

ಪಿರಿಯಾಪಟ್ಟಣ: ಸಕಾಲದಲ್ಲಿ ಅಂಚೆ ಮತ ಪತ್ರಗಳನ್ನುಒದಗಿಸದ ಚುನಾವಣಾ ಅಧಿಕಾರಿಗಳ ನಡೆಯನ್ನು ಖಂಡಿಸಿ ಚುನಾವಣಾ ತರಬೇತಿಗೆ ಹಾಜರಾಗಿದ್ದ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪುಷ್ಪ ವಿದ್ಯಾಸಂಸ್ಥೆಯಲ್ಲಿ ಶನಿವಾರ ಪಿರಿಯಾಪಟ್ಟಣ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುವ ಚುನಾವಣಾ ಸಿಬ್ಬಂದಿಗೆ ತರಬೇತಿ ನೀಡುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ತರಬೇತಿ ಮುಗಿದ ನಂತರ ಅಂಚೆ ಮತಪತ್ರಗಳನ್ನು ಒದಗಿಸಬೇಕಿದ್ದ ತಾಲೂಕು ಆಡಳಿತದ ಚುನಾವಣಾ ಉಸ್ತುವಾರಿ ಅಧಿಕಾರಿಗಳು, ಅಂಚೆ ಮತ ಪತ್ರಗಳನ್ನು ತಲುಪಿಸಿದ ಕಾರಣ ಆಕ್ರೋಶಗೊಂಡ ಸಿಬ್ಬಂದಿ ನಾವು ಕೊಳ್ಳೇಗಾಲ ಸೇರಿದಂತೆ ದೂರದ ಊರುಗಳಿಂದ ಬಂದಿದ್ದೇವೆ. ನಮಗೆ ಅಂಚೆ ಮತಪತ್ರಗಳನ್ನು ನೀಡದೆ ಸತಾಯಿಸುತ್ತಿದ್ದೀರಿ, ನಾಳೆ ನಾಡಿದ್ದು ಬನ್ನಿ ಎಂದು ಹೇಳುತ್ತಿರುವುದು ಸರಿಯಲ್ಲ. ಮತ್ತೊಮ್ಮೆ ನಾವು ಇಲ್ಲಿಗೆ ಬರಲು ಸಾಧ್ಯವಿಲ್ಲ. ನಮ್ಮ ಮತಗಳನ್ನು ಬೇರೆಯವರು ಚಲಾಯಿಸುವುದಿಲ್ಲ ಎಂಬ ಗ್ಯಾರೆಂಟಿ ಏನು ಎಂದು ಪ್ರಶ್ನಿಸಿದರು.
ಇದಕ್ಕೆ ಸಮಜಾಯಿಸಿ ನೀಡಿದ ಸಹಾಯಕ ಚುನಾವಣಾ ಅಧಿಕಾರಿ ಜಿ.ಡಿ.ಶೇಖರ್, ಮತಪತ್ರಗಳನ್ನು ಕ್ರಮಬದ್ಧವಾಗಿ ನಮಗೆ ತಲುಪಿಸಬೇಕಿತ್ತು. ಅವುಗಳು ಸಕಾಲದಲ್ಲಿ ಇಲ್ಲಿಗೆ ತಲುಪಿಲ್ಲ. ನೀವು ಯಾವ ತಾಲೂಕು ಕೇಂದ್ರದಲ್ಲಿ ಮತ ಚಲಾಯಿಸುತ್ತೀರಿ ಎಂದು ನಮಗೆ ಲಿಖಿತವಾಗಿ ಬರೆದುಕೊಟ್ಟರೆ, ನಮ್ಮ ಸಿಬ್ಬಂದಿಯನ್ನು ಅಲ್ಲಿಗೆ ಕಳುಹಿಸಿ ಅಂಚೆ ಮತಪತ್ರಗಳನ್ನು ತಲುಪಿಸಲಾಗುವುದು ಎಂದು ತಿಳಿಸಿ ಸಿಬ್ಬಂದಿಯನ್ನು ಸಮಾಧಾನಪಡಿಸಿದರು.