

ನರಗುಂದ: ವಿದ್ಯಾರ್ಥಿ ಜೀವನದಲ್ಲಿ ಎಸ್ಸೆಸ್ಸೆಲ್ಲಿ ಮುಖ್ಯ ಹಂತವಾಗಿದೆ. ಅದು ಸಾರ್ಥಕಗೊಳ್ಳಬೇಕಾದರೆ ಮಾರ್ಗದರ್ಶನ ಅಗತ್ಯವಿದೆ. ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪಾಲಕರು ಹಾಗೂ ಶಿಕ್ಷಕರು ಶ್ರಮವಹಿಸಬೇಕು ಎಂದು ಲಯನ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಿ.ಟಿ. ಗುಡಿಸಾಗರ ಹೇಳಿದರು.
ಪಟ್ಟಣದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ 10ನೇ ತರಗತಿಯ ವಿದ್ಯಾರ್ಥಿಗಳ ಪಾಲಕರ ಸಭೆಯಲ್ಲಿ ಮಾತನಾಡಿದ ಅವರು, ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ತಾಯಂದಿರ ಪಾತ್ರ ಪ್ರಮುಖವಾಗಿದೆ. ಈಗಾಗಲೇ ಸಂಬಂಧಿಸಿದ ಪಠ್ಯಗಳ ಅನುಭವ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಗಿದೆ. ಮನೆಯಲ್ಲಿಯೇ ಹೆಚ್ಚಿನ ಸಮಯವನ್ನು ಮಕ್ಕಳು ಕಳೆಯುವುದರಿಂದ ಅವರ ಚಲನವಲನ ಗಮನಿಸಿ ಓದಿನ ಕಡೆಗೆ ಆಸಕ್ತಿವಹಿಸುವಂತೆ ತಿಳಿಹೇಳಬೇಕು. ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಲು ಸಲಹೆಗಳನ್ನು ನೀಡಬೇಕು ಎಂದರು.
ಬೆಳಗ್ಗೆ ಮಕ್ಕಳು ಬೇಗನೆ ಎದ್ದು ಅಧ್ಯಯನದಲ್ಲಿ ತೊಡಗಿಕೊಳ್ಳುವಂತೆ ನೋಡಿಕೊಳ್ಳಬೇಕು. ಮಕ್ಕಳು ಉನ್ನತ ಗುರಿ ಹೊಂದುವುದರ ಕುರಿತು ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.
ಬಿಆರ್‌ಸಿ ಅಧಿಕಾರಿ ಬಿ.ಎಫ್. ಮಜ್ಜಗಿ ಮಾತನಾಡಿ, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪಾಲಕರು ಹೆಚ್ಚಿನ ಸಮಯ ಮೀಸಲಿಡುವ ಮೂಲಕ ಅವರನ್ನು ಸರಿಯಾದ ದಾರಿಗೆ ತರಬೇಕು. ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳುವಂತೆ ಸಲಹೆ ನೀಡಬೇಕೆಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಬಿ.ಆರ್. ರಾಯನಗೌಡ್ರ ಮಾತನಾಡಿ, ಮಕ್ಕಳಲ್ಲಿ ಶಿಸ್ತು ಮತ್ತು ಸಂಯಮ ಕುರಿತು ಪಾಲಕರು ತಿಳಿಹೇಳಬೇಕು. ಆದರ್ಶ ವ್ಯಕ್ತಿಗಳ ಕುರಿತು ಮಕ್ಕಳಿಗೆ ಸರಿಯಾದ ಮಾಹಿತಿ ತಿಳಿಸಿ ಅವರನ್ನು ಅಧ್ಯಯನದಲ್ಲಿ ತೊಡಗುವಂತೆ ಮಾಡಬೇಕು ಎಂದರು.
ಎಚ್.ಟಿ. ಜ್ಞಾನೇಶ್ವರಿ. ಡಾ.ಬಿ.ವೈ. ಹಲಕುರ್ಕಿ, ಎಸ್.ಎಸ್. ನದಾಫ್, ಎಂ. ದಫೇದಾರ ಉಪಸ್ಥಿತರಿದ್ದರು. ಪ್ರಭಾ ಪಾಟೀಲ ಸ್ವಾಗತಿಸಿದರು. ಡಾ.ವೈ.ಪಿ. ಕಲ್ಲನಗೌಡ್ರ ನಿರ್ವಹಿಸಿದರು.