ಎಸ್.ಟಿ ಕಾಲನಿ ರಸ್ತೆ ದುರವಸ್ಥೆ : ಪಡ್ಡಂಬೈಲು-ಕರ್ಲಪ್ಪಾಡಿ-ಕುಡೆಂಬಿ ಮಾರ್ಗಕ್ಕೆ ಸಿಗದ ಮುಕ್ತಿ : ಡಾಂಬರು ಕಂಡಿಲ್ಲ

road
ತೀರಾ ಹದಗೆಟ್ಟಿರುವ ಪಡ್ಡಂಬೈಲು-ಕರ್ಲಪ್ಪಾಡಿ- ಕುಡೆಂಬಿ ಎಸ್.ಟಿ ಕಾಲನಿ ರಸ್ತೆ.
Published on

ಸುಳ್ಯ: ತಾಲೂಕಿನ ಅಜ್ಜಾವರ ಗ್ರಾಮದ ಪಡ್ಡಂಬೈಲು-ಕರ್ಲಪ್ಪಾಡಿ-ಕುಡೆಂಬಿ ಎಸ್.ಟಿ ಕಾಲನಿಗೆ ತೆರಳುವ ರಸ್ತೆ ತೀರಾ ಕೆಟ್ಟಿದ್ದು, ಈ ಭಾಗದ ಪ್ರಯಾಣಿಕರು ನಿತ್ಯ ನರಕ ಯಾತನೆ ಅನುಭವಿಸಬೇಕಾಗಿದೆ.

ಮಳೆಗಾಲದಲ್ಲಿ ಈ ರಸ್ತೆಯಲ್ಲಿ ನಡೆದಾಡಲು ಕೂಡ ಕಷ್ಟಪಡುವಂತಾಗಿದೆ. ಸಾಮಾನು ಸರಂಜಾಮು ಸಾಗಿಸಲು ರಿಕ್ಷಾ ಅಥವಾ ತರ ವಾಹನ ಸವಾರರು ಬರಲು ನಿರಾಕರಿಸುವ ಕಾರಣ ಮಳೆಗಾಲ ಪೂರ್ತಿ ಇಲ್ಲಿನ ಜನರು ದಿನಸಿ ಸಾಮಗ್ರಿ ಮುಂಚಿತವಾಗಿಯೇ ಶೇಖರಿಸಿಡಬೇಕಾದ ಅನಿವಾರ್ಯತೆ ಇದೆ.

ಒಂದೊಮ್ಮೆ ಈ ರಸ್ತೆಯ ಅಭಿವೃದ್ಧಿಗಾಗಿ ಅನುದಾನ ಬಂದಿತ್ತಾದರೋ ಯಾವುದೋ ನೆಪವೊಡ್ಡಿ ಅದನ್ನು ಬೇರೆಡೆಗೆ ವರ್ಗಾಯಿಸಲಾಗಿದೆ. ದಿನವೂ ನೂರಾರು ಜನರು ಈ ರಸ್ತೆಯಲ್ಲಿ ಓಡಾಡುತ್ತಾರೆ. ಈ ರಸ್ತೆ ಒಮ್ಮೆಯೂ ಡಾಂಬರೀಕರಣ ಕಾಣದಿರುವುದು ವಿಷಾದನೀಯ.

ಇಲ್ಲಿನ ಕೆಲ ಮನೆಗಳು ದ್ವೀಪದ ರೀತಿಯಲ್ಲಿದ್ದು ಯಾವುದೇ ತುರ್ತು ಸಂದರ್ಭ ಬಂದರೂ ತೆರಳುವುದು ಅಸಾಧ್ಯ ಎಂಬಂತಿದೆ. ಇಲ್ಲಿನವರ ನಿತ್ಯ ದೂರಿನ ಹಿನ್ನೆಲೆೆಯಲ್ಲಿ ಕಳೆದ ಮಳೆಗಾಲದಲ್ಲಿ,ತುರ್ತು ವಾಹನ ರಸ್ತೆಯಲ್ಲಿ ಬಾಕಿಯಾದ ಕಾರಣ ಅಜ್ಜಾವರ ಗ್ರಾ.ಪಂ ಅಧ್ಯಕ್ಷೆ ಸತ್ಯವತಿ ಬಸವನಪಾದೆ ಸುಮಾರು ಹತ್ತು ಸಾವಿರ ರೂ. ನೀಡಿದ್ದರು. ಇದರೊಂದಿಗೆ ಸಾರ್ವಜನಿಕರೇ ತಮ್ಮ ಹಣವನ್ನೂ ಸೇರಿಸಿ ಒಂದು ಲೋಡ್ ಜಲ್ಲಿ ಮತ್ತು ಜೆಸಿಬಿ ಯಂತ್ರದ ಮೂಲಕ ತಾತ್ಕಾಲಿಕ ದುರಸ್ತಿ ಮಾಡಿಸಿದ್ದರು.

ಸುಳ್ಯದಲ್ಲಿ ನಡೆದ ಜಿಲ್ಲಾ ಜನಸಂಪರ್ಕ ಸಭೆಯಲ್ಲಿ ರಸ್ತೆ ಅಭಿವೃದ್ಧಿ ಪಡಿಸುವಂತೆ ಮನವಿ ಸಲ್ಲಿಸಲಾಗಿತ್ತು. ಅದಕ್ಕೆ ಯಾವುದೇ ಸ್ಪಂದನೆ ಇದುವರೆಗೂ ಸಿಕ್ಕಿಲ್ಲ. ಇನ್ನಾದರೂ ಎಚ್ಚೆತ್ತು ಈ ರಸ್ತೆ ಅಭಿವೃದ್ಧಿ ಪಡಿಸುತ್ತಾರೋ ಎಂಬ ನಿರೀಕ್ಷೆಯಲ್ಲಿದ್ದಾರೆ ಇಲ್ಲಿನ ನಾಗರಿಕರು.

ಸಮಸ್ಯೆ ತಿಳಿದ ಸಚಿವರೂ ಸ್ಪಂದಿಸಲಿಲ್ಲ

ಕೆಲ ವರ್ಷಗಳ ಹಿಂದೆ ಮಾಜಿ ಸಚಿವ ಎಸ್.ಅಂಗಾರ ಸ್ಥಳಕ್ಕೆ ಭೇಟಿ ನೀಡಿ ರಸ್ತೆಗೆ ಡಾಂಬರೀಕರಣ ನಡೆಸಲು ಅನುದಾನ ನೀಡುವುದಾಗಿ ತಿಳಿಸಿ ಜನರ ಸಮಸ್ಯೆಗಳನ್ನು ಆಲಿಸಿ ತೆರಳಿದ್ದರು. ಬಳಿಕ 80 ಲಕ್ಷ ರೂ. ಅನುದಾನ ಇತರ ಮೂರು ಕಡೆಗಳಿಗೆ ರಸ್ತೆ ಅಭಿವೃದ್ಧಿಗಾಗಿ ಹಂಚಲಾಯಿತು. ಕೊನೆಗೂ ಕರ್ಲಪ್ಪಾಡಿಯ ಈ ರಸ್ತೆ ಅಭಿವೃದ್ಧಿಗೆ ಕಿಂಚಿತ್ತೂ ಸಿಗದಂತಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net