ಕೊಡಗು ಜಿಲ್ಲೆಗೆ ಬೇಕು ಸುಸಜ್ಜಿತ ಕ್ರೀಡಾಂಗಣ

stadium
Published on

ಮಡಿಕೇರಿ:

ಬೇಸಿಗೆ ಶುರುವಾಗುತ್ತಿದ್ದಂತೆಯೇ ಕೊಡಗಿನಲ್ಲಿ ಕ್ರೀಡಾಕೂಟಗಳ ಸುಗ್ಗಿ ಆರಂಭವಾಗುತ್ತದೆ. ಜಿಲ್ಲಾ ಕೇಂದ್ರದಿAದ ಆರಂಭವಾಗಿ ಗ್ರಾಮೀಣ ಮಟ್ಟದ ತನಕವೂ ಒಂದಿಲ್ಲೊAದು ಕ್ರೀಡಾಕೂಟಗಳು ಮಳೆಗಾಲ ಕಾಲಿಡುವ ತನಕ ನಡೆಯುತ್ತಲೇ ಇರುತ್ತದೆ. ಕೊಡವ ಕಪ್, ಗೌಡ ಕಪ್, ಮುಸ್ಲಿಂ ಕಪ್, ಹಿಂದೂ ಕಪ್, ಐರಿ ಕಪ್, ಅರಮನೆ ಪಾಲೆ ಕಪ್...ಹೀಗೆ ಪ್ರತಿಯೊಂದು ಜನಾಂಗದವರು ತಮ್ಮ ತಮ್ಮ ಸಮುದಾಯದವರನ್ನು ಒಗ್ಗೂಡಿಸಿ ಬೃಹತ್ ಕ್ರೀಡಾಕೂಟಗಳನ್ನು ಆಯೋಜಿಸುತ್ತವೆ. ದೊಡ್ಡ ದೊಡ್ಡ ಸಮುದಾಯಗಳ ಕ್ರೀಡಾಕೂಟದ ಬಜೆಟ್ ಕೋಟಿ ರೂ. ದಾಟುತ್ತದೆ. ಆದರೆ, ಕ್ರೀಡಾಕೂಟ ಆಯೋಜನೆಗೆ ಸುಸಜ್ಜಿತ ಕ್ರೀಡಾಂಗಣಗಳೇ ಜಿಲ್ಲೆಯಲ್ಲಿ ಇಲ್ಲ.

ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಪ್ರತಿ ವರ್ಷವೂ ಒಂದೊAದು ಊರಿನಲ್ಲಿ ನಡೆಯುತ್ತದೆ. ಈ ಸಂದರ್ಭ ಕ್ರಿಡಾಂಗಣ ಸಜ್ಜುಗೊಳಿಸಲು, ಗ್ಯಾಲರಿ ನಿರ್ಮಾಣಕ್ಕೆ ದೊಡ್ಡ ಮೊತ್ತವನ್ನು ವ್ಯಯಿಸಬೇಕಾದ ಅನಿವಾರ್ಯತೆ ಸಂಘಟಕರದ್ದು. ಎಲ್ಲಾ ಕ್ರೀಡಾಕೂಟಗಳ ಸಂಘಟಕರದ್ದೂ ಇದೇ ಪರಿಸ್ಥಿತಿ. ಕನಿಷ್ಠ ಹೋಬಳಿಗೆ ಒಂದಾದರೂ ಸುಸಜ್ಜಿತ ಕ್ರೀಡಾಂಗಣ ಇದ್ದರೆ ಈ ಸಮಸ್ಯೆ ತಪ್ಪುತ್ತದೆ ಎನ್ನುತ್ತಾರೆ ಕ್ರೀಡಾ ಸಂಘಟಕರು.

ಜಿಲ್ಲೆಯಲ್ಲಿ ಕೇವಲ ಮೂರು ಟರ್ಫ್ ಮೈದಾನಗಳಿವೆ. ಮಡಿಕೇರಿ, ಸೋಮವಾರಪೇಟೆ ಹಾಗೂ ಪೊನ್ನಂಪೇಟೆಯಲ್ಲಿರುವ ಈ ಮೈದಾನಗಳು ಭಾರತೀಯ ಕ್ರೀಡಾ ಪ್ರಾಧಿಕಾರ ಹಾಗೂ ಕ್ರೀಡಾ ಇಲಾಖೆಯ ನಿಯಂತ್ರಣದಲ್ಲಿದೆ. ಇದನ್ನು ಹೊರತುಪಡಿಸಿ ಇಂಥ ಉತ್ತಮ ಮೈದಾನಗಳೇ ಜಿಲ್ಲೆಯಲ್ಲಿ ಇಲ್ಲ. ತಾಲೂಕಿಗೆ ಒಂದು ಕ್ರೀಡಾಂಗಣ ಎನ್ನುವ ಪ್ರಸ್ತಾವನೆ ರಾಜ್ಯ ಸರ್ಕಾರದ ಮುಂದೆ ಇದ್ದರೂ ಜಿಲ್ಲೆಯಲ್ಲಿ ಜಾಗದ ಕೊರತೆ ಇದೆ ಎನ್ನುತ್ತಾರೆ ಅಧಿಕಾರಿಗಳು. ಈ ಎಲ್ಲಾ ವಿಷಯಗಳ ಬಗ್ಗೆ ವಿಜಯವಾಣಿ ಓದುಗರು ಲೌಡ್ ಸ್ಪೀಕರ್‌ನಲ್ಲಿ ಅಭಿಪ್ರಾಯ ಹಂಚಿಕೊAಡಿದ್ದಾರೆ.

