ಸಂತ ಅಲೋಶಿಯಸ್ ಪಪೂ ಕಾಲೇಜಿನಲ್ಲಿ ಓಣಂ ಸಂಭ್ರಮ

onam
Published on

ಮಂಗಳೂರು: ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ಮಲಯಾಳಂ ಸಂಘದ ವತಿಯಿಂದ ಕಾಲೇಜಿನ ಸೋಪಾಂಗಣದಲ್ಲಿ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾಲೇಜಿನ ಪ್ರಾಚಾರ್ಯರಾದ ರೆ| ಫಾ| ಕ್ಲಿಫರ್ಡ್ ಸಿಕ್ವೇರಾ ಎಸ್ ಜೆ ಮಾತನಾಡಿ, ಹಬ್ಬಗಳು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಾಕಾರಗೊಳಿಸುವುದು ಮಾತ್ರವಲ್ಲದೆ ಭಾಷೆಗಳು, ಪಾಕಶಾಲೆಯ ಸಂಪ್ರದಾಯಗಳು, ಪದ್ಧತಿಗಳು, ಹಬ್ಬಗಳು ಮತ್ತು ಧರ್ಮಗಳಲ್ಲಿ ಅದರ ವಿಶಾಲವಾದ ವೈವಿಧ್ಯತೆಯಿಂದ ನಿರೂಪಿಸಲ್ಪಟ್ಟಿದೆ. ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ಆಚರಣೆಗಳ ವಿನಿಮಯದ ಮೂಲಕ ಆಳವಾದ ತಿಳುವಳಿಕೆ ಮತ್ತು ಪರಸ್ಪರ ಗೌರವವನ್ನು ಬೆಳೆಸುವ ಮೂಲಕ ನಮ್ಮ ಭಿನ್ನಾಭಿಪ್ರಾಯಗಳನ್ನು ಆಚರಿಸಲು ಭಾರತದ ಸಾಟಿಯಿಲ್ಲದ ವೈವಿಧ್ಯತೆಯು ಒಂದು ಅನನ್ಯ ಅವಕಾಶವನ್ನು ನೀಡುತ್ತದೆ ಓಣಂ ಆಚರಣೆಯು ನಿಜವಾದ ಸಂತೋಷ, ಸೌಹಾರ್ದತೆ ಮತ್ತು ಒಗ್ಗಟ್ಟಿನ ಮನೋಭಾವದಿಂದ ಕೂಡಿದ್ದು ಇತ್ತೀಚಿನ ಪ್ರತಿಕೂಲ ಪರಿಸ್ಥಿತಿಗಳಿಂದ ಚೇತರಿಸಿಕೊಳ್ಳುತ್ತಿರುವ ವಯನಾಡಿನ ಜನರನ್ನು ಸ್ಮರಿಸಬೇಕು ಎಂದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ನಡೆದ ಚೆಂಡೆ ಪ್ರದರ್ಶನ, ಕೇರಳದ ಸಾಂಪ್ರದಾಯಿಕ ನೃತ್ಯದ ಪ್ರದರ್ಶನ, ಬಲಿ ಚಕ್ರವರ್ತಿಯ ಕಥಾನಕಗಳು ಎಲ್ಲರ ಮನಸೂರೆಗೊಂಡಿತು.

ಈ ಸಂದರ್ಭದಲ್ಲಿ ಕಾಲೇಜಿನ ವಿತ್ತಾಧಿಕಾರಿ ರೆ| ಫಾ| ಪ್ರದೀಪ್ ಸಿಕ್ವೇರಾ ಎಸ್ ಜೆ, ಕ್ಯಾಂಪಸ್ ಮಿನಿಸ್ಟರ್ ರೆ| ಫಾ| ಆ್ಯಂಟನಿ ಡೆರಿಕ್ ಎಸ್ ಜೆ, ಉಪಪ್ರಾಚಾರ್ಯೆ ವಿಲ್ಮಾ ಫೆರ್ನಾಂಡಿಸ್, ಡೀನ್ ಡಾ. ಪ್ರದೀಪ್ ಎಂ ಹಾಗೂ ಕಿರಣ್ ಶೆಟ್ಟಿ, ಕಾರ್ಯಕ್ರಮ ಸಂಯೋಜಕರಾದ ಮೇರಿ ಕೆ ಎಫ್, ಡಯಾನ ಮೇರಿ ಜೋಸೆಫ್, ದೀಪ್ತಿ ಮುರುಗೇಶನ್, ಉಪಸ್ಥಿತರಿದ್ದರು.

ಓಣಂ ಹಬ್ಬದ ಪ್ರಯುಕ್ತ ಪಾಯಸ ತಯಾರಿ ಸ್ಪರ್ಧೆ ಹಾಗೂ ಪೂಕಳಂ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಮಲಯಾಳಂ ಸಂಘದ ವಿದ್ಯಾರ್ಥಿ ಕಾರ್ಯದರ್ಶಿ ಜಿಯಾ ಆನ್ ಸ್ವಾಗತಿಸಿದರು. ಶ್ರುತಿ ಕೆ ಆರ್ ಹಾಗೂ ಅಮೀನಾ ಝೆಬಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net