

ಲಿಂಗಸುಗೂರು: ಕೆಕೆಆರ್‌ಡಿಬಿ ಮಾಕ್ರೋ ಯೋಜನೆಯಡಿ ಒಂದು ಕೋಟಿ ರೂ. ವೆಚ್ಚದಲ್ಲಿ ಖರೀದಿಸಲಾದ ಸಂಚಾರಿ ಆರೋಗ್ಯ ಘಟಕ ವಾಹನಕ್ಕೆ ಸಿಬ್ಬಂದಿ ನೇಮಕ ಮಾಡಲಾಗುವುದು ಎಂದು ಆರೋಗ್ಯ ಇಲಾಖೆ ಕಲಬುರಗಿ ವಿಭಾಗೀಯ ಸಹಾಯಕ ನಿರ್ದೇಶಕ ಡಾ.ಎ.ಎಸ್. ರುದ್ರವಾಡಿ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳ್ಳಿಗಳ ಜನರಿಗೆ ಆರೋಗ್ಯ ಸೇವೆ ಒದಗಿಸಲು ಈ ವಾಹನ ಅನುಕೂಲವಾಗಲಿದೆ. ಇದರಲ್ಲಿ ಸುಸಜ್ಜಿತ ಲ್ಯಾಬ್, ರಕ್ತ ಪರೀಕ್ಷೆ, ಮಧುಮೇಹ ಸೇರಿದಂತೆ ಅಗತ್ಯ ಸೌಲಭ್ಯವಿರಲಿವೆ. ವೈದ್ಯರು, ಲ್ಯಾಬ್ ಟೆಕ್ನಿಷಿಯನ್, ಸ್ಟಾಫ್ ನರ್ಸ್ ಸೇರಿದಂತೆ ಸಿಬ್ಬಂದಿ ವಿವರ ಹಾಗೂ ಔಷಧಗಳ ಪಟ್ಟಿ ಮಾಡಿ ಪ್ರಸ್ತಾವನೆ ಸಲ್ಲಿಸುವಂತೆ ಟಿಎಚ್‌ಒಗೆ ಸೂಚಿಸಲಾಗಿದೆ.
ಲಿಂಗಸುಗೂರು ತಾಲೂಕಿನಲ್ಲಿ ನಕಲಿ ವೈದ್ಯರು, ನಕಲಿ ರಕ್ತ ಪರೀಕ್ಷಾ ಕೇಂದ್ರಗಳ ಹಾವಳಿ ಜಾಸ್ತಿಯಾಗಿದ್ದು, ಹಳ್ಳಿಗಳಲ್ಲಿ ಸಂಚರಿಸಿ ನಕಲಿ ವೈದ್ಯರು, ಕ್ಲಿನಿಕ್ ಹಾವಳಿಗೆ ಕಡಿವಾಣ ಹಾಕಲು ಸೂಚಿಸಲಾಗಿದೆ. ಆಂಬುಲೆನ್ಸ ಚಾಲಕರು, ನಕಲಿ ಆಸ್ಪತ್ರೆಗಳ ದೂರುಗಳು ಬಂದಿದ್ದು ಕ್ರಮ ಕೈಗೊಳ್ಳಲಾಗುವುದು ಎಂದು ಡಾ.ರುದ್ರವಾಡಿ ತಿಳಿಸಿದರು.
ಟಿಎಚ್‌ಒ ಅಮರೇಶ ಪಾಟೀಲ್, ಮುಖ್ಯ ವೈದ್ಯಾಧಿಕಾರಿ ರುದ್ರಗೌಡ ಪಾಟೀಲ ಇದ್ದರು.