ಕೊಡಗು ಕ್ರೀಡೆಯ ತವರರೂರು. ಇಲ್ಲಿ ಪ್ರತಿ ವರ್ಷ ವಿವಿಧ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಕೂಟಗಳು ತಪ್ಪದೇ ನಡೆಯುತ್ತದೆ. ಆದರೆ ಕ್ರೀಡಾಕೂಟ ನಡೆಸಲು ಸರ್ಕಾರದಿಂದ ಅಥವಾ ದಾನಿಗಳಿಂದ ಸಂಗ್ರಹಣೆ ಮಾಡುವ ಹಣ ಕ್ರೀಡಾಂಗಣ ಸಜ್ಜುಗೊಳಿಸಲು ವಿನಿಯೋಗ ಮಾಡುವಂತಾಗಿದೆ. ಸಂಬAಧ ಪಟ್ಟ ಇಲಾಖೆ ಈ ಬಗ್ಗೆ ಗಂಭೀರವಾಗಿ ತೆಗೆದುಕೊಂಡು ಅಲ್ಲಲ್ಲಿ ಹೋಬಳಿ ಕೇಂದ್ರದಲ್ಲಿ ಒಂದು ಉತ್ತಮ ಕ್ರೀಡಾಂಗಣ ನಿರ್ಮಿಸಲು ಮುಂದಾಗಬೇಕಿದೆ.

ಅಭಿಲಾಶ್, ಮುಖ್ಯ ಶಿಕ್ಷಕ, ಎಸ್.ಕೆ.ಎಸ್. ವಿದ್ಯಾ ಸಂಸ್ಥೆ, ಕಲ್ಲುಮಠ

ಕೊಡಗಿನಲ್ಲಿ ಪ್ರತಿ ಜನಾಂಗದವರು, ಪ್ರತಿಯೊಂದು ಸಂಘಟನೆಗಳು ಪ್ರತಿ ವರ್ಷ ಕ್ರೀಡಾಕೂಟ ಏರ್ಪಡಿಸುತ್ತಾರೆ. ಪ್ರತಿ ಕ್ರೀಡಾಕೂಟದಲ್ಲೂ ಸಾವಿರಾರು ಸಂಖ್ಯೆಯ ಕ್ರೀಡಾ ಪ್ರೇಮಿಗಳು ಉತ್ಸಾಹದಿಂದ ಪಾಲ್ಗೊಂಡು ಕ್ರೀಡಾಕೂಟ ಯಶಸ್ವಿಗೊಳಿಸುತ್ತಿದ್ದಾರೆ. ಆದರೆ ಕ್ರೀಡೆಗೆ ಬೇಕಾದ ಮೈದಾನದ ಕೊರತೆ ಎಲ್ಲಾ ಭಾಗದಲ್ಲೂ ಇದೆ. ಒಂದು ಕ್ರೀಡಾಕೂಟ ನಡೆಸಲು 6 ತಿಂಗಳಿನಿAದ ಮೈದಾನ ಸಜ್ಜುಗೊಳಿಸುವ ಕೆಲಸ ಮಾಡಬೇಕಾದ ಅನಿವಾರ್ಯತೆ ಸಂಘಟಕರದ್ದು. ಇದು ತಪ್ಪಬೇಕಿದೆ.

ದಿವ್ಯಾ, ಗ್ರಂಥ ಪಾಲಕಿ, ದುಂಡಳ್ಳಿ

ಕೊಡಗಿನಲ್ಲಿ ಮಳೆಗಾಲದಲ್ಲಿ ಧಾರಾಕಾರ ಮಳೆ ಸುರಿಯುತ್ತದೆ. ವರ್ಷದ 4 ತಿಂಗಳು ಗುಂಡಿ ಬಿದ್ದ ಆಟದ ಮೈದಾನಕ್ಕೆ ಇಳಿಯುವುದು ಕಷ್ಟವಾಗುತ್ತದೆೆ. ಕ್ರೀಡೆಗೆ ಗುಣಮಟ್ಟದ ಮೈದಾನ ಬೇಕೇ ಬೇಕು. ಸದ್ಯಕ್ಕೆ ತಾಲೂಕಿಗೆ ಒಂದು ಸುಸಜ್ಜಿತ ಕ್ರೀಡಾಂಗಣ ನಿರ್ಮಾಣವಾದರೆ ಕ್ರೀಡಾಪಟುಗಳಿಗೆ ಉಪಯೋಗ ಆಗಲಿದೆ.

