ಅಂಗವಿಕಲರಾದರೂ ಬಿಡದ ಛಲ: ಎಸ್‌ಎಸ್‌ಎಲ್‌ಸಿಯಲ್ಲಿ ಸಾಧನೆ ಮಾಡಿದ ವಿಶೇಷ ಮಕ್ಕಳು

SSLC collage
Published on

ಕಾರವಾರ: ಎರಡೂ ಕೈಗಳಿಲ್ಲ, ಸೊಂಟದ ಕೆಳಭಾಗ ಸ್ವಾಧೀನವೇ ಇಲ್ಲ. ಆದರೆ ಓದಬೇಕು ಎಂಬ ಛಲವನ್ನು ಆತ ಬಿಡಲಿಲ್ಲ. ಶುಕ್ರವಾರ ಪ್ರಕಟವಾದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕಾರವಾರದ ಸರ್ಕಾರಿ ಪ್ರೌಢಶಾಲೆಯ ಅಂಗವಿಕಲ ವಿದ್ಯಾರ್ಥಿ ಗಜೇಂದ್ರ ಮಾಳ್ಸೇಕರ್ ಶೇ.67.5 ರಷ್ಟು ಅಂಕ ಪಡೆದು ಗಮನ ಸೆಳೆದಿದ್ದಾನೆ. ಹುಟ್ಟು ಅಂಗವಿಕಲನಾದ ಆತನನ್ನು ತಾಯಿ ನಾಗವೇಣಿ ಮಾಳ್ಸೇಕರ್ ಸುಮಾರು ಒಂದುವರೆ ಕಿಮೀ ದೂರದಿಂದ ವೀಲ್ ಚೇರ್‌ನಲ್ಲಿ ಕೂರಿಸಿಕೊಂಡು ಬಂದು ಹೈಸ್ಕೂಲ್‌ಗೆ ಬಿಟ್ಟು ಹೋಗುತ್ತಿದ್ದರು. ಆತನಿಗೆ ಬರೆಯಲು ಸಾಧ್ಯವಾಗದು ಆದರೆ, ಶಿಕ್ಷಕರನ್ನು ಪಾಠ ಮಾಡಿದ್ದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಿದ್ದ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇನ್ನೊಬ್ಬರ ಸಹಕಾರ ಪಡೆದು ಪರೀಕ್ಷೆ ಬರೆದ ಆತ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿ ಸಾಧನೆ ಮಾಡಿದ್ದಾನೆ. ವಿಶೇಷ ತರಗತಿ ಇದ್ದಾಗ ತಾಯಿಯೂ ಆತನ ಜತೆ ಬಂದು ಕೂರುತ್ತಿದ್ದರು ಎಂದು ಹೈಸ್ಕೂಲ್‌ನ ಶಿಕ್ಷಕರು ಆತನ ಹಾಗೂ ತಾಯಿಯ ಪ್ರಯತ್ನವನ್ನು ನೆನಪಿಸಿಕೊಳ್ಳುತ್ತಾರೆ. ಕಿವುಡ ಮೂಕ ಮಕ್ಕಳ ಸಾಧನೆ ಕೇಳಲು, ಮಾತನಾಡಲು ಬಾರದ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಮಾನ್ಯ ವಿದ್ಯಾರ್ಥಿಗಳ ಸರಿ ಮಿಗಿಲಾಗಿ ಸಾಧನೆ ಮಾಡಿದ್ದಾರೆ. ಕಾರವಾರ ಆಶಾನಿಕೇತನ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯು ಶೇ.100 ರಷ್ಟು ಫಲಿತಾಂಶ ಪಡೆದಿದೆ. ಪರೀಕ್ಷೆಗೆ ಕುಳಿತ ಎಲ್ಲ 11 ಮಕ್ಕಳು ಉತ್ತೀರ್ಣರಾಗಿದ್ದಾರೆ. ಅದರಲ್ಲಿ ಇಬ್ಬರು ಎ ಗ್ರೇಡ್‌ನೊಂದಿಗೆ ಉತ್ತೀರ್ಣರಾಗಿದ್ದಾರೆ. ಪ್ರೇರಣಾ ಜೇಮ್ಸ್ ಶೇ.76 ಅಂಕ ಪಡೆದು ಶಾಲೆಗೆ ಮೊದಲ, ರೇಷ್ಮಾ ಕಾಟ್ರೋಟ್ ಶೇ.71.29 ರಷ್ಟು ಅಂಕ ಪಡೆದು ಶಾಲೆಗೆ ದ್ವಿತೀಯ ಹಾಗೂ ಚಿತ್ರಾ ಕೊಲಾಲ್ ಶೇ.69.4 ರಷ್ಟು ಅಂಕ ಪಡೆದು ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾಳೆ.

