ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬೋಣ- ಶಾಸಕ ಪರಣ್ಣ ಮುನವಳ್ಳಿ ಹೇಳಿಕೆ

Gangavati SSLC Exam Pre-preparation Meeting
ಗಂಗಾವತಿ ತಾಪಂ ಮಂಥನ ಸಭಾಂಗಣದಲ್ಲಿ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವ ಸಿದ್ಧತೆ ಸಭೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್‌ಗಳನ್ನು ಶನಿವಾರ ವಿತರಿಸಲಾಯಿತು.
Published on

ಗಂಗಾವತಿ: ಮುಂಜಾಗ್ರತೆ ಕ್ರಮಗಳೊಂದಿಗೆ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಬೇಕಿದ್ದು, ಪ್ರಮುಖ ಇಲಾಖೆ ಸಹಯೋಗದೊಂದಿಗೆ ಪರೀಕ್ಷೆ ಯಶಸ್ವಿಗೊಳಿಸೋಣ ಎಂದು ಶಾಸಕ ಪರಣ್ಣಮುನವಳ್ಳಿ ಹೇಳಿದರು.

ನಗರದ ತಾಪಂ ಮಂಥನ ಸಭಾಂಗಣದಲ್ಲಿ ಶಿಕ್ಷಣ ಇಲಾಖೆಯಿಂದ ಶನಿವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವ ಸಿದ್ಧತೆ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು. ನಗರ ಸೇರಿ ತಾಲೂಕಿನ 20 ಕೇಂದ್ರಗಳಲ್ಲಿ 6000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದು, ಕರೊನಾ ಮುಂಜಾಗ್ರತೆ ಕ್ರಮ ಹಿನ್ನೆಲೆಯಲ್ಲಿ ಜಾಗೃತಿವಹಿಸಬೇಕಿದೆ. ವಿದ್ಯಾರ್ಥಿಗಳೊಂದಿಗೆ ಪಾಲಕರ ಸಹಕಾರ ಮುಖ್ಯವಾಗಿದ್ದು, ಪೊಲೀಸ್, ತಾಪಂ, ಆರೋಗ್ಯ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಪರೀಕ್ಷೆ ಯಶಸ್ವಿಗೆ ಶ್ರಮಿಸಬೇಕಿದೆ. ಪರೀಕ್ಷೆ ಆರಂಭಕ್ಕೆ ಮುನ್ನ ವಿದ್ಯಾರ್ಥಿಗಳ ಉಷ್ಣಾಂಶ ಪರೀಕ್ಷಿಸಬೇಕಿದ್ದು, ಮಾಸ್ಕ್ ಕಡ್ಡಾಯ ಧರಿಸಲು ಸೂಚಿಸಬೇಕಿದೆ ಎಂದರು.

ಬಿಇಒ ಸೋಮಶೇಖರಗೌಡ ಮಾತನಾಡಿ, ಎಲ್ಲ ಕೇಂದ್ರಗಳಿಗೆ ಸ್ಯಾನಿಟೈಸರ್ ಪೂರೈಸಲು ಇಲಾಖೆಯಿಂದ 130 ಲೀ.ಲಿಕ್ವಿಡ್ ಬಂದಿದ್ದು, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ 8000 ಮಾಸ್ಕ್ ಪಡೆದುಕೊಳ್ಳಲಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎನ್‌ಇಕೆಎಸ್‌ಆರ್‌ಟಿಸಿಯ 52, ಖಾಸಗಿಯ 24 ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಬೇರೆ ಜಿಲ್ಲೆಗಳಿಂದ 121 ವಿದ್ಯಾರ್ಥಿಗಳು ತಾಲೂಕಿನ ಕೇಂದ್ರ ಆಯ್ಕೆ ಮಾಡಿಕೊಂಡಿದ್ದಾರೆ ಎಂದರು. ಥರ್ಮೋ ಸ್ಕ್ರೀನಿಂಗ್, ಸ್ಯಾನಿಟರೈಸ್ ಲಿಕ್ವಿಡ್, ಮೇಲ್ವಿಚಾಕರು ಕೈ ಗವುಸ್ ಸೇರಿ ವಿವಿಧ ವ್ಯವಸ್ಥೆಯ ಬಗ್ಗೆ ಚರ್ಚಿಸಲಾಯಿತು. ತಹಸೀಲ್ದಾರ್ ಎಲ್.ಡಿ.ಚಂದ್ರಕಾಂತ, ತಾಪಂ ಅಧ್ಯಕ್ಷ ಮಹ್ಮದ್ ರಫೀ, ಇಒ ಡಾ.ಮೋಹನ್, ಡಿವೈಎಸ್ಪಿ ಡಾ.ಬಿ.ಪಿ.ಚಂದ್ರಶೇಖರ್, ನಗರಸಭೆ ಪ್ರಭಾರ ಪೌರಾಯುಕ್ತ ಕೆ.ಸಿ.ಗಂಗಾಧರ, ತಾಲೂಕು ವೈದ್ಯಾಧಿಕಾರಿ ಡಾ. ಶರಣಪ್ಪ ಚಕೋಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net