ದುರೀಣ್ ಬಿದ್ದಪ್ಪ, ಕಾಫಿ ಬೆಳಗಾರ, ತಾಕೇರಿ ಗ್ರಾಮ

ಕೊಡಗು ಜಿಲ್ಲೆ ಮೂಲತಃ ಕ್ರೀಡೆಗಳ ತವರು. ಈಗ ಹಲವು ವರ್ಷಗಳಿಂದ ಇಲ್ಲಿ ಬೇರೆ ಬೇರೆ ಸಮುದಾಯಗಳ ಕುಟುಂಬವಾರು ಕ್ರೀಡಾಕೂಟಗಳು, ಗ್ರಾಮವಾರು ಕ್ರೀಡಾಕೂಟಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ಉತ್ತಮ ಕ್ರೀಡಾಂಗಣಗಳು ಇಲ್ಲ. ಇರುವ ಕ್ರೀಡಾಂಗಣಗಳು ಕೆಲವೊಮ್ಮೆ ಅನ್ಯ ಉದ್ದೇಶಕ್ಕೆ ಬಳಕೆಯಾಗುವುದೂ ಇದೆ. ಜಿಲ್ಲೆಯ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿ, ನಾಡಿಗೆ ಕೀರ್ತಿ ತರಬೇಕಾದರೆ ಕನಿಷ್ಠ ಪಕ್ಷ ತಾಲೂಕಿಗೆ ಒಂದಾದರೂ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಆಗಲಿ.

ತುಂತಜ್ಜೆ ಗಣೇಶ್, ಬಿಳಿಗೇರಿ ಗ್ರಾಮ

ಜಿಲ್ಲೆ ಹಲವು ಒಲಿಂಪಿಯನ್‌ಗಳನ್ನು ನೀಡಿದ್ದರೂ ಕ್ರೀಡಾಂಗಣಗಳು ಸುಧಾರಿಸಿಲ್ಲ. ವಿರಾಜಪೇಟೆ ಕ್ಷೇತ್ರದಲ್ಲಿ ಕ್ರೀಡಾಂಗಣಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ಶಾಸಕರು ತಿಳಿಸಿದ್ದಾರೆ. ಇದು ಭರವಸೆಯಾಗಿಯೇ ಉಳಿಯಬಾರದು. ಎಲ್ಲಾ ಕಡೆಯಲ್ಲೂ ಉತ್ತಮ ಗುಣಮಟ್ಟದ ಕ್ರೀಡಾಂಗಣಗಳು ಇದ್ದರೆ ಕ್ರೀಡಾಪ್ರತಿಭೆಗಳು ಬೆಳಕಿಗೆ ಬರಲು ಅವಕಾಶ ಆಗುತ್ತದೆ.

ಮಾಳೆಟಿರ ಶ್ರೀನಿವಾಸ್, ಗೌರವ ಕಾರ್ಯದರ್ಶಿ, ಕೊಡವ ಹಾಕಿ ಅಕಾಡೆಮಿ

ಕ್ರೀಡಾಪಟುಗಳ ಪ್ರತಿಭೆ ಬೆಳಕಿಗೆ ಬರಲು ಸುಸಜ್ಜಿತ ಕ್ರೀಡಾಂಗಣಗಳ ಅಗತ್ಯ ಹೆಚ್ಚು ಇದೆ. ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಉತ್ತಮ ಕ್ರೀಡಾಪಟುಗಳು ಇದ್ದಾರೆ. ಆದರೆ ಇವರಿಗೆ ಅಭ್ಯಾಸ ಮಾಡಲು ಮೈದಾನಗಳ ಕೊರತೆ ಕಾಡುತ್ತಿದೆ. ಕ್ರೀಡಾ ಜಿಲ್ಲೆ ಕೊಡಗಿನಲ್ಲಿ ಕನಿಷ್ಠ ತಾಲೂಕಿಗೆ ಒಂದಾದರೂ ಉತ್ತಮ ಗುಣಮಟ್ಟದ ಗುಣಮಟ್ಟದ ಕ್ರೀಡಾಂಗಣ ಬೇಕು.

