

ಹುನಗುಂದ : ಪಟ್ಟಣದ ತಾಲೂಕು ಕ್ರೀಡಾಂಗಣದ ಅವ್ಯವಸ್ಥೆಯ ಬಗ್ಗೆ ದೂರು ದಾಖಲಾದ ಹಿನ್ನಲೆಯಲ್ಲಿ ಶನಿವಾರ ಲೋಕಾಯುಕ್ತ ಜಿಲ್ಲಾ ಪೊಲೀಸ್ ಇನ್‌ಸ್ಪೆಕ್ಟರ್ ಬಸವರಾಜ ಮೂಕರ್ತಿಹಾಳ ನೇತೃತ್ವದ ತಂಡ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲಿಸಿತು .
ಕ್ರೀಡಾಂಗಣದ ಮುಖ್ಯದ್ವಾರದಲ್ಲಿ ಕಂಪೌಂಡ್‌ಗೆ ಹೊಂದಿಕೊಂಡಿರುವ ಚರಂಡಿಗೆ ಖಾಸಗಿ ವ್ಯಕ್ತಿಗಳು ತಮ್ಮ ಮನೆಯ ಕೊಳಚೆ ನೀರನ್ನು ಪೈಪ್ ಮೂಲಕ ಕ್ರೀಡಾಂಗಣದ ಚರಂಡಿಗೆ ನೀರು ಹರಿಸುತ್ತಿದ್ದಾರೆ. ಹೀಗಾಗಿ ಚರಂಡಿ ದುರ್ನಾತ ಬೀರುತ್ತಿದೆ. ಕ್ರೀಡಾಂಗಣದ ಸ್ವಚ್ಛತೆ ಸಮರ್ಪಕವಾಗಿಲ್ಲ. ಕ್ರೀಡಾಂಗಣದಲ್ಲಿ ಅಳವಡಿಸಿರುವ ವ್ಯಾಯಾಮದ ಪರಿಕರಗಳು ಅವ್ಯವಸ್ಥೆಯಿಂದ ಕೂಡಿವೆ.
ಕ್ರೀಡಾಂಗಣದ ಮೂಲೆಯೊಂದರಲ್ಲಿ ದೊಡ್ಡ ಪೈಪ್‌ಗಳನ್ನು ಗುಂಪು ಗುಂಪಾಗಿ ಹಾಕಲಾಗಿದೆ. ಇದರಿಂದ ಕ್ರೀಡಾಪಟುಗಳಿಗೆ ಮತ್ತು ವಾಯುವಿಹಾರಿಗಳಿಗೆ ತೊಂದರೆಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ತೆರವುಗೊಳಿಸಬೇಕು. ಜತಗೆ ಕ್ರೀಡಾಂಗಣವನ್ನು ಸ್ವಚ್ಛವಾಗಿಡಬೇಕು ಎಂದು ಲೋಕಾಯುಕ್ತ ಜಿಲ್ಲಾ ಪೊಲೀಸ್ ಇನ್‌ಸ್ಪೆಕ್ಟರ್ ಬಸವರಾಜ ಮೂಕರ್ತಿಹಾಳ ಹೇಳಿದರು.
ನಾಗಪ್ಪ ಪೂಜಾರಿ, ಹನಮಂತ ಹಲಗತ್ತಿ, ಭೀಮನಗೌಡ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.