ವಿಜಯವಾಣಿ ಸುದ್ದಿಜಾಲ, ಶನಿವಾರಸಂತೆ: ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ವೈದ್ಯೆ ಮೇಲೆ ದುಷ್ಕರ್ಮಿಗಳು ಅತ್ಯಾಚಾರ, ಹತ್ಯೆ ನಡೆಸಿದ ಪ್ರಕರಣ ಖಂಡಿಸಿ ದೇಶವ್ಯಾಪ್ತಿ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆ ವೈದ್ಯರ ಸಂಘಟನೆಗಳು ಕರೆ ನೀಡಿದ್ದ ಮುಷ್ಕರಕ್ಕೆ ಶನಿವಾರಸಂತೆಯಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿತ್ತು. ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಆಸ್ಪತ್ರೆಗೆ ಕರ್ತವ್ಯ ಬಹಿಷ್ಕರಿಸಿದ ಸರ್ಕಾರಿ ವೈದ್ಯರು, ಖಾಸಗಿ ಕ್ಲಿನಿಕ್‌ಗಳ ತಜ್ಞರು, ಆಸ್ಪತ್ರೆ ಸಿಬ್ಬಂದಿ ಮುಷ್ಕರದಲ್ಲಿ ಭಾಗವಹಿಸಿ ದುಷ್ಕರ್ಮಿಗಳ ಕೃತ್ಯ ಖಂಡಿಸಿದರು. ನರ್ಸ್‌ಗಳು ಮತ್ತು ತುರ್ತು ಆರೋಗ್ಯ ಸೇವೆ ಸಿಬ್ಬಂದಿ ಕೈಗೆ ಕಪ್ಪುಪಟ್ಟಿ ಧರಿಸಿ ಕೆಲಸ ನಿರ್ವಹಿಸಿದರು. ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲೂ ವೈದ್ಯರು ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಆಸ್ಪತ್ರೆ ಮುಂಭಾಗದ ಬಾಗಿಲನ್ನು ಮಾತ್ರ ಬಂದ್ ಮಾಡಲಾಗಿತ್ತು. ಆಸ್ಪತ್ರೆ ಮುಂಭಾಗ ಸಾಂಕೇತಿಕ ಪ್ರತಿಭಟನೆ ನಡೆಸಿದ ದಾದಿಯರು ಮತ್ತು ಸಿಬ್ಬಂದಿ, ಹೊರ ರೋಗಿಗಳಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದರು. ಆದರೆ ಆಸ್ಪತ್ರೆಯಲ್ಲಿ ತುರ್ತು ಸೇವೆ ಲಭ್ಯ ಇರಲಿಲ್ಲ. ಶನಿವಾರಸಂತೆಯ ಕೆಲವು ಖಾಸಗಿ ಕ್ಲಿನಿಕ್‌ನ ವೈದ್ಯರು ಬಾಗಿಲು ಬಂದ್‌ಗೊಳಿಸಿ ಬಂದ್‌ಗೆ ಬೆಂಬಲ ವ್ಯಕ್ತ ಪಡಿಸಿದ್ದು ಕಂಡು ಬಂತು.