

ಪಾಂಡವಪುರ: ಪಟ್ಟಣದ ಪಾಂಡವ ಕ್ರೀಡಾಂಗಣ ಕನಿಷ್ಠ ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ಕ್ರೀಡಾಪಟುಗಳು ಸೇರಿದಂತೆ ಯಾರಿಗೂ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿದೆ.
ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಕ್ರೀಡಾಪಟುಗಳು, ವಿದ್ಯಾರ್ಥಿಗಳು ಮತ್ತು ವಾಯು ವಿಹಾರಿಗಳಿಂದ ತುಂಬಿ ತುಳುಕುತ್ತಿದ್ದ ಕ್ರೀಡಾಂಗಣಕ್ಕೆ ಮೂಲಸೌಕರ್ಯಗಳ ಕೊರತೆ ಎದುರಾಗಿದ್ದು, ಯಾರೂ ಬಾರದೆ ಬಿಕೋ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಪುಂಡ ಪೋಕರಿಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ. ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಅವರ ತವರು ಜಿಲ್ಲೆಯಲ್ಲೇ ಕ್ರೀಡಾಂಗಣದ ಪರಿಸ್ಥಿತಿ ಅಧೋಗತಿಗೆ ತಲುಪಿರುವುದು ಜನರ ಆಕ್ರೋಶಕ್ಕೂ ಕಾರಣವಾಗಿದೆ. ವಿದ್ಯುತ್, ಕುಡಿಯುವ ನೀರು, ಶೌಚಗೃಹ ಸೇರಿದಂತೆ ಯಾವೊಂದು ಕನಿಷ್ಠ ಮೂಲಸೌಕರ್ಯವೂ ಇಲ್ಲದಿರುವುದು ಕ್ರೀಡಾ ಪ್ರೇಮಿಗಳಿಗೆ ಬೇಸರ ತರಿಸಿದೆ.
ವಿಶಾಲವಾದ ಕ್ರೀಡಾಂಗಣದಲ್ಲಿ ಹೈಮಾಸ್ಟ್ ದೀಪ ಹಾಗೂ ವಾಲಿಬಾಲ್, ಟೆನಿಸ್ ಕೋರ್ಟ್‌ಗಳಿಗೆ ವಿದ್ಯುತ್ ದೀಪ ಅಳವಡಿಸಲಾಗಿದೆ. ಆದರೆ ವಿದ್ಯುತ್ ಬಿಲ್ ಪಾವತಿಸದ ಕಾರಣ ಸೆಸ್ಕ್ ಅಧಿಕಾರಿಗಳು ಸಂಪರ್ಕ ಕಡಿತಗೊಳಿಸಿದ್ದಾರೆ. ಪರಿಣಾಮ, ರಾತ್ರಿಯಾದರೆ ಇಡೀ ಕ್ರೀಡಾಂಗಣ ಕಗ್ಗತ್ತಲಿನಲ್ಲಿ ಮುಳುಗುತ್ತದೆ. ಮುಂಜಾನೆ ಮತ್ತು ಸಂಜೆಯಿಂದ ರಾತ್ರಿ 8 ಗಂಟೆವರೆಗೆ ಕ್ರೀಡಾಂಗಣದಲ್ಲಿ ವಿವಿಧ ಕ್ರೀಡೆಗಳನ್ನು ಅಭ್ಯಾಸ ಮಾಡುತ್ತಿದ್ದ ಕ್ರೀಡಾಪಟುಗಳಿಗೆ ತೊಂದರೆಯಾಗಿದೆ.
ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡಿ ದಣಿದ ಕ್ರೀಡಾಪಟುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕೂಡ ಇಲ್ಲವಾಗಿದೆ. ಶೌಚಗೃಹವಿದ್ದರೂ ನಿರ್ವಹಣೆ ಇಲ್ಲದೆ ಸಂಪೂರ್ಣ ಹಾಳಾಗಿದೆ. ಒಟ್ಟಿನಲ್ಲಿ ಕನಿಷ್ಠ ಮೂಲಸೌಕರ್ಯವಿಲ್ಲದ ಪಾಂಡವ ಕ್ರೀಡಾಂಗಣ ಕೇವಲ ಆಟದ ಮೈದಾನದಂತಾಗಿದೆ.
ಪುರಸಭೆ ಅಧಿಕಾರಿಗಳು ನಿರಾಕರಣೆ: ಕ್ರೀಡಾಂಗಣದಲ್ಲಿರುವ ಹೈಮಾಸ್ಟ್ ದೀಪ ಇಡೀ ಕ್ರೀಡಾಂಗಣಕ್ಕೆ ಬೆಳಕು ನೀಡುತ್ತಿತ್ತು. ಆದರೆ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಮತ್ತು ಪುರಸಭೆ ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದ ಕ್ರೀಡಾಂಗಣದ ವಿದ್ಯುತ್ ಬಿಲ್ 1.30 ಲಕ್ಷ ರೂ. ಬಾಕಿ ಉಳಿದುಕೊಂಡಿದೆ. ಬಿಲ್ ಪಾವತಿಯಾಗದ ಕಾರಣ ಸೆಸ್ಕ್ ಅಧಿಕಾರಿಗಳು ಕ್ರೀಡಾಂಗಣದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.
ಕ್ರೀಡಾಂಗಣದಲ್ಲಿ 75ನೇ ಸ್ವಾತಂತ್ರ್ಯ ಮಹೋತ್ಸವ ಆಚರಣೆಗಾಗಿ ಕ್ರೀಡಾ ಇಲಾಖೆ 1.30 ಲಕ್ಷ ರೂ. ವಿದ್ಯುತ್ ಬಿಲ್ಲಿನ ಪೈಕಿ ಅರ್ಧದಷ್ಟು ಬಿಲ್ ಪಾವತಿಸಿ ಕಳೆದ ಆ.15ರಂದು ವಿದ್ಯುತ್ ಸಂಪರ್ಕ ಪಡೆದುಕೊಂಡಿತ್ತು. ದಿನಾಚರಣೆ ನಂತರ ಸೆಸ್ಕ್ ಅಧಿಕಾರಿಗಳು ಮತ್ತೆ ಸಂಪರ್ಕ ಕಡಿತಗೊಳಿಸಿರುವ ಪರಿಣಾಮ ಕ್ರೀಡಾಂಗಣ ಮತ್ತೆ ಕಗ್ಗತ್ತಲಿನಲ್ಲಿ ಮುಳುಗಿದೆ.