ಎಸ್ಸೆಸ್ಸೆಲ್ಸಿ ಟಾಪರ್ಸ್‌ಗಳಿಗೆ ಮೈಸೂರು ಜಿಲ್ಲಾಡಳಿತದಿಂದ ಸನ್ಮಾನ

sslc toppers felicitated by mysore district administration
Published on

ಮೈಸೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಟಾಪ್-10 ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಶನಿವಾರ ಜಿಲ್ಲಾಡಳಿತ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಎಸ್ಸೆಸ್ಸೆಲ್ಸಿ ಎಂಬುದು ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದ್ದು, ಈ ಪರೀಕ್ಷೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ತೆಗೆದು ಸಾಧನೆ ಮಾಡಿದ್ದಾರೆ. ಈ ಯಶಸ್ಸು ನಿಮ್ಮ ಮುಂದಿನ ಗುರಿ ತಲುಪಲು ಸೇತುವೆಯಾಗಿ ಇನ್ನಷ್ಟು ಸಾಧನೆಯ ಗರಿ ನಿಮ್ಮ ಮೂಡಿಗೇರಲಿ ಎಂದು ಹಾರೈಸಿದರು.

ಈ ಫಲಿತಾಂಶದಿಂದ ಮುಂದಿನ ದಿನಗಳಲ್ಲಿ ನಿಮ್ಮ ಮೇಲಿನ ನಿರೀಕ್ಷೆ ಹೆಚ್ಚಾಗಲಿದ್ದು, ಆ ಒತ್ತಡವನ್ನು ಧನಾತ್ಮಕವಾಗಿ ತೆಗೆದುಕೊಂಡು ಮುನ್ನಡೆಯಬೇಕು. ಹಂತ ಹಂತವಾಗಿ ನೋಡಿದಾಗ ಸ್ಪರ್ಧೆ ಹೆಚ್ಚಾಗಿದ್ದು, ಅದರಲ್ಲಿ ನಾವು ಏನು ಅಲ್ಲ ಎಂದೆಂನಿಸುತ್ತದೆ. ಹಾಗಾಗಿ ಮನಸ್ಸನ್ನು ಎಲ್ಲಿಯೂ ಕುಗ್ಗದಂತೆ ನೋಡಿಕೊಂಡು ಗುರಿಯತ್ತ ಸಾಗಬೇಕು ಎಂದು ಹುರಿದುಂಬಿಸಿದರು.

10ನೇ ತರಗತಿಯು ವಿದ್ಯಾರ್ಥಿ ಜೀವನದಲ್ಲಿ ಒಂದು ಪ್ರಮುಖ ಘಟ್ಟವಾಗಿದ್ದು. ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲು ಇದೊಂದು ಉತ್ತಮ ಸಮಯವಾಗಿದೆ. ನಿಮ್ಮ ಗುರಿ ಏನೆಂಬುದನ್ನು ಇಲ್ಲಿಯೇ ಅರಿತು ಅದರೊಂದಿಗೆ ಸಾಗಬೇಕು. ರ‌್ಯಾಂಕ್ ಬಂದ ಕೂಡಲೇ ಮುಂದಿನ ಭವಿಷ್ಯಕ್ಕೆ ಶ್ರಮ ಹಾಕುವುದನ್ನು ನಿಲ್ಲಿಸಬಾರದು. ಬದಲಾಗಿ ದಿನದಿಂದ ದಿನಕ್ಕೆ ಶ್ರಮ ದುಪ್ಪಟ್ಟಾಗಬೇಕು. ಸತತ ಪ್ರಯತ್ನದಿಂದ ಫಲಿತಾಂಶ ದೊರಕುವಂತೆ, ನಿಮ್ಮ ಸಾಧನೆ ಪಾಲಕರಿಗೆ ಹೆಮ್ಮೆ ತರಬೇಕು ಎಂದರು.

ಕಾಲೇಜು ದಿನಗಳಿಗೆ ಕಾಲಿಡುತ್ತಿರುವ ನೀವು ಕೆಲವೊಂದು ವಿಷಯಗಳಿಂದ ಮನಸ್ಸು ಏರು-ಪೇರಾಗುವುದು ಸಹಜ. ಆದರೇ ಯಾವುದೇ ಒತ್ತಡಕ್ಕೆ ಒಳಗಾಗಿ ಕೆಟ್ಟ ಹವ್ಯಾಸಗಳನ್ನು ರೂಢಿಸಿಕೊಳ್ಳಬಾರದು. ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಂಡು ಇತರರಿಗೂ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.

ಕೇವಲ ಓದಿಗಷ್ಟೇ ಸೀಮಿತವಾಗದೆ ಕ್ರೀಡೆ ಇನ್ನಿತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇದರಿಂದ ಮಾನಸಿಕ ಪರಿಸ್ಥಿತಿ ಹಾಗೂ ದೈಹಿಕ ಪರಿಸ್ಥಿತಿ ಉತ್ತಮವಾಗುವುದರ ಜತೆಗೆ ಜೀವನದಲ್ಲಿ ದೊಡ್ಡ ಮಟ್ಟಕ್ಕೆ ತಲುಪಲು ಸಹಾಯ ಮಾಡುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಓದಿನ ಜತೆಗೆ ಒಂದಲ್ಲ ಒಂದು ರೀತಿಯ ಇನ್ನಿತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಉತ್ತಮ ಎಂದು ತಿಳಿಸಿದರು.

ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಮಾದರಿಯನ್ನಾಗಿಸಿಕೊಂಡು ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸುವತ್ತಾ ನಿಮ್ಮ ಗುರಿ ಇರಲಿ. ವಿದ್ಯಾರ್ಥಿಗಳ ಜೀವನ ಎಂಬ ವಿಷಯಕ್ಕೆ ಬಂದರೆ ಪಾಲಕರ ಪಾತ್ರ ಬಹಳ ಮುಖ್ಯವಾಗಿದ್ದು, ಅವರ ಹಾಗುಹೋಗುಗಳನ್ನು ಸದಾ ಗಮನಿಸಿ ಮಾರ್ಗವನ್ನು ಸೂಚಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಗಾಯತ್ರಿ ಮಾತನಾಡಿ, ಪ್ರಮುಖ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾದಾಗ ನಮ್ಮ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಅವುಗಳನ್ನು ಮನಗಂಡು ಯಶಸ್ವಿಯಾಗಿ ನಿರ್ವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಇಷ್ಟು ದಿನ ಇದ್ದಂತಹ ಶಾಲಾ ವಾತಾವರಣವು ಮುಂದಿನ ದಿನಗಳಲ್ಲಿ ಬದಲಾಗುತ್ತದೆ. ವಿಭಿನ್ನ ರೀತಿಯ ವಾತಾವರಣಕ್ಕೆ ಹೊಂದಿಕೊ ಂಡು ಹೋಗಬೇಕಾಗುವ ಸನ್ನಿವೇಶ ಬರುವುದರಿಂದ ಅದಕ್ಕೆ ಎಲ್ಲ ವಿದ್ಯಾರ್ಥಿಗಳು ಮಾನಸಿಕವಾಗಿ ಸಿದ್ಧರಾಗಬೇಕು. ಪ್ರತಿಯೊಬ್ಬರೂ ಸ್ವಯಂ ಜವಾಬ್ದಾರಿ ತೆಗೆದುಕೊಂಡು, ಧೃತಿಗೆಡದೆ ತಮ್ಮ ಕನಸನ್ನು ನನಸು ಮಾಡಿಕೊಳ್ಳುವತ್ತ ಹೆಜ್ಜೆ ಹಾಕಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಪಾಂಡು ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net