ಅಭಿಯಾನದಲ್ಲಿ ಸಿಬ್ಬಂದಿ ಪಾಲ್ಗೊಳ್ಳುವಿಕೆ ಕಡ್ಡಾಯ: ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಸೂಚನೆ

Ksd_staff
Published on

ಕಾಸರಗೋಡು: ಮಾಲಿನ್ಯಮುಕ್ತ ನವಕೇರಳ ಜನಾಂದೋಲನ ಅಭಿಯಾನದ ಅಂಗವಾಗಿ ಅ.2ರಂದು ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ನಡೆಯಲಿರುವ ಸ್ವಚ್ಛತೆ ಕಾರ್ಯದಲ್ಲಿ ಸಿವಿಲ್ ಸ್ಟೇಷನ್‌ನ ಎಲ್ಲ ಸಿಬ್ಬಂದಿ ಪಾಲ್ಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ನಿರ್ದೇಶನ ನೀಡಿದರು.
ಕಾರ್ಯಕ್ರಮದ ಯಶಸ್ವಿಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಿವಿಲ್ ಸ್ಟೇಷನ್ ಕ್ಯಾಂಟೀನ್‌ನಿಂದ ಪ್ಲಾಸ್ಟಿಕ್ ಚೀಲಗಳಲ್ಲಿ ಆಹಾರ ಸಾಮಗ್ರಿ ಪೂರೈಸುವುದನ್ನು ಸ್ಥಗಿತಗೊಳಿಸಲಾಗುವುದು. ಪ್ರತಿ ಕಚೇರಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಿಲೇವಾರಿ ನಡೆಸುವ ಹೊಣೆಗಾರಿಕೆ ಆಯಾ ಇಲಾಖೆಯವರಿಗೆ ಸೇರಿದ್ದು. ಆಹಾರ ತ್ಯಾಜ್ಯ, ಇತರ ಸಾವಯವ ಮತ್ತು ಅಜೈವಿಕ ತ್ಯಾಜ್ಯವನ್ನು ಹೆಚ್ಚು ಕಾಳಜಿ ವಹಿಸಿ ವಿಂಗಡಿಸಿ ನಿರ್ವಹಿಸಬೇಕು. ಸಿಹಿ ವಿತರಿಸುವಾಗ ಪೇಪರ್ ಬಾಕ್ಸ್ ಬಳಸಬಾರದು ಎಂದರು.

ಅಕ್ಟೋಬರ್ 2ರಂದು ಜಿಲ್ಲಾಮಟ್ಟದ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಲ್ಲಾ ಪಂಚಾಯಿತಿ ವಠಾರವನ್ನು ಜಿಪಂ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸ್ವಚ್ಛಗೊಳಿಸಲಾಗುವುದು. ಚಂದ್ರಗಿರಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜಿಪಂನ 64 ಶಾಲೆಗಳ ಹಸಿರು ಶಾಲೆಯ ಘೋಷಣೆಯೂ ನಡೆಯಲಿದೆ. ಜಿಲ್ಲೆಯ ಎಲ್ಲ 777 ವಾರ್ಡ್‌ಗಳನ್ನೂ ಕಸಮುಕ್ತಗೊಳಿಸಿ, ಇದಕ್ಕೆ ಸಂಬಂಧಿಸಿದ ಯೋಜನೆಗಳನ್ನು ಉದ್ಘಾಟಿಸಲಾಗುವುದು ಎಂದರು.

ನವಕೇರಳ ಕ್ರಿಯಾ ಯೋಜನೆಯ ಜಿಲ್ಲಾ ಸಂಯೋಜಕ ಕೆ.ಬಾಲಕೃಷ್ಣ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸ್ಥಳೀಯಾಡಳಿತ ಇಲಾಖೆಯ ಸಹಾಯಕ ನಿರ್ದೇಶಕ ಜೈಸನ್ ಮ್ಯಾಥ್ಯೂ ಹಸಿರು ಕಚೇರಿಯ ಮಾನದಂಡಗಳನ್ನು ವಿವರಿಸಿದರು. ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net