ಬಡ ಮಕ್ಕಳ ಸಾಧನೆ ಇಲ್ಲಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹೊರ ಜಿಲ್ಲೆ, ರಾಜ್ಯಗಳಿಂದ ಬರುವ ಕೂಲಿಕಾರರ ಮಕ್ಕಳು ಕಲಿಯುತ್ತಿದ್ದಾರೆ. ಅದರಲ್ಲಿ ಕೆಲ ಮಕ್ಕಳು ಗಮನ ಸೆಳೆಯುವ ಅಂಕ ಪಡೆದಿದ್ದಾರೆ. ಸರ್ಕಾರಿ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಕುಳಿತ 30 ರಲ್ಲಿ 22 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅದರಲ್ಲಿ ಹುಲಿಗೆಮ್ಮ ಮೂಲಿಮನಿ ಎಂಬ ವಿದ್ಯಾರ್ಥಿನಿ ಶೇ.82 ಅಂಕ ಪಡೆದು ಶಾಲೆಗೆ ಮೊದಲ ಬಸವರಾಜ ಭಂಡಾರಿ ಶೇ.81.44 ರಷ್ಟು ಅಂಕ ಪಡೆದು ಶಾಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಪಾಲಕರು ಕೂಲಿ ಕೆಲಸಕ್ಕಾಗಿ ಬಂದು ಇಲ್ಲಿ ವಾಸ್ತವ್ಯ ಹೂಡಿದವರಾಗಿದ್ದಾರೆ. ಗೋವಾದ 17 ವಿದ್ಯಾರ್ಥಿಗಳು ಉತ್ತೀರ್ಣ ಗೋವಾದಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರೌಢ ಶಿಕ್ಷಣ ಪಡೆದು, ಕರ್ನಾಟಕ ಎಸ್‌ಎಸ್‌ಎಲ್‌ಸಿ ಬೋರ್ಡ್ನಿಂದ ಪರೀಕ್ಷೆ ಬರೆದ 17 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಗೋವಾ ವಾಸ್ಕೋದ ಝುವಾರಿ ಹಾಗೂ ಬೈನಾದಲ್ಲಿ ಯಲ್ಲಾಲಿಂಗೇಶ್ವರ ಶಿಕ್ಷಣ ಸಂಸ್ಥೆಯಿಂದ ಎರಡು ಪ್ರತ್ಯೇಕ ಕನ್ನಡ ಮಾಧ್ಯಮ ಶಾಲೆಗಳು ನಡೆಯುತ್ತಿವೆ. ಒಂದು ಶಾಲೆಯಿಂದ 12 ಹಾಗೂ ಇನ್ನೊಂದು ಶಾಲೆಯಿಂದ 19 ಸೇರಿ ಒಟ್ಟು 31 ವಿದ್ಯಾರ್ಥಿಗಳು ಕಾರವಾರದ ಉಳಗಾದ ಮಹಾಸತಿ ಪ್ರೌಢಶಾಲೆಗೆ ಪ್ರತಿ ದಿನ ವಾಹನದಲ್ಲಿ ಬಂದು ಪರೀಕ್ಷೆ ಬರೆಯುತ್ತಿದ್ದರು. 30 ರಲ್ಲಿ 17 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net