ಡಾ. ಸದಾಶಿವಯ್ಯ ಎಸ್. ಪಲ್ಲೇದ್, ದೈಹಿಕ ಶಿಕ್ಷಣ ಶಿಕ್ಷಕ, ಕುಶಾಲನಗರ

ಕೊಡಗು ಜಿಲ್ಲೆಗೂ ಕ್ರೀಡೆಗೂ ಅವಿನಾಭವ ಸಂಬAಧ. ಪ್ರತಿ ಕುಟುಂಬದಲ್ಲೂ ಕ್ರೀಡೆಗೆ ಪ್ರೋತ್ಸಹ ನೀಡುತ್ತಾರೆ. ಕ್ರೀಡೆಯಲ್ಲಿ ಸಾಧನೆ ಮಾಡಬೇಕಾದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸುಸಜ್ಜಿತ ಕ್ರೀಡಾಂಗಣ ತಾಲೂಕಿಗೆ ಒಂದಾದರೂ ಬೇಕಾಗಿದೆ. ಶಾಲಾ ಹಂತದಲ್ಲೇ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಸಿಗಬೇಕು. ಕ್ರೀಡಾಕೂಟಗಳಿಗೂ ಸುಸಜ್ಜಿತ ಕ್ರೀಡಾಂಗಣಗಳು ಇಲ್ಲ ಎಂಬುದೇ ದುರಂತ.

ಆಶಾ ಯೋಗೇಂದ್ರ, ಗೃಹಿಣಿ, ಸೋಮವಾರಪೇಟೆ.

ಜಿಲ್ಲೆಯಲ್ಲಿ ವಿವಿಧ ಸಮುದಾಯಗಳು, ಸಂಘ ಸಂಸ್ಥೆಗಳು ವಿವಿಧ ರೀತಿಯ ಕ್ರೀಡಾಕೂಟಗಳನ್ನು ಆಯೋಜಿಸುತ್ತಿವೆ. ಜಿಲ್ಲಾ ಮಟ್ಟದಲ್ಲಿ ತಾಲೂಕು ಮಟ್ಟದಲ್ಲಿ ಯಾವುದೇ ಕ್ರೀಡಾಂಗಣ ಇಲ್ಲದ ಕಾರಣ ಪ್ರತಿಯೊಂದು ಕ್ರೀಡೆಯ ಆಯೋಜನೆಯ ಸಂದರ್ಭ ಕ್ರೀಡಾಕೂಟಕ್ಕೆಂದು ಸಂಗ್ರಹಿಸಿದ ಹಣದ ದೊಡ್ಡ ಮೊತ್ತವನ್ನು ಕ್ರೀಡಾಂಗಣ ಸಿದ್ಧಗೊಳಿಸಲು, ಆಸನ ವ್ಯವಸ್ಥೆಗಾಗಿ ವ್ಯಯ ಮಾಡಬೇಕಾಗಿದೆ. ಇದರಿಂದಾಗಿ ಪ್ರತಿ ವರ್ಷ ಕ್ರೀಡಾಕೂಟ ನಡೆಸುವುದು ಸವಾಲಿನ ಕೆಲಸವಾಗಿದೆ.

ರಘಪತಿ, ಕ್ರೀಡಾ ಆಯೋಜಕ, ವಿರಾಜಪೇಟೆ

ತಾಲೂಕಿಗೊಂದು ಕ್ರೀಡಾಂಗಣ ಎನ್ನುವ ಸರ್ಕಾರದ ಯೋಜನೆಗೆ ಕೊಡಗಿನಲ್ಲಿ ಜಾಗದ ಕೊರತೆ ಇದೆ. ಕುಶಾಲನಗರದಲ್ಲಿ ಕ್ರೀಡಾಂಗಣ ನಿರ್ಮಾಣ ಸಂಬAಧ ಅಲ್ಲಿನ ಪುರಸಭೆಯಿಂದ ಪ್ರಸ್ತಾವನೆ ಬಂದಿದೆ. ವಿರಾಜಪೇಟೆ ತಾಲೂಕಿನಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಆಸಕ್ತಿಯಿಂದ ಶಾಲಾ ಮೈದಾನಗಳನ್ನು ಉತ್ತಮ ಪಡಿಸುವ ಕೆಲಸ ನಡೆದಿದೆ. ಮಡಿಕೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ಇರುವ ಬಾಸ್ಕೆಟ್ ಬಾಲ್ ಮೈದಾನ ಮೇಲ್ದರ್ಜೆಗೆ ಏರಿಸಲು ಸಿದ್ಧತೆ ನಡೆಸಲಾಗಿದೆ.

ವಿ.ಟಿ. ವಿಸ್ಮಯಿ, ಉಪನಿರ್ದೇಶಕಿ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ, ಕೊಡಗು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net