರು ಒಟ್ಟು 3,82,351, ನಾಯಿ 1,18,618, ಕೋಳಿ 12,64,030 ಇದೆ.

ಮೂಲಸೌಕರ್ಯಕ್ಕಿಲ್ಲ ಕೊರತೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಸ್ಪತ್ರೆ ಕಟ್ಟಡ ಸಹಿತ ಮೂಲಸೌಕರ್ಯದ ಕೊರತೆ ಇಲ್ಲ. ಜಾನುವಾರುಗಳಿಗೆ ಲಸಿಕೆ, ಔಷಧಗಳು, ಕೃತಕ ಗರ್ಭಧಾರಣೆ ವ್ಯವಸ್ಥೆ ಇದೆ. ಬಹುತೇಕ ಎಲ್ಲ ವೈದ್ಯಾಧಿಕಾರಿಗಳು ಎರಡು-ಮೂರು ಆಸ್ಪತ್ರೆಗಳ ಜವಾಬ್ದಾರಿ ಹೊಂದಿದ್ದಾರೆ. ರೈತರ ಅಗತ್ಯಗಳಿಗೆ ಸಕಾಲದಲ್ಲಿ ಸ್ಪಂದಿಸಲು ಸಿಬ್ಬಂದಿ ಕಷ್ಟಪಡುತ್ತಿದ್ದಾರೆ. ಜನರು ಆಸ್ಪತ್ರೆಗೆ ಬಂದಾಗ ಒಂದೆರಡು ದಿನ ವೈದ್ಯರು ಸಿಗದಿದದ್ದರೂ, ‘ಯಾವಾಗ ನೋಡಿದರೂ ಆಸ್ಪತ್ರೆಯಲ್ಲಿ ವೈದ್ಯರು ಇರುವುದಿಲ್ಲ’ ಎನ್ನುವ ಆರೋಪ ಹೊರಿಸಲಾಗುತ್ತದೆ. ಇಲಾಖೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಹುದ್ದೆಗಳು ಖಾಲಿ ಇರುವುದರಿಂದ ಉಂಟಾಗಿರುವ ಸಮಸ್ಯೆ ಬಗ್ಗೆ ಕಳೆದ ಬಾರಿಯ ದ.ಕ.ಜಿಪಂ ಸಭೆಯಲ್ಲಿ ಚರ್ಚೆಯಾಗಿತ್ತು.

ಇಲಾಖೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇರುವುದು ನಿಜ. ಸಮಸ್ಯೆ ಬಗೆಹರಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಯುತ್ತಿದೆ. ದ.ಕ.ಜಿಲ್ಲೆಯ ರೈತರ ಕಷ್ಟಗಳಿಗೆ ಕೆಎಂಎಫ್ ವೈದ್ಯಾಧಿಕಾರಿಗಳು ಹಾಗೂ ಇತರ ಸಿಬ್ಬಂದಿಯೂ ಸ್ಪಂದಿಸುತ್ತಿದ್ದಾರೆ. ಡಾ.ಪ್ರಸನ್ನ ಕುಮಾರ್ ಟಿ.ಜಿ. ಉಪ ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಮಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net