ಸ್ವಾವಲಂಬಿ ಭಾರತಕ್ಕೆ ರಾಷ್ಟ್ರೀಯ ಶಿಕ್ಷಣ ಭದ್ರ ಬುನಾದಿ ; ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿಕೆ ; ಶಿಕ್ಷಕರ ದಿನಾಚರಣೆಯಲ್ಲಿ ಉತ್ತಮ ಶಿಕ್ಷಕರಿಗೆ ಸನ್ಮಾನ

05Tmk_Teachers_Day 1
Published on

ತುಮಕೂರು;  ದೇಶದ ಶಿಕ್ಷಣ ವ್ಯವಸ್ಥೆಯ ರೂಪವನ್ನು ಸಮಗ್ರವಾಗಿ ಬದಲಾಯಿಸುವ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳಿಗೆ ಪೂರಕವಾದ ಶಿಕ್ಷಣ ಅಡಗಿದೆ ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಭಾರತದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 134ನೇ ಜನ್ಮ ದಿನಾಚರಣೆ, ಶಿಕ್ಷಕರ ದಿನಾಚರಣೆ ಹಾಗೂ ಶಿಕ್ಷಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಶಿಕ್ಷಕರು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರೂಢಿಸಿಕೊಂಡು ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದರು.

ಕಲಿಕೆಯ ಚಿತ್ರಣವನ್ನೇ ಬದಲಿಸಿ, ಶಿಕ್ಷಣವನ್ನು ಸಮಗ್ರವಾಗಿಸಿ ಸ್ವಾವಲಂಬಿ ಭಾರತ ಕಟ್ಟಲು ಭದ್ರ ಬುನಾದಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಸಹಕಾರಿಯಾಗಲಿದೆ. ಶಿಕ್ಷಣ ರಂಗದ ಹಲವು ಸಮಸ್ಯೆಗಳ ನಡುವೆಯೂ ಮಕ್ಕಳಿಗೆ ಅಕ್ಷರ ಬೀಜ ಬಿತ್ತುವ ಮೂಲಕ ಶ್ರೇಷ್ಠ ಸ್ಥಾನದಲ್ಲಿ ನಿಂತಿರುವ ಶಿಕ್ಷಕರು ಮಕ್ಕಳ ಗೆಲುವು ಹಾಗೂ ಸಾಧನೆಗೆ ನಾಂದಿಯಾಗಬೇಕು. ಸಮಾಜಘಾತುಕ ಶಕ್ತಿಗಳ ನಿರ್ನಾಮಕ್ಕೆ ಉತ್ತಮ ಶಿಕ್ಷಣ ಅತ್ಯಗತ್ಯ. ಆ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಮುಖ್ಯ ಎಂದು ತಿಳಿಸಿದರು.

ಅಜ್ಞಾನವೆಂಬ ಅಂಧಕಾರದ ಕತ್ತಲು ಹೊಡೆದೋಡಿಸಿ, ವಿದ್ಯೆಯೆಂಬ ಸುಜ್ಞಾನದ ಬೆಳಕನ್ನು ತರುವ ಶ್ರೇಷ್ಠ ವ್ಯಕ್ತಿಯೇ ಗುರು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು. ಗುರುವಿನ ಸ್ಥಾನದಲ್ಲಿ ತಂದೆ-ತಾಯಿಗಳು, ಶಿಕ್ಷಕರು, ಹಿರಿಯರು, ಹಿತೈಷಿಗಳು, ಸ್ನೇಹಿತರು, ಅಕ್ಷರ ಕಲಿಸಿದವರು ನಿಲ್ಲುತ್ತಾರೆ. ಸಮಾಜಕ್ಕೆ ಹಾಗೂ ನಾಡಿಗೆ ಉತ್ತಮ ಪ್ರಜೆಗಳನ್ನಾಗಿ ಕೊಡುಗೆ ನೀಡಲು ತಮ್ಮ ಜೀವನವನ್ನೇ ಮುಡುಪಾಗಿಟ್ಟಂತಹ ಶಾಲಾ ಶಿಕ್ಷಕರು, ಕಾಲೇಜು ಉಪನ್ಯಾಸಕರು ಹಾಗೂ ಅಧ್ಯಾಪಕ ವರ್ಗದವರು. ಇವರ ಕೊಡುಗೆ ಅಕ್ಷರಶಃ ಸಮಾಜಕ್ಕೆ ಅನನ್ಯ ಎಂದರು.

