ಸಿಬ್ಬಂದಿ ಸೇವೆ ಸ್ಮರಣೀಯ

Oplus_131072
Oplus_131072
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಬೈಪಾಸ್​ ಆರಂಭವಾದ ದಿನದಿಂದ ಈವರೆಗೂ ಟೋಲ್​ನಲ್ಲಿ ನೂರಾರು ಸಿಬ್ಬಂದಿ ಸೇವೆ ಸಲ್ಲಿಸಿದ್ದಾರೆ. ಇದೀಗ ಟೋಲ್​ ಗುತ್ತಿಗೆ ಮುಗಿದ ಹಿನ್ನೆಲೆಯಲ್ಲಿ ಅವರು ಸೇವೆಯಿಂದ ತೆರವಾಗುತ್ತಿದ್ದು, ಅವರ ಸೇವೆ ಸ್ಮರಿಸುತ್ತಿರುವ ಈ ಕಾರ್ಯ ಶ್ಲಾಘನೀಯ ಎಂದು ಪಾಲಿಕೆ ಸದಸ್ಯೆ ಚಂದ್ರಕಲಾ ಕೊಟಬಾಗಿ ಹೇಳಿದರು.
ನಗರದ ನರೇಂದ್ರದಿಂದ ಗಬ್ಬೂರವರೆಗಿನ ಬೈಪಾಸ್​ ರಸ್ತೆಯ ಗುತ್ತಿಗೆ ಅವಧಿ ಮುಗಿದ ಹಿನ್ನೆಲೆಯಲ್ಲಿ ಇಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿದ ಸಿಬ್ಬಂದಿಗೆ ಕೆಲಗೇರಿ ಬಳಿಯ ಗುಡ್ಡದಮಠ ಕಲ್ಯಾಣಮಂಟಪದಲ್ಲಿ ಭಾನುವಾರ ಸ್ಥಳಿಯರು ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಿಬ್ಬಂದಿ ಶಿವಪ್ರಕಾಶ ಮಾತನಾಡಿ, ಹು-ಧಾ ಮಧ್ಯೆ ವಾಹನ ದಟ್ಟಣೆ, ಅಪಘಾತಗಳ ಹಿನ್ನೆಲೆಯಲ್ಲಿ 1998ರಲ್ಲಿ ಬೈಪಾಸ್​ ಕಾಮಗಾರಿ ಆರಂಭಿಸಿ, 2000ನೇ ಇಸ್ವಿಯಲ್ಲಿ ಸಂಚಾರ ಶುರು ಮಾಡಲಾಗಿತ್ತು. ಈ ರಸ್ತೆಯಲ್ಲಿನ ಎಲ್ಲ ಗ್ರಾಮಗಳ ಜನರು, ಅದರಲ್ಲೂ ಕೆಲಗೇರಿ ಗ್ರಾಮಸ್ಥರು ಟೋಲ್​ ಸಿಬ್ಬಂದಿಗೆ ಉತ್ತಮ ಸಹಕಾರ ನೀಡಿದ್ದಾರೆ. ಅನೇಕ ಬಾರಿ ವಾಹನ ಚಾಲಕರು ಹಾಗೂ ಇತರೆ ಕಾರಣಗಳಿಂದ ಸಮಸ್ಯೆ ಉಂಟಾದಾಗ ಗ್ರಾಮಸ್ಥರು ನಮ್ಮ ಪರವಾಗಿ ನಿಂತು ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದಾರೆ. ಇದೀಗ ನಮ್ಮ ಸೇವೆ ಮೆಚ್ಚಿ ಬೀಳ್ಕೊಡುಗೆ ಮಾಡುತ್ತಿರುವುದು ಸಂತಸ ತಂದಿದೆ ಎಂದರು.
80ಕ್ಕೂ ಹೆಚ್ಚು ಸಿಬ್ಬಂದಿಗೆ ಸನ್ಮಾನಿಸಲಾಯಿತು. ಗ್ರಾಮದ ಹಿರಿಯರಾದ ಗುರುಪಾದಯ್ಯ ಗುಡ್ಡದಮಠ, ಸಂಗಯ್ಯ ಗುಡ್ಡದಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರುದ್ರಗೌಡ ಪಾಟೀಲ, ಕರಿಯಬಸಯ್ಯ ಕಡ್ಲಿ, ನಾಗೇಶ ತಲವಾಯಿ, ಶಾಂತಯ್ಯ ಹಿರೇಮಠ, ಅಜ್ಜಯ್ಯ ಗುಡ್ಡದಮಠ, ಶಿವಯ್ಯ ಚಿಕ್ಕಮಠ, ಚನಬಸಯ್ಯ ಹೊಂಗಲಮಠ, ಶಂಕರ ಕೊಟ್ರಿ, ಇತರರು ಇದ್ದರು.
ಮಹಾಂತೇಶ ಹುಬ್ಬಳ್ಳಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net