ಡಿಡಿಪಿಐ ಸಿ.ನಂಜಯ್ಯ, ಡಯಟ್ ಪ್ರಾಂಶುಪಾಲ ಮಂಜುನಾಥ್, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಜಿ.ಆರ್. ಜಯರಾಮ್, ಸಹ ಕಾರ್ಯದರ್ಶಿ ರಾಜಶೇಖರ್, ಜಿಲ್ಲಾಧ್ಯಕ್ಷ ಪರಶಿವಮೂರ್ತಿ, ಖಾಸಗಿ ಅನುದಾನ ರಹಿತ ಶಾಲಾ ಒಕ್ಕೂಟದ ಅಧ್ಯಕ್ಷ ಹಾಲನೂರು ಲೇಪಾಕ್ಷಿ, ಉಮೇಶ್, ತಿಮ್ಮೇಗೌಡ, ಶಂಕರ್ ಲಿಂಗಪ್ಪ, ರವೀಶ್, ಬಿಇಒ ಹನುಮಾನಾಯ್ಕ , ಷಡಕ್ಷರಯ್ಯ, ಶಿವಕುಮಾರ್ ಇದ್ದರು.

18 ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ದಕ್ಷಿಣ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯಲ್ಲಿ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗ ಸೇರಿ ಒಟ್ಟು 18 ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ವಿಭಾಗ: ಪಿ.ನರಸಿಂಹಮೂರ್ತಿ, ರಂಗಸ್ವಾಮಿ , ಎಂ.ಸಿ.ಲೀಲಾವತಿ, ಎಸ್.ಯು. ಶೈಲಾ, ಶ್ರೀರಂಗಮೂರ್ತಿ ಹಾಗೂ ಡಿ.ಪಿ.ಶ್ರೀನಿವಾಸ್ ಹಿರಿಯ ಪ್ರಾಥಮಿಕ ಶಾಲಾ ವಿಭಾಗ: ಎಂ.ಎಸ್.ಯೋಗೀಶ್ ಕುಮಾರ್, ರವೀಶ, ಎಚ್.ಎನ್.ರಾಜಣ್ಣ, ಕೆ.ಎನ್.ನಾಗರಾಜು, ವೆಂಕಟಪ್ಪ ಹಾಗೂ ಎಚ್.ಎನ್.ಸಾವಿತ್ರಮ್ಮ. ಪ್ರೌಢಶಾಲಾ ವಿಭಾಗ: ಕೆ.ಪಿ.ಜಯದೇವಮೂರ್ತಿ, ರಂಗಸ್ವಾಮಯ್ಯ, ಎನ್.ಟಿ.ಪ್ರಸಾದ್ ಕುಮಾರ್, ಎಚ್.ಡಿ.ದೇವರಾಜು, ರಾಮಯ್ಯ ಹಾಗೂ ಎನ್.ಆರ್.ಷಣ್ಮುಖ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಖಾಸಗಿ ಶಾಲೆಗಳ ಶಿಕ್ಷಕರಾದ ಎನ್.ಶ್ವೇತಾ, ಪಿ.ಎಲ್.ಚಾಲ್ಸ್ ಸ್ಟೀಫನ್, ಎಸ್.ಲತಾ, ಡಿ.ಮಹೇಶ್, ಎಂ.ಪಿ.ಕಲ್ಪನಾ, ಬಿ.ಜೆ.ರವಿ, ಮಾಲತಿ ಜೆ. ರಾಜ್, ಬಿ.ಪಿ.ಶೋಭಾ, ರತ್ನಮ್ಮ, ಗೀತಾಂಜಲಿ, ಬಿ.ವಿ.ಶ್ರೀದೇವಿ, ಪಿ.ಆರ್.ಶಾರದಾ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net